ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಪ್ರಮಾಣ ಶೇ 5ಕ್ಕೆ ಇಳಿಸುವ ಗುರಿ

ಸಾರ್ವಜನಿಕ ಗಣೇಶೋತ್ಸವ ಇಲ್ಲ; ಮನೆಯಲ್ಲಿ ಕೂರಿಸಲು ಅಡ್ಡಿ ಇಲ್ಲ; ಜಿಲ್ಲಾಧಿಕಾರಿ ಜಿ.ಜಗದೀಶ್‌
Last Updated 15 ಆಗಸ್ಟ್ 2020, 13:26 IST
ಅಕ್ಷರ ಗಾತ್ರ

ಉಡುಪಿ: ಸಾರ್ವಜನಿಕವಾಗಿ ಸಾಮೂಹಿಕ ಗಣೇಶ ಚತುರ್ಥಿ ಆಚರಣೆ ಮಾಡಲು ಅವಕಾಶವಿಲ್ಲ. ಮನೆಯಲ್ಲಿ ಹಬ್ಬ ಆಚರಿಸಲು ಅಡ್ಡಿ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗಣಪತಿ ದೇವಸ್ಥಾನಗಳಲ್ಲಿ ಪೂಜೆ ಮಾಡಲು ಅವಕಾಶವಿದೆ. ಆದರೆ, ಉತ್ಸವ, ಮೆರವಣಿಗೆ, ಕಾರ್ಯಕ್ರಮ ಆಯೋಜಿಸಲು ಅವಕಾಶವಿಲ್ಲ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಸಾರ್ವಜನಿಕರು ಆದೇಶ ಪಾಲಿಸಬೇಕು ಎಂದರು.

ಮನೆಯಲ್ಲಿ ಗಣೇಶನನ್ನು ಕೂರಿಸಿ, ಬಾವಿಗಳಲ್ಲಿ ವಿಸರ್ಜನೆ ಮಾಡಬಹುದು. ಆದರೆ, ಜಿಲ್ಲಾಡಳಿತದಿಂದ ವಿಸರ್ಜನೆಗೆ ವ್ಯವಸ್ಥೆ ಮಾಡುವುದಿಲ್ಲ ಎಂದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಎಂಬ ಆತಂಕ ಸಾರ್ವಜನಿಕರಲ್ಲಿದೆ. ಸೋಂಕು ನಿಯಂತ್ರಣ ಕೈಮೀರಿಲ್ಲ. ಬದಲಾಗಿ, ಪರೀಕ್ಷೆ ಪ್ರಮಾಣ ಹೆಚ್ಚಾಗಿರುವುದರಿಂದ ಸೋಂಕು ಹೆಚ್ಚಾಗಿ ಪತ್ತೆಯಾಗುತ್ತಿದೆ ಎಂದು ತಿಳಿಸಿದರು.

ಆರಂಭದಲ್ಲಿ ಪ್ರತಿದಿನ 500 ಪರೀಕ್ಷೆ ಮಾಡಿದಾಗ 100 ಜನರಿಗೆ ಸೋಂಕು ಪತ್ತೆಯಾಗುತ್ತಿತ್ತು. ಈಗ 2,500ಕ್ಕೆ ಹೆಚ್ಚಿಸಿರುವುದರಿಂದ ಪ್ರಮಾಣ ಹೆಚ್ಚಾಗಿದೆ. ಸೋಂಕಿನ ಸರಪಳಿ ತುಂಡರಿಸಲು ಪರೀಕ್ಷಾ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.

ಕಳೆದ ತಿಂಗಳು ಶೇ 25ರಷ್ಟಿದ್ದ ಪಾಸಿಟಿವ್ ಪ್ರಮಾಣ, ಸದ್ಯ ಶೇ 10ಕ್ಕಿಳಿದಿದೆ. ತಿಂಗಳಾಂತ್ಯಕ್ಕೆ ಸೋಂಕಿನ ಪ್ರಮಾಣವನ್ನು ಶೇ 5ಕ್ಕೆ ತಗ್ಗಿಸುವ ಗುರಿ ಇದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಕಳೆದ ತಿಂಗಳು ಶೇ 50ಕ್ಕಿಂತ ಹೆಚ್ಚು ಸೋಂಕಿರತರಲ್ಲಿ ರೋಗದ ಗುಣಲಕ್ಷಣ ಕಂಡುಬರುತ್ತಿತ್ತು. ಈಗ ಪ್ರಮಾಣ ಶೇ 10ಕ್ಕಿಳಿದಿದೆ. ಐಸಿಯು ಬೆಡ್‌ಗಳು, ಆಕ್ಸಿಜನ್ ಬೆಡ್‌ಗಳು ಅಗತ್ಯ ಪ್ರಮಾಣದಲ್ಲಿದ್ದು, ಸಾರ್ವಜನಿಕರು ಭಯ ಪಡಬೇಕಿಲ್ಲ ಎಂದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಕೆಲಸ ನಿರ್ವಹಿಸುವ ಜಾಗ, ಕಚೇರಿ, ಕಾರ್ಖಾನೆಗಳನ್ನು ಸೀಲ್‌ಡೌನ್‌ ಮಾಡುವಂತಿಲ್ಲ. ಸೋಂಕು ಪತ್ತೆ ಜಾಗವನ್ನು ಸ್ಯಾನಿಟೈಸ್‌ ಮಾಡುವುದು ಹಾಗೂ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕಡ್ಡಾಯವಾಗಿ ಕ್ವಾರಂಟೈನ್‌ಗೊಳಪಡಿಸಿ ಪರೀಕ್ಷೆಗೊಳಪಡಿಸಾಗುತ್ತಿದೆ. ಜಿಲ್ಲಾಡಳಿತ ತಾರತಮ್ಯ ನೀತಿ ಅನುಸರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT