ಗುರುವಾರ , ಆಗಸ್ಟ್ 5, 2021
26 °C
ಮುಂದಿನ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ನಡೆದ ಧಾರ್ಮಿಕ ವಿಧಿವಿಧಾನ

ಕೃಷ್ಣಾಪುರ ಮಠದ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಕೃಷ್ಣಮಠದಲ್ಲಿ ಕಟ್ಟಿಗೆ ಮುಹೂರ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜ.18, 2022ರಿಂದ ಆರಂಭವಾಗಲಿರುವ ಕೃಷ್ಣಾಪುರ ಮಠದ ಪರ್ಯಾಯ ಪೂರ್ವಭಾವಿಯಾಗಿ ಭಾನುವಾರ ಕೃಷ್ಣಮಠದಲ್ಲಿ ಕಟ್ಟಿಗೆ ಮುಹೂರ್ತ ನೆರವೇರಿತು.

ಮುಂದಿನ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಗಳ ಸಮ್ಮುಖದಲ್ಲಿ ಮಧ್ವಸರೋವರದ ಈಶಾನ್ಯ ಭಾಗದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಟ್ಟಿಗೆ ಮೂಹೂರ್ತ ನಡೆಯಿತು.

ಇದಕ್ಕೂ ಮುನ್ನ ಕೃಷ್ಣಾಪುರ ಮಠದ ಪಟ್ಟದ ದೇವರಾದ ಕಾಳೀಯ ಮರ್ಧನ ಕೃಷ್ಣ ಹಾಗೂ ನರಸಿಂಹ ದೇವರಿಗೆ ಪೂಜೆ ಸಲ್ಲಿಸಲಾಯಿತು. ರಥಬೀದಿಯಲ್ಲಿ ಕಟ್ಟಿಗೆಯ ಹೊರೆಯನ್ನು ಹೊತ್ತು ಚಂದ್ರಮೌಳೇಶ್ವರ, ಅನಂತೇಶ್ವರ ದೇವರ ದರ್ಶನ ಮಾಡಲಾಯಿತು. ಅಷ್ಟಮಠಗಳ ವಿದ್ವಾಂಸರಿಗೆ ನವಗ್ರಹ ದಾನ ಹಾಗೂ ಗೌರವ ಸಮರ್ಪಿಸಲಾಯಿತು.

ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತ ನಡೆಯುತ್ತದೆ. ಮುಂದಿನ ಪರ್ಯಾಯದ ಅವಧಿಯಲ್ಲಿ ಅನ್ನದಾಸೋಹಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂಬುದು ಮುಹೂರ್ತಗಳ ಆಚರಣೆ ಹಿಂದಿರುವ ಉದ್ದೇಶ.

ಬಾಳೆ ಎಲೆಗಳ ಕೊರತೆಯಾಗಬಾರದು ಎಂದು ಬಾಳೆ ಮುಹೂರ್ತ, ಉರುವಲಿಗೆ ಕಟ್ಟಿಗೆ ಕೊರತೆಯಾಗಬಾರದು ಎಂದು ಕಟ್ಟಿಗೆ ಮುಹೂರ್ತ, ಆಹಾರ ಪದಾರ್ಥಗಳ ಅಭಾವ ಎದುರಾಗಬಾರದು ಎಂದು ಅಕ್ಕಿ ಹಾಗೂ ಭತ್ತ ಮುಹೂರ್ತ ನಡೆಯುತ್ತದೆ. ಕೃಷ್ಣಾಪುರ ಮಠ ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮೂಹೂರ್ತ ಮುಗಿಸಿದ್ದು, ಭತ್ತದ ಮುಹೂರ್ತ ಮಾತ್ರ ಬಾಕಿ ಇದೆ.

ಮುಂದಿನ ಪರ್ಯಾಯಕ್ಕೆ ಸಜ್ಜಾಗಿದ್ದೇವೆ ಎಂಬ ಸೂಚನೆಯನ್ನು ಹಾಲಿ ಪರ್ಯಾಯ ಮಠಕ್ಕೆ ಮುಟ್ಟಿಸುವುದು ಮೂಹೂರ್ತಗಳ ಆಚರಣೆಯ ಹಿಂದಿರುವ ಉದ್ದೇಶಗಳಲ್ಲೊಂದು ಎನ್ನುತ್ತಾರೆ ಮಠದ ವಿದ್ವಾಂಸರು.

ಕಟ್ಟಿಗೆ ಮೂಹೂರ್ತದ ಸಂದರ್ಭ ಕಟೀಲು ದೇವಸ್ಥಾನದ ಅನಂತ ಪದ್ಮನಾಭ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ, ಕಮಲಾದೇವಿ ಪ್ರಸಾಸ ಅಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರ, ಶಿರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು