ಸ್ವಾತಿಗೆ ಸಾಫ್ಟ್‌ವೇರ್ ಇಷ್ಟ, ರಯೀಸಾಗೆ ಮೆಡಿಕಲ್‌ ಆಸಕ್ತಿ

ಗುರುವಾರ , ಏಪ್ರಿಲ್ 25, 2019
27 °C
ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು

ಸ್ವಾತಿಗೆ ಸಾಫ್ಟ್‌ವೇರ್ ಇಷ್ಟ, ರಯೀಸಾಗೆ ಮೆಡಿಕಲ್‌ ಆಸಕ್ತಿ

Published:
Updated:
Prajavani

ಉಡುಪಿ: ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಮೂರನೇ ರ‍್ಯಾಂಕ್‌ ಪಡೆದು ಸಾಧನೆ ಮಾಡಿದ್ದಾರೆ. ಉಡುಪಿಯ ಎಂಜಿಎಂ ಕಾಲೇಜಿನ ವಿಜ್ಞಾನ ವಿಭಾಗದ ಸ್ವಾತಿ ಹಾಗೂ ಕಾರ್ಕಳದ ಹೆಬ್ರಿಯಲ್ಲಿರುವ ಎಸ್‌.ಆರ್. ಪಿಯು ಕಾಲೇಜಿನ ರಯೀಸಾ ತಮ್ಮ ಸಾಧನೆಯ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದರು.

ಸ್ವಾತಿ ಸಂದರ್ಶನ

– ರ‍್ಯಾಂಕ್‌ ಪಡೆದಿರುವುದು ಹೇಗನಿಸುತ್ತಿದೆ ?

ತುಂಬಾ ಖುಷಿಯಾಗಿದೆ. ಸತತ ಪರಿಶ್ರಮಕ್ಕೆ ಬೆಲೆ ಸಿಕ್ಕಂತಾಗಿದೆ. ಮೊದಲ ರ‍್ಯಾಂಕ್‌ ಬರುವ ಗುರಿ ಇಟ್ಟುಕೊಂಡಿದ್ದೆ. ಮೂರನೇ ರ‍್ಯಾಂಕ್ ಬಂದಿರುವುದಕ್ಕೆ ಬೇಜಾರಿಲ್ಲ.  

–ಓದುವ ಕ್ರಮ ಹೇಗಿತ್ತು ?

ರಾತ್ರಿ ನಿದ್ದೆಗೆಟ್ಟು, ಬೆಳಿಗ್ಗೆ ಬೇಗ ಎದ್ದು ಓದುವ ಹುಡುಗಿಯಲ್ಲ. ಒತ್ತಡ ಇಲ್ಲದೆ ಓದುವ ಕ್ರಮವನ್ನು ರೂಢಿಸಿಕೊಂಡಿದ್ದೆ. ಇದರಿಂದ ಹೆಚ್ಚು ಅಂಕಗಳನ್ನು ಪಡೆಯಲು ಸಾದ್ಯವಾಯಿತು. ಪ್ರತಿದಿನ ಟೈಂ ಟೇಬಲ್‌ ಪ್ರಕಾರ, ಕನಿಷ್ಠ ಮೂರು ಗಂಟೆ ಓದಿಗೆ ಮೀಸಲಿಟ್ಟಿದ್ದೆ. ಕಾಲೇಜಿಗೆ ರಜೆ ಇದ್ದಾಗ, ಬಿಡುವಿದ್ದಾಗ ಓದುತ್ತಿದೆ. 

–ಭವಿಷ್ಯದಲ್ಲಿ ಏನಾಗುವ ಗುರಿ ಇದೆ?

ಸಾಫ್ಟ್‌ವೇರ್ ಅಚ್ಚುಮೆಚ್ಚಿನ ಕ್ಷೇತ್ರ. ಮುಂದೆ ಎಂಜಿನಿಯರಿಂಗ್ ಕಲಿತು, ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಸೇರುವ ಗುರಿ ಇದೆ.

–ಕಲಿಕೆಗೆ ಕುಟುಂಬದ ಸಹಕಾರ ಹೇಗಿತ್ತು ?

ಖುಷಿ ಬಂದಾಗ ಓದು ಎಂದು ಪ್ರೋತ್ಸಾಹಿಸುತ್ತಿದ್ದರು. ಕಲಿಯಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಅಕ್ಕ ಶ್ವೇತಾ ಬಂಟಕಲ್‌ನ ಎಸ್ಎಂವಿಐಟಿ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದಾರೆ. ಆಕೆ ತುಂಬಾ ಬುದ್ಧಿವಂತೆ. ಅಕ್ಕನೇ ನನಗೆ ಸ್ಫೂರ್ತಿ.

–ಕಾಲೇಜಿನಲ್ಲಿ ಶಿಕ್ಷಣ ಹೇಗಿತ್ತು ?

