ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಟಿ ಕೊಟ್ಟರೂ ಪ್ರೀತಿಯಿಂದ ಸ್ವೀಕರಿಸುವ ಕೃಷ್ಣ

ಕೃಷ್ಣಾಪುರ ಮಠದ ಸುಧಾಮ ಉಗ್ರಾಣಕ್ಕೆ ಹರಿದು ಬಂದ ಹೊರೆಕಾಣಿಕೆ
Last Updated 17 ಜನವರಿ 2022, 19:31 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ಪರ್ಯಾಯ ಮಹೋತ್ಸವದಲ್ಲಿ ಹೊರೆಕಾಣಿಕೆ ಸಲ್ಲಿಕೆಗೆ ವಿಶೇಷ ಮಹತ್ವವಿದೆ. ಭಕ್ತರು ಇಂತಿಷ್ಟೆ ಹೊರೆಕಾಣಿಕೆ ಸಲ್ಲಿಸಬೇಕು ಎಂಬ ಯಾವ ನಿಯಮವೂ ಇಲ್ಲಿಲ್ಲ. ಪ್ರೀತಿ ಹಾಗೂ ಭಕ್ತಿಯಿಂದ ಮುಷ್ಟಿ ಹೊರೆಕಾಣಿಕೆ ಕೊಟ್ಟರೂ ಕೃಷ್ಣ ಪ್ರೀತಿಯಿಂದ ಸ್ವೀಕರಿಸಿ ಒಲಿಯುತ್ತಾನೆ ಎಂಬ ಮಾತಿದೆ.

ಕೃಷ್ಣಾಪುರ ಮಠದ ಪರ್ಯಾಯ್ಕೆ ಭಕ್ತರು ನಿರೀಕ್ಷೆಗೂ ಮೀರಿ ಹೊರೆಕಾಣಿಕೆ ಸಲ್ಲಿಸುತ್ತಿದ್ದಾರೆ. ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದಲ್ಲಿ ಹೊರೆಕಾಣಿಕೆ ಸ್ವೀಕಾರಕ್ಕೆ ತೆರೆಯಲಾಗಿರುವ ‘ಸುಧಾಮ’ ಉಗ್ರಾಣವು ಭಕ್ತರ ಹೊರೆಕಾಣಿಕೆ ಪ್ರೀತಿಯಿಂದ ತುಂಬಿ ತುಳುಕುತ್ತಿದೆ.

ಜ.11ರಿಂದ 16 ರವರೆಗೆ 94,375 ಕೆ.ಜಿ ಅಕ್ಕಿ, 33,266 ಕೆ.ಜಿ ಬೆಲ್ಲ, 1,69,215 ತೆಂಗಿನಕಾಯಿ, 5,116 ಕೆ.ಜಿ ಸಕ್ಕರೆ, 2,254 ಕೆಜಿ ಬೇಳೆಕಾಳು, 635 ಕೆ.ಜಿ ಅವಲಕ್ಕಿ, 20 ಕೆ.ಜಿ ಅರಳು, 453 ಟಿನ್ ಎಣ್ಣೆ, 15,510 ಕೆ.ಜಿ ತುಪ್ಪ, 42 ಕೆ.ಜಿ ಕೊತ್ತಂಬರಿ, 20 ಕೆ.ಜಿ ಜೀರಿಗೆ, 15 ಕೆ.ಜಿ. ಮೆಣಸು, 15 ಕೆ.ಜಿ ಶುಂಠಿ, 50 ಕೆ.ಜಿ ರವೆ, 95 ಕೆ.ಜಿ. ಗೋದಿ ಹಿಟ್ಟು, 500 ಬಾಳೆಗೊನೆ, 2000 ಸಿಯಾಳ, 71 ಅಡಿಕೆ ಗೊನೆ, , 10,042 ಕೆ.ಜಿ. ಕುಂಬಳ ಹಾಗೂ ತರಕಾರಿ, 10,050 ಕೆ.ಜಿ ಗೆಡ್ಡೆ ಗೆಣಸು, 6 ಕೆ.ಜಿ ಎಳ್ಳನ್ನು ಭಕ್ತರು ಹೊರೆಕಾಣಿಕೆ ರೂಪದಲ್ಲಿ ಸಲ್ಲಿಕೆ ಮಾಡಿದ್ದಾರೆ.

ಜಿಲ್ಲೆಯ ಪ್ರತಿ ಗ್ರಾಮದಿಂದಲೂ ಪರ್ಯಾಯಕ್ಕೆ ಹೊರೆಕಾಣಿಕೆ ಹರಿದು ಬರುವುದು ವಿಶೇಷ. ಸಂಘ ಸಂಸ್ಥೆಗಳು, ಉದ್ಯಮಿಗಳು ಸಾಮರ್ಥ್ಯಕ್ಕೆ ಅನುಗುಣವಾಗಿ ಹೊರೆಕಾಣಿಕೆ ಸಲ್ಲಿಸುತ್ತಾರೆ. ಇನ್ನು ಹೊರೆ ಜಿಲ್ಲೆಗಳಿಂದಲೂ ನೂರಾರು ಭಕ್ತರು ಹೊರೆಕಾಣಿಕೆ ಸಲ್ಲಿಸಿ ಕೃಷ್ಣನಿಗೆ ಭಕ್ತಿ ಸಮರ್ಪಿಸುತ್ತಾರೆ.

