ಶನಿವಾರ, ಅಕ್ಟೋಬರ್ 19, 2019
28 °C
ಸಮಗ್ರ ಯೋಜನೆ ತಯಾರಿ: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ

ಪ್ರವಾಸಿಗರಿಗೆ ಪ್ರಾದೇಶಿಕ ಸಂಸ್ಕೃತಿ ಪರಿಚಯ

Published:
Updated:
Prajavani

ಉಡುಪಿ: ‌ಪ್ರವಾಸಿಗರಿಗೆ ಆಯಾ ಪ್ರಾಂತ್ಯಗಳ ವಿಭಿನ್ನ ಸಂಸ್ಕೃತಿಯನ್ನು ಪರಿಚಯಿಸಲು ವಿಶಿಷ್ಟ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮೈಸೂರಿನಲ್ಲಿ ಪ್ರಾಯೋಗಿಕವಾಗಿ ‘ಕೃಷಿ ಸಂಸ್ಕೃತಿ’ಯ ಅನುಭವವನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದಸರಾ ವೀಕ್ಷಣೆಗೆ ಮೈಸೂರಿಗೆ ಬರುವ ಪ್ರವಾಸಿಗರಿಗೆ ಹಳ್ಳಿಯ ಜೀವನದ ಅನುಭವ ನೀಡಲು ಮಂಡ್ಯದ ಪುಟ್ಟ ಹಳ್ಳಿಯನ್ನು ಸಿದ್ಧಪಡಿಸಲಾಗಿದೆ. ಇಲ್ಲಿ ಪ್ರವಾಸಿಗರು ಎತ್ತಿನ ಗಾಡಿ ಓಡಿಸಬಹುದು, ನಾಟಿ ಮಾಡುವುದು, ಹಳ್ಳಿಯ ಆಹಾರ ಸವಿಯಬಹುದು ಎಂದು. ಇದೇ ಮಾದರಿಯನ್ನು ರಾಜ್ಯದಾದ್ಯಂತ ವಿಸ್ತರಿಸುವ ಉದ್ದೇಶವಿದೆ ಎಂದರು.

ಕರಾವಳಿ ಪ್ರವಾಸೋದ್ಯಮಕ್ಕೆ ಪೂರಕವಾದ ಪ್ರದೇಶ. ಇಲ್ಲಿನ ಪ್ರಸಿದ್ಧ ಕಂಬಳ ಕ್ರೀಡೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿ ವಿಶ್ವದ ಹಲವೆಡೆಗಳಿಂದ ಪ್ರವಾಸಿಗರನ್ನು ಸೆಳೆಯುವ ಅವಕಾಶವಿದೆ. ಹಾಗೆಯೇ, ಸಂಸ್ಕೃತಿ, ಆಚರಣೆಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು ಎಂದರು.

ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವಾರ್ಷಿಕ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಯಾವ ತಿಂಗಳು ಯಾವ ಜಿಲ್ಲೆಗಳಿಗೆ ಪ್ರವಾಸಿಗರು ಬರಬಹುದು ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಪಶ್ಚಿಮಘಟ್ಟ, ಕರಾವಳಿ ಹಾಗೂ ಪಾರಂಪರಿಕ ತಾಣಗಳಿರುವ ಜಿಲ್ಲೆಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ತರುವ ಯೋಜನೆ ಇದೆ ಎಂದರು.

ಗ್ರಾಮಗಳ ಇತಿಹಾಸ, ಸಾಂಸ್ಕೃತಿಕ ಹಿನ್ನೆಲೆ, ಇತಿಹಾಸ ಪುರುಷರ ವಿವರಗಳನ್ನು ಸಂಗ್ರಹಿಸಿ ಸುಲಭವಾಗಿ ಪ್ರವಾಸಿಗರಿಗೆ ಒದಗಿಸುವ ಉದ್ದೇಶವೂ ಇದೆ. ಅದಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗ್ರಾಮಗಳ ಅಧ್ಯಯನಕ್ಕೆ ಕಳುಹಿಸಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಗುವುದು. ಬಳಿಕ ಮಾಹಿತಿಯನ್ನು ಪರಿಶೀಲಿಸಿ ಎಲ್ಲ ಜಿಲ್ಲೆಯ ವಿವರಗಳು ಒಂದೆಡೆ ಲಭ್ಯವಾಗುವಂತೆ ವಿಕಿಪಿಡಿಯಾ ಮಾದರಿಯಲ್ಲಿ ವೆಬ್‌ಸೈಟ್‌ ಮಾಡಲಾಗುವುದು ಎಂದರು.

ಪ್ರವಾಸಕ್ಕೆ ಬಂದವರು ಕನಿಷ್ಠ ಮೂರ್ನಾಲ್ಕು ದಿನ ಉಳಿಯುವಂತೆ ಮಾಡುವ ಉದ್ದೇಶವಿದೆ. ಅದಕ್ಕಾಗಿ ಜಲಕ್ರೀಡೆಗಳು, ಸಾಹಸ ಕ್ರೀಡೆಗಳ ಆಯೋಜನೆಗೆ ಒತ್ತು ನೀಡಲಾಗುವುದು. ಧಾರ್ಮಿಕ ಹಾಗೂ ಪಾರಂಪರಿಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯ ಜತೆಗೆ ಉದ್ಯಮ ಬೆಳವಣಿಗೆ ಕಾಣಲಿದೆ ಎಂದು ಸಿ.ಟಿ.ರವಿ ತಿಳಿಸಿದರು.

ಶಾಸಕರಾದ ರಘುಪತಿ ಭಟ್‌, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಗದೀಶ್‌, ಸಿಇಒ ಪ್ರೀತಿ ಗೆಹ್ಲೋಟ್‌, ಉದ್ಯಮಿ ಪ್ರಕಾಶ್‌ ಶೆಟ್ಟಿ, ಮನೋಹರ್ ಶೆಟ್ಟಿ ಹಾಗೂ ಅಧಿಕಾರಿಗಳು ಸಭೆಯಲ್ಲಿದ್ದರು. 

‘₹ 8.10 ಕೋಟಿ ಬಿಡುಗಡೆ’
ಉಡುಪಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ₹ 16.10 ಕೋಟಿ ವೆಚ್ಚದ 10 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ₹ 8.10 ಕೋಟಿ ಬಿಡುಗಡೆ ಮಾಡಲಾಗಿದೆ. ಸ್ವದೇಶಿ ದರ್ಶನ ಯೋಜನೆಯಡಿ ಖಾಸಗಿ ಸಹಭಾಗಿತ್ವದಲ್ಲಿ ಕಡಲತೀರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಸಿ.ಟಿ.ರವಿ ತಿಳಿಸಿದರು.

Post Comments (+)