ಎಂಜಿಎಂ ಕಾಲೇಜಿನಲ್ಲಿ ಉತ್ತಮ ಶಿಕ್ಷಣ ಸಿಕ್ಕಿತು. ಉಪನ್ಯಾಸಕರು ಮಾದರಿ ಪ್ರಶ್ನೆಪತ್ರಿಕೆಗಳನ್ನು ತಯಾರಿಸಿ ಅಭ್ಯಾಸ ಮಾಡಿಸುತ್ತಿದ್ದರು. ನಿಗಧಿತ ಅವಧಿಯೊಳಗೆ ಪಠ್ಯಕ್ರಮ ಪೂರ್ಣಗೊಳಿಸಿದ್ದರು. ಜತೆಗೆ, ಪೂರ್ವಭಾವಿಯಾಗಿ ಪರೀಕ್ಷೆಗಳನ್ನು ನಡೆಸುತ್ತಿದ್ದರಿಂದ ಹೆಚ್ಚು ಅಂಕ ಗಳಿಸಲು ಸಾಧ್ಯವಾಯಿತು.    

–ಕೋಚಿಂಗ್‌ಗೆ ಹೋಗಿದ್ದೀರಾ?

ಹೌದು, ಉಡುಪಿಯ ಪ್ರೈಂ ಕೋಚಿಂಗ್ ಸೆಂಟರ್‌ಗೆ ಹೋಗಿದ್ದೆ. ಅಲ್ಲಿಯೂ ಉತ್ತಮ ಶಿಕ್ಷಣದ ಜತೆಗೆ ಮಾರ್ಗದರ್ಶನ ದೊರೆಯಿತು. 

–ವಿದ್ಯಾರ್ಥಿಗಳಿಗೆ ಟಿಪ್ಸ್‌ ಕೊಡಲು ಬಯಸುತ್ತೀರಾ?

ಓದಿಗೆ ಹೆಚ್ಚು ಸಮಯ ಮೀಸಲಿಡುವುದಕ್ಕಿಂತ, ಓದುವ ಕ್ರಮ ಬಹಳ ಮುಖ್ಯ. ಓದಿದ್ದನ್ನು ಅರ್ಥೈಸಿಕೊಳ್ಳಬೇಕು. ಒತ್ತಡದಲ್ಲಿ ಓದಿದರೆ ತಲೆಗೆ ಹೋಗುವುದಿಲ್ಲ. ಮನಸ್ಸು ಹಗುರವಾಗಿದ್ದರೆ ಓದು ಸುಲಭ.

–ಓದು ಹೊರತುಪಡಿಸಿ ಇತರೆ ಹವ್ಯಾಸಗಳು ಇದೆಯಾ ?

ಚಿತ್ರಕಲೆಯ ಬಗ್ಗೆ ಆಸಕ್ತಿ ಇದೆ, ದೇವರ ಗೀತೆ, ಭಜನೆಗಳನ್ನು ಹಾಡುತ್ತೇನೆ. ಟಿವಿ ನೋಡುವುದು ಕಡಿಮೆ, ಫೇಸ್‌ಬುಕ್‌ನಿಂದ ತುಂಬಾ ದೂರ. ಆಗಾಗ ವಾಟ್ಸ್‌ಆ್ಯಪ್‌ ನೋಡುತ್ತೇನೆ.

ರಯೀಸಾ ಸಂದರ್ಶನ

– ರ‍್ಯಾಂಕ್ ಬಂದಿರುವುದು ಹೇಗನಿಸುತ್ತಿದೆ ?

ಅದೃಷ್ಟದಿಂದ ಇಷ್ಟಪಟ್ಟಿದ್ದು ಸಿಕ್ಕರೆ ಹೆಚ್ಚು ಸಂತೋಷ ಆಗುವುದಿಲ್ಲ. ಆದರೆ, ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕರೆ ಸಿಗುವ ಸಂತೋಷ ದೊಡ್ಡದು. ಫಲಿತಾಂಶದಿಂದ ತುಂಬಾ ಖುಷಿಯಾಗಿದೆ.

– ಓದುವ ಕ್ರಮ ಹೇಗಿತ್ತು ?

ಹಗಲು–ರಾತ್ರಿ ಓದಲಿಲ್ಲ. ಓದುವಾಗ ಬೇಜಾರಾದಾಗ ಮನಸ್ಸಿಗೆ ಖುಷಿ ಕೊಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಇಷ್ಟವಾದ ಕೆಲಸಗಳನ್ನು ತುಂಬಾ ಎಂಜಾಯ್ ಮಾಡುತ್ತಿದ್ದೆ. ಆದರೆ, ಓದುವಾಗ ಏಕಾಗ್ರತೆಯಿಂದ ಓದುತ್ತಿದ್ದೆ. 

– ರ‍್ಯಾಂಕ್‌ ಬರುವ ನಿರೀಕ್ಷೆ ಇತ್ತಾ ?

ಖಂಡಿತ ಇಲ್ಲ, ಉತ್ತಮ ಅಂಕಗಳು ಬರುವ ನಿರೀಕ್ಷೆಯಂತೂ ಇತ್ತು. ರ‍್ಯಾಂಕ್‌ ಬಂದಿದ್ದು ಸಂತಸವನ್ನು ಹೆಚ್ಚುಮಾಡಿದೆ.

