ಮಾರಣಕಟ್ಟೆ: ಕೆಂಡ ಮಹೋತ್ಸವ ಸಂಭ್ರಮ

ಕುಂದಾಪುರ: ಪರಶುರಾಮ ಸೃಷ್ಟಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ, ಶ್ರೀ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕ್ಷೇತ್ರ ಎಂದು ಹೇಳಲಾಗುವ ತಾಲ್ಲೂಕಿನ ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ರಾತ್ರಿ ನಡೆದ ಗೆಂಡ ಸೇವೆ (ಕೆಂಡ ಮಹೋತ್ಸವ) ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ಪಾಲ್ಗೊಂಡರು.
ಉತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿ ಆರಂಭಿಸಲಾಗಿತ್ತು. ರಾತ್ರಿ ನಡೆದ ಗೆಂಡ ಸೇವೆಯಲ್ಲಿ (ಕೆಂಡ ಮಹೋತ್ಸವ) ಜಾತಿ ಬೇಧವಿಲ್ಲದೆ ಜನರು ಕೆಂಡದ ರಾಶಿ ತುಳಿದು ಹರಕೆ ತೀರಿಸಿದರು. ಬ್ರಹ್ಮಲಿಂಗೇಶ್ವರನನ್ನು ನಂಬಿರುವ ಕುಟುಂಬದ ಕನಿಷ್ಠ ಒಬ್ಬ ಸದಸ್ಯ ಜಾತ್ರೆಗೆ ಬಂದು ಪೂಜೆ ಸಲ್ಲಿಸುವುದು ಈ ಭಾಗದ ವಾಡಿಕೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ದೇವರ ದರ್ಶನ ಪಡೆದು ಹೂ–ಹಣ್ಣು–ಕಾಯಿ ಹರಕೆ ಸಲ್ಲಿಸಿದರು. ಮಾರಣಕಟ್ಟೆಯ ಹಬ್ಬಕ್ಕಾಗಿ ಮುಂಬಯಿ, ಬೆಂಗಳೂರು, ಗೋವಾ, ಹುಬ್ಬಳ್ಳಿ, ಬೆಳಗಾವಿ, ಪೂನಾದಿಂದಲೂ ಭಕ್ತರು ಬರುತ್ತಾರೆ. 2019ರಿಂದ ಕೋವಿಡ್ ಕಾರಣದಿಂದಾಗಿ ಅದ್ದೂರಿ ಜಾತ್ರೆಗೆ ನಿರ್ಬಂಧಗಳು ಕಾಡಿತ್ತು. ಹೀಗಾಗಿ ಈ ವರ್ಷ ಭಕ್ತರ ಸಂಖ್ಯೆ ಹೆಚ್ಚಾಗಿತ್ತು.
ಸೇವಂತಿಗೆ ಬೇಡಿಕೆ: ಹೆಮ್ಮಾಡಿ ಹಾಗೂ ಆಸು ಪಾಸಿನಲ್ಲಿ ಬೆಳೆಯುವ ಹಳದಿ ಬಣ್ಣದ ಸೇವಂತಿಗೆ ಹೂವುಗಳನ್ನು ಬ್ರಹ್ಮಲಿಂಗೇಶ್ವರನಿಗೆ ಮೊದಲು ಅರ್ಪಿಸುವ ವಾಡಿಕೆ ಇರುವುದರಿಂದ ಸೇವಂತಿ ಬೆಳೆಗಾರರು ಶ್ರೀ ದೇವರಿಗೆ ಮಾಲೆ ಅರ್ಪಿಸುವ ಮೂಲಕ ಧನ್ಯರಾದರು. ಬ್ರಹ್ಮಲಿಂಗನಿಗೆ ಅತ್ಯಂತ ಪ್ರಿಯವಾದುದು ಎಂಬ ನಂಬಿಕೆ ಇರುವುದರಿಂದ ಹಳದಿ ಬಣ್ಣದ ಸೇವಂತಿಗೆ ಸಂಕ್ರಮಣದ ಹಬ್ಬದ ಪರ್ವ ಕಾಲದಲ್ಲಿ ಭಾರಿ ಬೇಡಿಕೆ. ಹಬ್ಬದ ಹಿಂದಿನ ರಾತ್ರಿ ಮಾರುಣಕಟ್ಟೆಗೆ ಬರುವ ಹೂವುಗಳು ನಂತರ 4ರಿಂದ 5 ದಿನ ದೇವರ ಮುಡಿ ಏರುತ್ತದೆ.
ವಿಶೇಷ ಬಸ್ ವ್ಯವಸ್ಥೆ: ಭಕ್ತರಿಗಾಗಿ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಬೇರೆ ಬೇರೆ ಭಾಗದಿಂದ ವಿಶೇಷ ಬಸ್ ಹಾಗೂ ವಾಹನದ ವ್ಯವಸ್ಥೆ ಮಾಡಲಾಗಿದೆ.
ಕುಂದಾಪುರ ಉಪ ವಿಭಾಗದ ಡಿವೈಎಸ್‌ಸಿ ಬೆಳ್ಳಿಯಪ್ಪ ಹಾಗೂ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಬೈಂದೂರು ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಡಾ.ಅತುಲ್ ಕುಮಾರ ಶೆಟ್ಟಿ, ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ, ಉದ್ಯಮಿ ಕೃಷ್ಣಮೂರ್ತಿ ಮಂಜ, ವಂಡ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ್‌ಕುಮಾರ ಶೆಟ್ಟಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.