ಮೊದಲ ಹೊರೆಕಾಣಿಕೆ:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೃಷ್ಣಾಪುರ ಪರ್ಯಾಯೋತ್ಸವಕ್ಕೆ ಮೊದಲ ಹೊರೆಕಾಣಿಕೆ ಸಲ್ಲಿಕೆಯಾಗಿದ್ದು, ಜ.11 ಉಡುಪಿ, ಬ್ರಹ್ಮಾವರ, ಕಾರ್ಕಳ, ಮೂಡುಬಿದಿರೆ, ಕುಂದಾಪುರ, ಬೈಂದೂರು ತಾಲ್ಲೂಕು ವ್ಯಾಪ್ತಿಯ 70,000ಕ್ಕಿಂತಲೂ ಹೆಚ್ಚಿನ ಸಂಘದ ಸದಸ್ಯರು ಹೊರೆಕಾಣಿಕೆ ಸಲ್ಲಿಸಿರುವುದು ವಿಶೇಷ.

12ರಂದು ಬೈಂದೂರು ತಾಲ್ಲೂಕಿನ ವಂಡ್ಸೆ, ಕೊಲ್ಲೂರು, ತ್ರಾಸಿ, ಗಂಗೊಳ್ಳಿ, ಕಾವ್ರಾಡಿ,  ಸೌಕೂರು, ಸಿದ್ದಾಪುರ ವಲಯ, ಕುಂದಾಪುರ ತಾಲ್ಲೂಕಿನ ಬಸ್ರೂರು, ಬಳ್ಕೂರು, ಕೋಟೇಶ್ವರ ಕುಂಭಾಶಿ, ಬೀಜಾಡಿ, ಗೋಪಾಡಿ, ತೆಕ್ಕಟ್ಟೆ, ಉಳ್ತೂರು, ಕೋಣಿ, ಕಾಳಾವರ, ಉಡುಪಿ ತಾಲ್ಲೂಕಿನ ಪರ್ಕಳ, ಹೆಗ್ರ, ಈಶ್ವರ ನಗರ, ಮಣಿಪಾಲ, ಸರಳೆಬೆಟ್ಟು, ಇಂದ್ರಾಳಿ, ಸಗ್ರಿ, ಕಕ್ಕುಂಜೆ, ಗುಂಡಿಬೈಲು, ಕರಂಬಳ್ಳಿ, ಪೆರಂಪಳ್ಳಿ, ಕುಂಜಿಬೆಟ್ಟು ವಲಯದಿಂದ ಹೊರೆಕಾಣಿಕೆ ಸಲ್ಲಿಕೆಯಾಗಿದೆ.

13ರಂದು ಕಾರ್ಕಳ ತಾಲ್ಲೂಕಿನ ಬೆಳ್ಮಣ್ಣು, ಮಂಡ್ಕೂರು, ಇನ್ನಾ, ನಿಟ್ಟೆ, ಬೋಳ, ಸೂಡಾ, ನಂದಳಿಕೆ, ಕಾಪು ತಾಲ್ಲೂಕಿನ ಪುಡಬಿದ್ರಿ, ಎರ್ಮಾಳು, ಉಚ್ಚಿಲ, ಕಾಪು, ಶಿರ್ವ, ಮೂಡುಬೆಳ್ಳೆ, ಅಲೆವೂರು, ಉದ್ಯಾವರ, ಎಲ್ಲೂರು ಕಳತ್ತೂರು, ಫಲಿಮಾರು ವಲಯಗಳಿಂದ ಭಕ್ತರು ಹೊರೆಕಾಣಿಕೆ ಸಲ್ಲಿಸಿದ್ದಾರೆ.

14ರಂದು ಬ್ರಹ್ಮಾವರ, ಮಂದಾರ್ತಿ, ಕೊಕ್ಕರ್ಣೆ, ಕೋಟ, ಹಾಲಾಡಿ, ಅಮಾಸೆಬೈಲು, ಗೋಳಿಯಂಗಡಿ, ಬಾರ್ಕೂರು ಸ್ಯಾಬ್ರಕಟ್ಟೆ, ಪೇತ್ರಿ ಶಿರಿಯಾರ, ಅಜೆಕಾರು, ಬೈಲೂರು, ಹಿರಿಯಡಕ, ಆತ್ರಾಡಿ, ಬಡಗಬೆಟ್ಟು, ಪೆರ್ಣಂಕಿಲ, ಹಿರೇಬೆಟ್ಟು, ಹಾವಂಜೆ, ಉಪ್ಪೂರು, ಸಂತೆಕಟ್ಟೆ, ಕೊಡವೂರು, ಬಡಾನಿಡಿಯೂರು, ಮಲ್ಪೆ, ಪಡುಕೆರೆ, ಬನ್ನಂಜೆ, ಶಿರಿಬೀಡು, ಕಲ್ಯಾಣಪುರ ವಲಯದಿಂದ ಹೊರೆಕಾಣಿಕೆ ಹರಿದು ಬಂದಿದೆ.

ವಾರಾಂತ್ಯದ ಕರ್ಫ್ಯೂ ಕಾರಣದಿಂದ 15 ಹಾಗೂ 16ರಂದು ಸಲ್ಲಿಕೆಯಾಗಬೇಕಾಗಿದ್ದ ಹೊರೆಕಾಣಿಕೆ 17ರಂದು ಸಲ್ಲಿಕೆಯಾಗಿದ್ದು, ನಿಡಂಬೂರು, ಕನ್ನಾರ್ಪಾಡಿ, ಕಿನ್ನಿಮೂಲ್ಕಿ, ಕಡೆಕಾರು, ಕುತ್ಪಾಡಿ, ಚಿಟ್ಪಾಡಿ, ಬೈಲೂರು, ಅಂಬಲಪಾಡಿ, ಮಟ್ಟುಗುಳ್ಳ, ಕಟಪಾಡಿ, ಪೆರ್ಡೂರು, ಕಾರ್ಕಳ ನಗರ, ಬಜಗೋಳಿ, ಹೆಬ್ರಿ, ಮಂಗಳೂರು, ಕಟೀಲು ಮೂಡಬಿದರೆ, ಮುಲ್ಕಿ ಭಾಗಗಳಿಂದ ಭಕ್ತರು ಹೊರೆಕಾಣಿಕೆ ಸಮರ್ಪಿಸಿದ್ದಾರೆ.

ಜೋಡುಕಟ್ಟೆಯಿಂದ ರಾಶಿ ರಾಶಿ ಹೊರೆಕಾಣಿಕೆಯನ್ನು ಹೊತ್ತ ವಾಹನಗಳು ರಸ್ತೆಯಲ್ಲಿ ಸಾಲಾಗಿ ಸಾಗುವ ದೃಶ್ಯ ಪರ್ಯಾಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಚಂಡೆ, ವಾದ್ಯ ಹಾಗೂ ಕಲಾ ಪ್ರಕಾರಗಳು ಹೊರೆಕಾಣಿಕೆಗೆ ಮತ್ತಷ್ಟು ಮೆರುಗು ತುಂಬುತ್ತವೆ.

ಸುಧಾಮ ಉಗ್ರಾಣದ ಮಹತ್ವ...

ಕೃಷ್ಣಾಪುರ ಮಠದ ಹೊರೆಕಾಣಿಕೆ ಉಗ್ರಾಣಕ್ಕೆ ಸುಧಾಮ ಎಂದು ಹೆಸರಿಡಲಾಗಿದೆ. ಕುಚೇಲ ಗೆಳೆಯನಾದ ಕೃಷ್ಣನಿಗೆ ಇಡಿ ಅವಲಕ್ಕಿಯನ್ನು ಕೊಟ್ಟು ಸಂತೃಪ್ತಗೊಳಿಸಿದಂತೆ ಭಕ್ತರು ಮುಷ್ಟಿ ಹೊರೆಕಾಣಿಕೆಯನ್ನು ಸಲ್ಲಿಸಿಯೂ ದೇವರನ್ನು ಸಂತೃಪ್ತಿಪಡಿಸಬಹುದು ಎಂಬ ಉದ್ದೇಶದಿಂದ ಉಗ್ರಾಣಕ್ಕೆ ಸುಧಾಮ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ ಉಗ್ರಾಣದ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿರುವ ಯುವ ಬ್ರಾಹ್ಮಣ ಪರಿಷತ್‌ ಅಧ್ಯಕ್ಷ ಚೈತನ್ಯ.

‘ಹೊರೆಕಾಣಿಕೆ ಅನ್ನಪ್ರಸಾದಕ್ಕೆ ವಿನಿಯೋಗ’

ಹೊರೆಕಾಣಿಕೆಯಲ್ಲಿ ಸಲ್ಲಿಕೆಯಾದ ಆಹಾರ ಪದಾರ್ಥ ಕೃಷ್ಣಮಠದಲ್ಲಿ ಭಕ್ತರ ಅನ್ನಪ್ರಸಾದಕ್ಕೆ ಸದ್ವಿನಿಯೋಗವಾಗುತ್ತದೆ. ಬೇಗ ಕೆಡುವಂತಹ ತರಕಾರಿ, ತೆಂಗಿನಕಾಯಿ, ಬಾಳೆಹಣ್ಣು ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಮಠಕ್ಕೆ ಆಹಾರ ಪದಾರ್ಥಗಳನ್ನು ಪೂರೈಸುವ ಸಂಸ್ಥೆಗಳಿಗೆ ಕೊಟ್ಟು, ಪರ್ಯಾಯದ ಅವಧಿಯಲ್ಲಿ ಅವರಿಂದ ಅಗತ್ಯಬಿದ್ದಾಗ ಪಡೆದುಕೊಳ್ಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT