ಕಾಪು (ಪಡುಬಿದ್ರಿ): ತಿಂಗಳ ಹಿಂದೆ ಫ್ಲೈಓವರ್ ಕೆಳಗಡೆ ನಿಲ್ಲಿಸಿದ್ದ ಬೈಕ್ ಅನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಹಮದ್ ನಿನಾನ್ ಯಾನೆ ಚಿನ್ನು (23) ಬಂಧಿತ ಆರೋಪಿ. ಈತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತನಿಖೆಯ ಬಳಿಕ ಆರೋಪಿಯನ್ನು ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಸುರತ್ಕಲ್ ಸುಲ್ತಾನ್ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಹೇರೂರು ನಿವಾಸಿ ಚೇತನ್ ಆಚಾರ್ಯ ಅವರು ಕಾಪು ಫ್ಲೈ ಓವರ್ ಪಾರ್ಕಿಂಗ್ ಸ್ಥಳದಲ್ಲಿ ಜುಲೈ 10ರಂದು ಬೈಕ್ ನಿಲ್ಲಿಸಿ ಕೆಲಸಕ್ಕೆ ತೆರಳಿದ್ದರು. ಜುಲೈ 15ರಂದು ವಾಪಾಸು ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು. ಚೇತನ್ ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಜು. 10ರಿಂದ ಜು. 15ರ ನಡುವೆ ತನ್ನ ಬೈಕ್ ಕಳವಾಗಿದೆ ಎಂದು ದೂರು ನೀಡಿದ್ದರು.
ಆಗಸ್ಟ್ 5ರಂದು ಪಣಂಬೂರು ಪೊಲೀಸರು ಬೈಕ್ ಕಳ್ಳ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಹಮದ್ ನಿನಾನ್ ಯಾನೆ ಚಿನ್ನು ಎಂಬಾತನನ್ನು ಬಂಧಿಸಿದ್ದು ತನಿಖೆಯ ವೇಳೆ ಆರೋಪಿಯು ತಾನು ಕಾಪುವಿನಲ್ಲೂ ಬೈಕ್ ಕಳವು ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದನು.
ಈ ಬಗ್ಗೆ ಪಣಂಬೂರು ಪೊಲೀಸರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಪು ಕ್ರೈಂ ಎಸ್‌ಪಿ ಪುರುಷೋತ್ತಮ್ ಅವರು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.