– ಭವಿಷ್ಯದಲ್ಲಿ ಗುರಿ ಇಟ್ಟುಕೊಂಡಿದ್ದೀರಾ ?

ಸಧ್ಯಕ್ಕೆ ಗುರಿ ಇಲ್ಲ. ಆದರೆ, ಮೆಡಿಕಲ್‌ ಕ್ಷೇತ್ರದಲ್ಲಿ ಆಸಕ್ತಿ ಇದೆ. ಜೆಇಇ ಬರೆದಿದ್ದೇನೆ, ಸಿಇಟಿ ಹಾಗೂ ನೀಟ್‌ ಪರೀಕ್ಷೆಗಳ ಫಲಿತಾಂಶ ನೋಡಿಕೊಂಡು ಭವಿಷ್ಯದ ಗುರಿ ನಿರ್ಧಾರ ಮಾಡುತ್ತೇನೆ.

–ಪೋಷಕರ ಸಹಕಾರ ಹೇಗಿತ್ತು ?

ಮನೆಯಲ್ಲಿ ಒತ್ತಡ ಇರಲಿಲ್ಲ. ಹೆಚ್ಚು ಅಂಕಪಡೆಯಬೇಕು, ರ‍್ಯಾಂಕ್‌ ಬರಬೇಕು, ಕಷ್ಟಪಟ್ಟು ಓದು ಎಂದು ಒತ್ತಾಯಿಸುತ್ತಿರಲಿಲ್ಲ. ಇಷ್ಟಪಟ್ಟು ಓದು ಎಂದು ಪ್ರೋತ್ಸಾಹಿಸಿದರು.

–ಕಾಲೇಜಿನಲ್ಲಿ ಶಿಕ್ಷಣ ಹೇಗಿತ್ತು ?

ಹೆಬ್ರಿ ದೊಡ್ಡ ನಗರವಲ್ಲ. ಆದರೆ, ನಗರಗಳಲ್ಲಿರುವ ಅತ್ಯುತ್ತಮ ಕಾಲೇಜುಗಳನ್ನು ಮೀರಿಸುವಂತಹ ಶಿಕ್ಷಣ ಎಸ್‌.ಆರ್ ಪಿಯು ಕಾಲೇಜಿನಲ್ಲಿ ಸಿಕ್ಕಿತು. ಶಿಕ್ಷಕರ ಬಳಿ ಫೋನ್‌ ಮೂಲಕವೂ ಪ್ರಶ್ನೆಗಳಿಗೆ ಪರಿಹಾರ ಪಡೆದುಕೊಳ್ಳುವ ಸ್ವಾತಂತ್ರ್ಯ ಇತ್ತು. ಈ ಕಾಲೇಜಿಗೆ ಸೇರಿದಾಗ ಹಲವು ಸ್ನೇಹಿತೆಯರು ಟೀಕೆ ಮಾಡಿದರು. ಈಗ ಫಲಿತಾಂಶ ನೋಡಿ ಅವರೆಲ್ಲ ಹುಬ್ಬೇರಿಸಿದ್ದಾರೆ.

-ಕೋಚಿಂಗ್‌ ಕ್ಲಾಸ್‌ಗೆ ಹೋಗಿದ್ದೀರಾ ?

ಇಲ್ಲ. ಅದರ ಅವಶ್ಯಕತೆಯೇ ಬರಲಿಲ್ಲ. ಕೋಚಿಂಗ್ ಕ್ಲಾಸ್‌ನಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಕಾಲೇಜಿನಲ್ಲೇ ಸಿಕ್ಕಿತು. ಕಂಪ್ಯೂಟರ್ ಶಿಕ್ಷಣವೂ ಕಾಲೇಜಿನಲ್ಲೇ ದೊರೆಯಿತು.  

-ಇತರೆ ಹವ್ಯಾಸಗಳು ಇವೆಯಾ ?

ಚಿತ್ರಕಲೆ ಎಂದರೆ ತುಂಬಾ ಇಷ್ಟ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ಬಿಡುವಿದ್ದಾಗಲೆಲ್ಲ ಚಿತ್ರಗಳನ್ನು ಬರೆಯುತ್ತೇನೆ. ಉತ್ತಮ ಪುಸ್ತಕಗಳನ್ನು ಓದುತ್ತೇನೆ. ಕಾಲೇಜುಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೇನೆ.

-ವಿದ್ಯಾರ್ಥಿಗಳಿಗೆ ಟಿಪ್ಸ್‌ಗಳನ್ನು ಕೊಡುತ್ತೀರಾ ?

ಪುಸ್ತಕದ ಹುಳುಗಳಾದರೆ ಪ್ರಯೋಜನ ಇಲ್ಲ, ಓದುವ ಸಮಯದಲ್ಲಿ ಏಕಾಗ್ರತೆಯ, ಒತ್ತಡ ರಹಿತ ಓದು ಅಗತ್ಯ. ಉಳಿದ ಸಮಯದಲ್ಲಿ ಮನಸ್ಸಿಗೆ ಖುಷಿಕೊಡುವ ಕೆಲಸ ಮಾಡಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !