ಭಾನುವಾರ, ನವೆಂಬರ್ 29, 2020
24 °C
ಜಿಲ್ಲಾ ಆಸ್ಪತ್ರೆ ನಿರ್ಮಾಣ ಕುರಿತ ಸಭೆಯಲ್ಲಿ ಶಾಸಕ ರಘುಪತಿ ಭಟ್

ನೆಲಮಹಡಿಯಲ್ಲಿ ಅಗತ್ಯ ಆರೋಗ್ಯ ಸೇವೆಗಳು ಸಿಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಆಧುನಿಕವಾದ ಹಾಗೂ ಸುಸಜ್ಜಿತವಾದ ಅಗತ್ಯ ಮೂಲಸೌಲಭ್ಯಗಳನ್ನು ಒಳಗೊಂಡ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜಿಗೆ ಪೂರಕವಾಗಿ ನಿರ್ಮಾಣ ಮಾಡಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನಸಾಮಾನ್ಯರಿಗೆ ಸುಲಭವಾಗಿ ಆರೋಗ್ಯ ಸೇವೆ ಸಿಗುವ ದೃಷ್ಟಿಯಲ್ಲಿ ಕಟ್ಟಡದ ನೀಲನಕ್ಷೆ ತಯಾರಿಸಬೇಕು. ತುರ್ತು ಚಕಿತ್ಸಾ ಘಟಕ, ಹೊರರೋಗಿಗಳ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗ ಶಾಲೆ, ಡಯಾಲಿಸಿಸ್ ಕೇಂದ್ರ, ಐಸಿಯು ಕೇಂದ್ರಗಳು ನೆಲ ಮಹಡಿಯಲ್ಲೇ ನಿರ್ಮಿಸದರೆ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕರು ಸಲಹೆ ನೀಡಿದರು.

250 ಬೆಡ್‌ಗಳ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆಯ ಕಟ್ಟಡ ಹಾಗೂ ಸಿಬ್ಬಂದಿ ವಸತಿಗೃಹವನ್ನು ₹ 115 ಕೋಟಿ ವೆಚ್ಚದಲ್ಲಿ 27,375 ಚ.ಮೀ ವಿಸ್ತೀರ್ಣದಲ್ಲಿ ಕರಾವಳಿ ಭಾಗದ ಹವಾಗುಣಕ್ಕೆ ಅನುಗುಣವಾಗಿ ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕು. ಶೀಘ್ರ ಕಾಮಗಾರಿ ಪ್ರಾರಂಭಿಸಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವ ರೋಗಿಗಳ ಹಾಗೂ ಸಿಬ್ಬಂದಿ ವಾಹನಗಳ ನಿಲುಗಡೆಗೆ ಕಟ್ಟಡದ ನೆಲ ಮಾಳಿಗೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಕಟ್ಟಡ ನಿರ್ಮಾಣ ಕಾಮಗಾರಿಗೆ ಮುನ್ನ ಜಾಗದ ಲಭ್ಯತೆ ಸೇರಿದಂತೆ, ಇತರೆ ಪ್ರಮುಖ ವಿಚಾರಗಳ ಪರಿಶೀಲನೆ  ನಡೆಯಬೇಕು. ಅಧಿಕಾರಿಗಳು ಹಾಗೂ ಕಟ್ಟಡ ನಿರ್ಮಾಣ ಸಮಾಲೋಚಕರು ಸಾಧಕ ಬಾಧಕಗಳ ಕುರಿತು ಚರ್ಚಿಸಿ ನೀಲನಕ್ಷೆಯನ್ನು ಸಿದ್ಧಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಹಾಲಿ ಆಸ್ಪತ್ರೆಯ ಕಟ್ಟಡವನ್ನು ಉಳಿಸಿಕೊಂಡು ಆಸ್ಪತ್ರೆಯ ಹಿಂಭಾಗದ ಖಾಲಿ ಜಾಗದಲ್ಲಿ ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡುವುದರಿಂದ, ಹಾಲಿ ಆಸ್ಪತ್ರೆಯಲ್ಲಿನ ರೋಗಿಗಳ ಚಿಕಿತ್ಸೆಗೆ ತೊಂದರೆ ಉಂಟಾಗುವುದಿಲ್ಲ. ಹಳೆಯ ಕಟ್ಟಡವು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂದರು.

ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನ ಲಭ್ಯವಿದ್ದು, ಸಣ್ಣ–ಪುಟ್ಟ ಕಟ್ಟಡಗಳನ್ನು ತೆರವು ಮಾಡಿದರೆ ನಿವೇಶನದ ವಿಸ್ತೀರ್ಣ ವಿಸ್ತಾರವಾಗುತ್ತದೆ. ಹೊಸ ಕಟ್ಟಡಕ್ಕೆ ಅಗತ್ಯವಿರುವ ರಸ್ತೆ ಕಾಮಾಗಾರಿ ಹೆಚ್ಚುವರಿಯಾಗಿ ಮಾಡಬೇಕಾಗುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ. ನವೀನ್ ಭಟ್, ಹೆಚ್ಚುವರಿ ಜಿಲ್ಲಾದಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡಾ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.