ಶನಿವಾರ, ಮಾರ್ಚ್ 25, 2023
27 °C

ಕಾರ್ಕಳ ಉತ್ಸವದಲ್ಲಿ ಶ್ರೀಮಂತ ಧರ್ಮ, ಸಂಸ್ಕೃತಿಯ ಪರಿಚಯ- ಥಾವರಚಂದ್ ಗೆಹಲೋತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಕಲೆ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಕಳ ಉತ್ಸವದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.

ಸೋಮವಾರ ಕಾರ್ಕಳ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಚಿವ ಸುನಿಲ್ ಕುಮಾರ್ ಇತಿಹಾಸವನ್ನು ಜೀವಂತವಾಗಿಡುವ ಉದ್ದೇಶದಿಂದ ಕಾರ್ಕಳ ಉತ್ಸವ ಆಯೋಜಿಸಿದ್ದಾರೆ. ಸಂಪ್ರದಾಯ, ಧರ್ಮ, ಸಂಸ್ಕೃತಿ, ಕಲೆಯನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಕಳ ಉತ್ಸವದಂತಹ ಕಾರ್ಯಕ್ರಮಗಳಿಂದ ಶ್ರೀಮಂತವಾದ ಧರ್ಮ, ಸಂಸ್ಕೃತಿ ಮತ್ತು ಇತಿಹಾಸವನ್ನು ಸಮರ್ಥವಾಗಿ ಅರಿಯಲು ಸಾದ್ಯವಾಗಲಿದೆ ಎಂದರು.

ಪಂಚಶೀಲ ಸಿದ್ಧಾಂತದ ಸ್ಥಾಪಕ ಹಾಗೂ ಜೈನ ಧರ್ಮದ 24ನೇ ತೀರ್ಥಂಕರರಾದ ಮಹಾವೀರರು ಅಹಿಂಸೆಯ ಪ್ರತೀಕವಾಗಿದ್ದಾರೆ. ಸತ್ಯ, ಅಹಿಂಸೆ ಮತ್ತು ತ್ಯಾಗದ ಮಹತ್ವ ತಿಳಿಸಿದ್ದಾರೆ. ‘ಬದುಕಿ, ಬದುಕಲು ಬಿಡಿ‘ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರು ಹೇಳಿದಂತೆ ಧರ್ಮ ಜನರನ್ನು ಒಂದುಗೂಡಿಸುತ್ತದೆ. ಸಹೋದರತ್ವ ಭಾವ ಸಮಾಜವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತದೆ. ಭಾರತೀಯ ಸಂಸ್ಕೃತಿ ಸದಾ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ ಎಂದು ರಾಜ್ಯಪಾಲರು ಹೇಳಿದರು.

ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಕಾರ್ಕಳ ನಗರವು ಶಿಲ್ಪಕಲೆಯ ಪ್ರಾವೀಣ್ಯತೆಗೆ ವಿಶ್ವಪ್ರಸಿದ್ಧವಾಗಿದೆ. ಇಲ್ಲಿನ ಶಿಲ್ಪಿಗಳಿಗೆ ಕಲ್ಲುಗಳಿಗೆ ಜೀವ ತುಂಬುವ ಸಾಮರ್ಥ್ಯವಿದೆ. ಶಿಲ್ಪಿಗಳ ಕಲೆಯ ನೈಪುಣ್ಯತೆಯಲ್ಲಿ ಶಿಲ್ಪಗಳಲ್ಲಿ ಕಾಣಬಹುದು ಎಂದರು.

ಸತ್ಯ, ಅಹಿಂಸೆ ಮತ್ತು ಪರಿತ್ಯಾಗದ ಸಂದೇಶ ನೀಡಿರುವ ಭಗವಾನ್ ಬಾಹುಬಲಿಯ ಬೃಹತ್ ಪ್ರತಿಮೆ ಕಾರ್ಕಳದ ಪ್ರಮುಖ ಆಕರ್ಷಣೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಪರಶುರಾಮನ ಸೃಷ್ಟಿ ಎಂದೇ ಭಾವಿಸಲಾಗಿದೆ. ಸರ್ವಧರ್ಮ ಸಮನ್ವಯದ ನೆಲದಲ್ಲಿ ದಕ್ಷತೆ, ನಿಷ್ಠೆ, ವೀರಾವೇಶದ ಗುಣಗಳನ್ನು ಕಾಣಬಹುದು ಎಂದರು.

ಶೃಂಗಾರ ಕವಿ ಎಂದೇ ಖ್ಯಾತರಾದ ರತ್ನಾಕರ ವರ್ಣಿ, ನವ್ಯ ಕನ್ನಡ ಕಾವ್ಯದ ಹರಿಕಾರ ಮುದ್ದಣ್ಣ, ಶ್ರೇಷ್ಠ ಶಿಲ್ಪಿ ರಂಜಲ್ ಗೋಪಾಲ್, ಸುಪ್ರಿಂ ಕೋರ್ಟ್‌ ನ್ಯಾಯಮೂರ್ತಿ ಕೆ.ಎಸ್.ಹೆಗಡೆ, ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿದ ಜಿನರಾಜ್ ಹೆಗಡೆ ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದು ರಾಜ್ಯಪಾಲರು ಹೊಗಳಿದರು.

ಕಾರ್ಕಳದ ವೆಂಕಟರಮಣ ಸ್ವಾಮಿ ದೇವಸ್ಥಾನ, ಅತ್ತೂರು ಸಂತ ಲಾರೆನ್ಸ್ ಚರ್ಚ್, ಚತುರ್ಮುಖ ಬಸದಿಗಳು ಧಾರ್ಮಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಗೆ ಸಾಕ್ಷಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ, ಜಿಲ್ಲಾಧಿಕಾರಿ ಕೂರ್ಮಾರಾವ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು