ಭಾನುವಾರ, ಆಗಸ್ಟ್ 14, 2022
19 °C
ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಕನಕದಾಸರ ಜಯಂತಿ ನಾಡಹಬ್ಬವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕನಕದಾಸರ ಜಯಂತಿ ನಾಡಹಬ್ಬವಾಗಿ ಆಚರಣೆಯಾದರೆ ಅವರ ವಿಚಾರಧಾರೆಗಳು ಸಾರ್ಥಕತೆ ಪಡೆದುಕೊಳ್ಳುತ್ತವೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಸವರಾಜ ಬೊಮ್ಮಾಯಿ ಹೇಳಿದರು.‌

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದುಕಿನ ಅಂಕು ಡೊಂಕುಗಳನ್ನು ದಾಸ ಸಾಹಿತ್ಯದ ಮೂಲಕ ಮಾರ್ಮಿಕವಾಗಿ ತಿದ್ದಿದ ಮಹಾನ್ ದಾರ್ಶನಿಕರಾದ ಕನಕದಾಸರು ದಾಸಶ್ರೇಷ್ಠರು ಎಂದರು.

ಕನಕ ದಾಸರ ಕಾವ್ಯ ಬದುಕಿನ ಮೇಲೆ ಹಾಗೂ ಸಮಾಜದ ತಾರತಮ್ಯ ವ್ಯವಸ್ಥೆಯ ಮೇಲೆ ರಚಿತವಾದ ಕಾರಣ ಇಂದಿಗೂ ಪ್ರಸ್ತುತವಾಗಿದೆ. ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಭಾಷಾ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.‌

ಭಕ್ತನ ಭಕ್ತಿಗಿಂತ ಮಿಗಿಲಾಗಿದ್ದು ಯಾವುದೂ ಇಲ್ಲ ಎಂಬುದನ್ನು ಜಗತ್ತಿಗೆ ಸಾರಿದವರು ಕನಕ ದಾಸರು. ಭಕ್ತಿಯಿಂದ ದೇವರನ್ನೇ ಒಲಿಸಿಕೊಂಡ ಕನಕ ದಾಸರಿಗೂ ಉಡುಪಿಗೂ ಅವಿನಾಭಾವ ಸಂಬಂಧವಿದೆ ಎಂದು ಸ್ಮರಿಸಿದರು.

ಹಾವೇರಿ ಜಿಲ್ಲೆಯ ಬಾಡದಲ್ಲಿರುವ ಕನಕದಾಸರ ಜನ್ಮಸ್ಥಳವನ್ನು ₹ 14 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ  ಕೋಟೆ, ಅರಮನೆ ಕಟ್ಟಲಾಗಿದೆ. ಕನಕ ದಾಸರ ಜೀವನ ಚರಿತ್ರೆಯನ್ನು ತೈಲವರ್ಣದ ಚಿತ್ರಗಳಲ್ಲಿ ಬಿಂಬಿಸಲಾಗಿದೆ. ಅವರ ವಿಚಾರಧಾರೆಗಳನ್ನು ಎಲ್ಲರಿಗೂ ತಲುಪಿಸಲು 4 ಡಿ ಸ್ಟುಡಿಯೋ ನಿರ್ಮಿಸಲಾಗಿದೆ. ಬೃಂದಾವನ, ಕಾರಂಜಿ ಸೇರಿದಂತೆ ಸುಂದರ ಉದ್ಯಾನ ನಿರ್ಮಿಸಲಾಗಿದೆ. ಪ್ರತಿದಿನ ಇಲ್ಲಿಗೆ 2 ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂಧರು.

ಸಂಪನ್ಮೂಲ ವ್ಯಕ್ತಿ ವರದೇಶ್‌ ಹಿರೇಗಂಗೆ ಮಾತನಾಡಿ, ಕನಕದಾಸರು ಕವಿಯೂ ಹೌದು ಕಲಿಯೂ ಹೌದು, ಭಕ್ತರೂ ಹೌದು ವಿರಕ್ತರೂ ಹೌದು, ದಾಸರೂ ಹೌದು ದಾರ್ಶನಿಕರೂ ಹೌದು. ಕನಕದಾಸರ ಇಡೀ ಜೀವನ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಸಮ್ಮಿಳಿತದಿಂದ ಕೂಡಿದೆ ಎಂದರು.

ಸಮಾಜ ಸುಧಾರಣೆ ನಿಟ್ಟಿನಲ್ಲಿ ಕನಕದಾಸರು ರಚಿಸಿದ ಕೀರ್ತನೆಗಳು, ಕಾವ್ಯಗಳು ಸರ್ವಕಾಲಕ್ಕೂ ಸಲ್ಲುವ ಶ್ರೇಷ್ಠ ಸಂದೇಶಗಳು. ಕನ್ನಡ ಸಾಹಿತ್ಯವನ್ನು ಬೆಳೆಸಿ ಶ್ರೀಮಂತಗೊಳಿಸುವಲ್ಲಿ ಕನಕದಾಸರ ಕೊಡುಗೆ ದೊಡ್ಡದು. ಸಮಾಜದಲ್ಲಿದ್ದ ತರತಮ ವ್ಯವಸ್ಥೆಯನ್ನು ಕಾವ್ಯಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿ ಸಮ ಸಮಾಜ ನಿರ್ಮಾಣ ಮಾಡಲು ಶ್ರಮಿಸಿದರು. ಅವರ ಚಿಂತನೆಯ ಸಾರವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಕರಾವಳಿ ಕಾವಲುಪಡೆಯ ಎಸ್‌ಪಿ ಆರ್‌.ಚೇತನ್‌, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್‌, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.