ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಜನ್ಯ ಕೊಲೆ ಪ್ರಕರಣ: ಸಮಾಜದ ಪರವಾಗಿ ಸಂತೋಷ್‌ ರಾವ್ ಕುಟುಂಬದ ಕ್ಷಮೆಯಾಚನೆ

ಸಂತೋಷ್‌ರಾವ್ ನಿವಾಸಕ್ಕೆ ಭೇಟಿನೀಡಿ ತಂದೆ ಸುಧಾಕರ ರಾವ್‌ ಅವರಿಗೆ ಗುರುವಂದನೆ ಸಲ್ಲಿಕೆ
Published 9 ಆಗಸ್ಟ್ 2023, 18:17 IST
Last Updated 9 ಆಗಸ್ಟ್ 2023, 18:17 IST
ಅಕ್ಷರ ಗಾತ್ರ

ಕಾರ್ಕಳ (ಉಡುಪಿ ಜಿಲ್ಲೆ): ಸೌಜನ್ಯಾ ಕೊಲೆ ಪ್ರಕರಣದಲ್ಲಿ ನಿರ್ದೋಷಿಯಾಗಿ ಬಿಡುಗಡೆಯಾಗಿರುವ ಕಾರ್ಕಳ ತಾಲ್ಲೂಕಿನ ಬೈಲೂರಿನ ಸಂತೋಷ್ ರಾವ್ ನಿವಾಸಕ್ಕೆ ಬುಧವಾರ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸಂತೋಷ್ ರಾವ್ ಅವರ ತಂದೆ ನಿವೃತ್ತ ಶಿಕ್ಷಕರಾದ ಸುಧಾಕರ ರಾವ್ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಸುಧಾಕರ ಅವರಿಗೆ ತಲೆಗೂದಲು ಕ್ಷೌರ ಮಾಡಿಸಿ, ಹೊಸಬಟ್ಟೆ ತೊಡಿಸಿ ಪಾದಪೂಜೆ ಮಾಡಲಾಯಿತು. ಮನೆಗೆ ಸುಣ್ಣಬಣ್ಣ ಬಳಿಯಲಾಯಿತು.

ಬಳಿಕ ಮಾತನಾಡಿದ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ‘ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸಂತೋಷ್‌ ರಾವ್ ಕುಟುಂಬ ಮಾನಸಿಕವಾಗಿ– ದೈಹಿಕವಾಗಿ ಬಹಳ ನೊಂದಿದೆ. ಕೊಲೆಗಾರ, ಅತ್ಯಾಚಾರಿ ಎಂಬ ಕಳಂಕದ ಕಾರಣಕ್ಕೆ ಸಂಬಂಧಗಳನ್ನು ಕಳೆದುಕೊಂಡಿದೆ. ಸಮಾಜದಿಂದ ದೂರವಿದ್ದು ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಪರವಾಗಿ ಸಂತೋಷ್ ರಾವ್ ಕುಟುಂಬದ ಕ್ಷಮೆ ಕೇಳಬೇಕಾಗಿರುವುದು ನಮ್ಮ ಕರ್ತವ್ಯ’ ಎಂದರು.

ಸಂತೋಷ್‌ ರಾವ್ ಕುಟುಂಬಕ್ಕೆ ಹೊಸದಾಗಿ ಬದುಕು ಕಟ್ಟಿಕೊಡಬೇಕು. ನೈತಿಕವಾಗಿ ಕುಸಿದಿರುವ ಕುಟುಂಬಕ್ಕೆ ಆತ್ಮಸ್ಥೈರ್ಯ ಹಾಗೂ ಚೈತನ್ಯ ತುಂಬುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಒಡನಾಡಿ ಸಂಸ್ಥೆಯು ನೆರವು ನೀಡಲಿದೆ ಎಂದರು.

ಸೌಜನ್ಯಾ ಪ್ರಕರಣದಲ್ಲಿ ಮಾಡದ ತಪ್ಪಿಗೆ ಸಂತೋಷ್‌ರಾವ್ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ನಷ್ಟ ಅನುಭವಿಸಿದ್ದಾರೆ. ಕುಟುಂಬಕ್ಕೆ ನ್ಯಾಯ ಹಾಗೂ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಂಸ್ಥೆ ನೆರವು ನೀಡಲಿದೆ. ಸಂಬಂಧಪಟ್ಟ ಇಲಾಖೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸಂತೋಷ್‌ರಾವ್‌ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದರು.

ಇತಿಹಾಸ ಸಂಶೋಧಕ ತಮ್ಮಣ್ಣ ಶೆಟ್ಟಿ, ಸುಧಾಕರ ರಾವ್ ಅವರ ಶಿಷ್ಯರೂ ಸೇರಿ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT