ಸೋಮವಾರ, ಸೆಪ್ಟೆಂಬರ್ 27, 2021
21 °C

ರೆಡ್‌ಕ್ರಾಸ್‌ ಸಭಾಪತಿ ಹುದ್ದೆಗಾಗಿ ಬಣಗಳ ನಡುವೆ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಭಾರತೀಯ ರೆಡ್‌ಕ್ರಾಸ್‌ ಸಭಾಪತಿ ಹುದ್ದೆ ವಿಚಾರವಾಗಿ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಬಸ್ರೂರು ರಾಜೀವ ಶೆಟ್ಟಿ ಬಣಗಳ ನಡುವೆ ಸೋಮವಾರ ರೆಡಕ್ರಾಸ್ ಭವನದಲ್ಲಿ ವಾಗ್ದಾದ ನಡೆಯಿತು. ಪರಿಸ್ಥಿತಿ ಕೈಮೀರುವ ಹಂತ ತಲುಪುವಷ್ಟರಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಡೆದಿದ್ದು ಏನು: ಭಾರತೀಯ ರೆಡ್‌ಕ್ರಾಸ್ ಸಮಿತಿಗೆ ಕಾನೂನು ಬಾಹಿರವಾಗಿ ಸಭಾಪತಿ ನೇಮಕ ಮಾಡಿರುವ ವಿಚಾರ ಸಂಬಂಧ ಮಾಹಿತಿ ನೀಡಲು ಬಸ್ರೂರು ರಾಜೀವ ಶೆಟ್ಟಿ ಹಾಗೂ ಸದಸ್ಯರು ರೆಡ್‌ಕ್ರಾಸ್ ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಈ ಸಂದರ್ಭ ಸ್ಥಳಕ್ಕೆ ಬಂದ ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ರೆಡ್‌ಕ್ರಾಸ್‌ ಸಭಾಪತಿ ತಲ್ಲೂರು ಶಿವರಾಮ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ, ‘ಭಾರತೀಯ ರೆಡ್‌ಕ್ರಾಸ್‌ ನಿಯಮಗಳ ಪ್ರಕಾರ ಟ್ರಸ್ಟ್‌ ರಚಿಸಲು ಅವಕಾಶವಿಲ್ಲದಿದ್ದರೂ ಉಲ್ಲಂಘಿಸಿ ಜ.6, 2020ಕ್ಕೆ ಬಸ್ರೂರು ರಾಜೀವ ಶೆಟ್ಟಿ ಟ್ರಸ್ಟ್‌ ರಚನೆ ಮಾಡಿದ್ದಾರೆ. ರೆಡ್‌ಕ್ರಾಸ್‌ ಚಿಹ್ನೆ ಹಾಗೂ ಹೆಸರನ್ನು ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ನಿಯಮ ಬಾಹಿರವಾಗಿ ಟ್ರಸ್ಟ್ ರಚನೆ ಮಾಡಿದ ಕಾರಣಕ್ಕೆ ಬಸ್ರೂರು ರಾಜೀವ ಶೆಟ್ಟಿ ಅವರನ್ನು ರೆಡ್‌ಕ್ರಾಸ್ ಪ್ರಾಥಮಿಕ ಸದಸ್ಯತ್ವದಿಂದ ರದ್ದು ಮಾಡಲಾಗಿದೆ. ಅವರಿಗೆ ಸಂಸ್ಥೆಯಲ್ಲಿ ಯಾವುದೇ ಅಧಿಕಾರ ಇಲ್ಲ. ಟ್ರಸ್ಟ್‌ ರಚನೆ ಸಂಬಂಧ ರಾಜೀವ ಶೆಟ್ಟಿ ವಿರುದ್ಧ ರಾಜ್ಯ ಸಮಿತಿ ತನಿಖೆ ನಡೆಸುತ್ತಿದೆ ಎಂದು ವಾದಿಸಿದರು.

ಬಳಿಕ ಬಸ್ರೂರು ರಾಜೀವ್ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ ‘ರೆಡ್‌ಕ್ರಾಸ್‌ ಸಂಸ್ಥೆಯ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಿದ ಜಿಲ್ಲಾಧಿಕಾರಿ ನಡೆ ವಿರುದ್ದ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಸದಸ್ಯತ್ವವನ್ನು ಊರ್ಜಿತಗೊಳಿಸಿ ಆದೇಶ ನೀಡಿದೆ. ಸಭಾಪತಿ ಹುದ್ದೆಯಲ್ಲಿ ಮುಂದುವರಿಯುವಂತೆಯೂ ನ್ಯಾಯಾಯಲಯ ಆದೇಶಿಸಿದೆ. ಈ ಸಂಬಂಧ ಅಗತ್ಯ ದಾಖಲೆಗಳು ಇವೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು