ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಪು ಕೆಡಿಪಿ ಸಭೆ: ಶಾಸಕ ಗುರ್ಮೆ ಅಸಮಾಧಾನ

Published : 5 ಸೆಪ್ಟೆಂಬರ್ 2024, 3:30 IST
Last Updated : 5 ಸೆಪ್ಟೆಂಬರ್ 2024, 3:30 IST
ಫಾಲೋ ಮಾಡಿ
Comments

ಕಾಪು (ಪಡುಬಿದ್ರಿ): ‘ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಪ್ರಚಾರ ಕೈಗೊಂಡು ಯೋಜನೆಗಳು ದೊರಕಿಸಿಕೊಡುವ ಕೆಲಸ ಆಗಬೇಕಾಗಿದೆ’ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಪು ಪುರಸಭೆಯ ಸಭಾಂಗಣದಲ್ಲಿ ಬುಧವಾರ ನಡೆದ ಕಾಪು ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಕಾಪುವಿನಲ್ಲಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಈಗಾಗಲೇ ಜಾಗ ಗುರುತಿಸಲಾಗಿದ್ದು, ತೀರಾ ಗ್ರಾಮೀಣ ಪ್ರದೇಶದಲ್ಲಿದೆ. ಕಾಪು ಹೃದಯ ಭಾಗದಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆ ಮೇಲಾಧಿಕಾರಿಗಳಿಂದ ಸರ್ಕಾರಕ್ಕೆ ಸಲ್ಲಿಸುವಲ್ಲಿ ಕ್ರಮ ವಹಿಸಬೇಕು ಹಾಗೂ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಸ್ಥಳೀಯರಿಗೆ ಉದ್ಯೋಗಕ್ಕೆ ಕ್ರಮ: ನಮ್ಮ ನೆಲ, ಜಲವನ್ನು ಬಳಸಿಕೊಂಡು ಸ್ಥಳೀಯರಿಗೆ ಉದ್ಯೋಗ ನೀಡದೆ ಇರುವ ಕಂಪನಿಗಳ ಬಗ್ಗೆ ವರದಿ ತಯಾರಿಸಿ ಉದ್ಯೋಗ ಪಟ್ಟಿಯನ್ನು ತಕ್ಷಣ ನೀಡಬೇಕು. ನಮ್ಮಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ. ಇಂತವರಿಗೆ ಉದ್ಯೋಗ ದೊರಕಬೇಕು ಎಂದರು.

ಕೊರಗ ಸಮುದಾಯದ ಶೈಕ್ಷಣಿಕ, ಆರೋಗ್ಯ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮಳೆಯಿಂದ ಹಾನಿಗೀಡಾದ ಕೃಷಿ ಬೆಳೆಗಳಿಗೆ ಹೆಕ್ಟೇರ್‌ವಾರು ಪರಿಹಾರ ನೀಡಿದ ವರದಿಯನ್ನು ನೀಡುವಂತೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ತಾಲ್ಲೂಕಿನಲ್ಲಿ 20 ಹೆಕ್ಟೇರ್ ಬೆಳೆ ಹಾನಿಯಾಗಿದೆ. 54 ಮಂದಿ ರೈತರಲ್ಲಿ ಪಹಣಿಯ ತಾಂತ್ರಿಕ ಸಮಸ್ಯೆಯಿಂದ ಕೇವಲ ಮೂರು ರೈತರಿಗೆ ತೊಂದರೆಯಾಗಿದೆ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಮತ್ತೆ ಸರ್ವೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ಸಾಮಾಜಿಕ ಅರಣ್ಯ ಪ್ರಗತಿಯ ಬಗ್ಗೆ ವಿವರ ಕೇಳಿದ ಶಾಸಕರು, ತಾಲ್ಲೂಕಿನಾದ್ಯಂತ ವರ್ಷಕ್ಕೆ 150 ಗಿಡ ನೆಡಲು ಸಾಮಾಜಿಕ ಅರಣ್ಯ ಅಗತ್ಯ ಇಲ್ಲ. ಆದಷ್ಟು ಗಿಡಗಳನ್ನು ನೆಡುವ ಪ್ರಕ್ರಿಯೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆಗಳು ಉಂಟಾದಲ್ಲಿ ಅತಿಥಿ ಶಿಕ್ಷಕರನ್ನು ನೇಮಕಾತಿಗೊಳಿಸುವ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಗುರ್ಮೆ ಶೆಟ್ಟಿ ನುಡಿದರು.

ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯದ ಬಗ್ಗೆ ವಿವರಣೆ ನೀಡುವಂತೆ ಅಧಿಕಾರಿಗಳಿಗೆ ಕೇಳಿಕೊಂಡರು.
ಗ್ರಾಮೀಣ ವಸತಿ ಯೋಜನೆಗಳಲ್ಲಿ ಈಗಾಗಲೇ ಹಂತವಾರು ಪ್ರಗತಿಯ ಜಿಪಿಎಸ್ ಮಾಡಿದ್ದಲ್ಲಿ ಬಾಕಿ ಸಹಾಯಧನ ಫಲಾನುಭವಿಗಳ ಖಾತೆಗೆ ಜಮಾ ಮಾಡಲು ಕ್ರಮ ವಹಿಸುವುದು, ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ರಾಜೀವ ಗಾಂಧಿ ವಸತಿ ನಿಗಮಕ್ಕೆ ಪತ್ರ ವ್ಯವಹಾರ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದರು.

ಕಿಂಡಿ ಅಣೆಕಟ್ಟು, ಕೆರೆಗಳ ಆಧುನೀಕರಣ ಕಾಮಗಾರಿಗಳನ್ನು ಆದ್ಯತೆ ನೆಲೆಯಲ್ಲಿ ಕೈಗೆತ್ತಿಕೊಳ್ಳಬೇಕು. ಉಪ್ಪು ನೀರಿನಿಂದ ಕೃಷಿಗಳಿಗೆ ಹಾನಿಯಾಗುತ್ತಿದ್ದು, ಮುಖ್ಯವಾಗಿ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಭಾಗದಲ್ಲಿ ಜನರು ಮಟ್ಟುಗುಳ್ಳ ಬೆಳೆಯುತ್ತಾರೆ. ಆದರೆ, ಉಪ್ಪು ನೀರಿನಿಂದ ಈ ಕೃಷಿಗೆ ಹಾನಿ ಉಂಟಾಗುತ್ತಿದೆ. ಉಪ್ಪು ನೀರಿನ ತಡೆಗೆ ಖಾರ್ಲ್ಯಾಂಡ್ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಂತೆ ಹೇಳಿದರು.

ಜಲಜೀವನ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಬಗ್ಗೆ ಮಾಹಿತಿ ಪಡೆದು, ಬಾಕಿ ಉಳಿದ ಕಾಮಗಾರಿಗಳು ಗುಣಮಟ್ಟ ಕಾಯ್ದುಕೊಂಡು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಕಾಪು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಪೂರ್ಣಿಮಾ, ತಹಶೀಲ್ದಾರ್‌ ಪ್ರತೀಭಾ ಆರ್, ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ,  ನಾಮನಿರ್ದೇಶನ ಸದಸ್ಯರಾದ ಜಿತೇಂದ್ರ ಪುರ್ಟಾಡೊ, ವೈ. ಸುಕುಮಾರ್, ರಾಜೇಶ್ ಕುಲಾಲ್, ರಮೇಶ್, ಪ್ರಭಾ ಇದ್ದರು.

ಹೊಂಡದಲ್ಲಿ ಸಂಖ್ಯೆ ನಮೂದಿಸಿ

ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳು ಸೃಷ್ಟಿಯಾಗಿದೆ. ಇದರಿಂದ ಪ್ರತಿನಿತ್ಯ ನಮಗೆ ಕರೆಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೊಂಡಗಳ ಸರ್ವೆ ನಡೆಸಿ ಹೊಂಡ ಇರುವಲ್ಲಿ ಅಧಿಕಾರಿಗಳ ಸಂಖ್ಯೆ ನಮೂದಿಸಿ ಎಂದು ಶಾಸಕ ಗುರ್ಮೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT