ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ಸೇವೆಯೇ ಪರ್ಯಾಯ ಸಂಕಲ್ಪ- ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ

Last Updated 16 ಜನವರಿ 2022, 19:30 IST
ಅಕ್ಷರ ಗಾತ್ರ

ಉಡುಪಿ: ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗಳ ನಾಲ್ಕನೇ ಪರ್ಯಾಯ ಜ.18ರಿಂದ ಆರಂಭವಾಗಲಿದೆ. ಅಷ್ಟಮಠಗಳ ಯತಿಗಳ ಪೈಕಿ ಹಿರಿಯ ಯತಿಗಳಾಗಿರುವ ವಿದ್ಯಾಸಾಗರ ತೀರ್ಥರು ಮಿತಭಾಷಿ ಹಾಗೂ ಸರಳ ವ್ಯಕ್ತಿತ್ವಕ್ಕೆ ಹೆಸರಾದವರು. ಮಾರ್ಚ್‌ 15, 1958ರಂದು ಶ್ರೀಪತಿ ತಂತ್ರಿ ಹಾಗೂ ಜಾನಕಿ ದಂಪತಿಯ ಪುತ್ರರಾಗಿ ಜನಿಸಿದ ಶ್ರೀಗಳ ಪೂರ್ವಾಶ್ರಮದ ಹೆಸರು ರಮಾಪತಿ.

ಸೆ.3, 1971ರಲ್ಲಿ 13ನೇ ವಯಸ್ಸಿನಲ್ಲಿ ಪುತ್ತಿಗೆ ಮಠದ ಸುಜ್ಞಾನೇಂದ್ರ ತೀರ್ಥರಿಂದ ಸನ್ಯಾಸಾಶ್ರಮ ದೀಕ್ಷೆಪಡೆದ ವಿದ್ಯಾಸಾಗರ ತೀರ್ಥರು ಆಶ್ರಮದ ಬಳಿಕ ಸೋದೆ ವಾದಿರಾಜ ಮಠದ ವಿಶ್ವೋತ್ತಮ ತೀರ್ಥರಿಂದ ಮಧ್ವಸಿದ್ದಾಂತ, ವೇದ–ವೇದಾಂತಗಳ ಅಧ್ಯಯನ ಮಾಡಿದ್ದಾರೆ. 1974, 1990, 2006ರಲ್ಲಿ ಯಶಸ್ವಿಯಾಗಿ ಪರ್ಯಾಯ ಮುಗಿಸಿದ್ದು, ನಾಲ್ಕನೇ ಬಾರಿ ಸರ್ವಜ್ಞ ಪೀಠವೇರಲು ಸಜ್ಜಾಗಿದ್ದಾರೆ.

–ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ಮಾಡುತ್ತಿದ್ದೀರಿ, ಈ ಬಗ್ಗೆ ನಿಮ್ಮ ಅನಿಸಿಕೆಗಳು ಏನು ?

ಎಲ್ಲವೂ ಕೃಷ್ಣನ ಇಚ್ಛೆ ಹಾಗೂ ಸೂಚನೆಯಷ್ಟೆ. ಕೃಷ್ಣ ವಹಿಸಿರುವ ಜವಾಬ್ದಾರಿ ಹಾಗೂ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವುದಷ್ಟೆ ಆದ್ಯ ಕರ್ತವ್ಯ. ದೇವರು ತೋರಿಸಿದ ಮಾರ್ಗದಲ್ಲಿ ಮುನ್ನಡೆಯುವೆ. ನಾಲ್ಕು ಬಾರಿ ಕೃಷ್ಣನ ಪೂಜೆ ಮಾಡುವ ಅವಕಾಶ ಸಿಕ್ಕಿರುವುದಕ್ಕೆ ಕೃಷ್ಣನಿಗೆ ಅನಂತ ಕೃತಜ್ಞತೆ ಸಲ್ಲಿಸುತ್ತೇವೆ.

–ಪರ್ಯಾಯ ಸಂಕಲ್ಪಗಳು ಇವೆಯೇ ?

ದೇವರ ಸೇವೆ ಮಾಡುವುದೇ ಪರ್ಯಾಯದ ಪ್ರಮುಖ ಸಂಕಲ್ಪ. ಕಳೆದ ಪರ್ಯಾಯದ ಅವಧಿಯಲ್ಲಿ ಅನುಷ್ಠಾನಗೊಂಡ ಕಾರ್ಯಕ್ರಮಗಳನ್ನು ಮುಂದುವರಿಸುವುದು. ‘ವಿಶ್ವ ಉಪಾಸನೆ’ ಎಂಬ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳ ಅನುಷ್ಠಾನ, ಸಮಾಜಕ್ಕೆ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಸನ್ಮಾನಿಸುವುದು, ಹೀಗೆ ಭಕ್ತರನ್ನು ಸಂತೃಪ್ತಗೊಳಿಸುವ ಕಾರ್ಯಕ್ರಮಗಳ ಆಯೋಜನೆಗೆ ಒತ್ತು ನೀಡಲಾಗುವುದು. ದೇವರು ಬಯಸಿದರೆ ವಜ್ರಕವಚ ಸಮರ್ಪಿಸುವ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು. ಪರ್ಯಾಯದ ಅವಧಿಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಇದರ ಹೊರತಾಗಿ ಪ್ರಮುಖ ಸಂಕಲ್ಪಗಳು ಇಲ್ಲ.

– ಪರ್ಯಾಯದ ಮೇಲೆ ಕೋವಿಡ್‌–19 ನಕಾರಾತ್ಮಕ ಪರಿಣಾಮ ಬೀರಲಿದೆಯೇ ?

ಈ ಕುರಿತು ಸದ್ಯಕ್ಕೆ ಪ್ರತಿಕ್ರಿಯಿಸುವುದು ಸರಿಯಲ್ಲ. ಕೋವಿಡ್‌ ದುಷ್ಪರಿಣಾಮವನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ದೇವರೇ ದಾರಿ ತೋರಿಸುತ್ತಾನೆ. ಭಕ್ತರ ಸಹಕಾರ ಇರುವವರೆಗೂ ಪರ್ಯಾಯಕ್ಕೆ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸುವ ಮಾರ್ಗಸೂಚಿಗಳನ್ನು ಕೃಷ್ಣಮಠದಲ್ಲಿ ಚಾಚೂತಪ್ಪದೆ ಅನುಷ್ಠಾನಗೊಳಿಸಲಾಗುವುದು.

–ಆಧ್ಯಾತ್ಮ ಹಾಗೂ ದೇವರ ಸೇವೆಯ ಕುರಿತಾಗಿ ನಿಮ್ಮ ಅಭಿಪ್ರಾಯಗಳೇನು ?

ನಾವೆಲ್ಲರೂ ದೇವರ ಸೇವಕರು ಮಾತ್ರ, ಆತನ ಅಣತಿಯಂತೆಯೇ ನಾವೆಲ್ಲರೂ ನಡೆಯಬೇಕು. ಸರಳತೆಯೇ ಆಧ್ಯಾತ್ಮ. ದೇವರು ಭಕ್ತರಿಂದ ಸಂಪತ್ತನ್ನು ಬಯಸುವುದಿಲ್ಲ, ಭಕ್ತಿಯನ್ನಷ್ಟೆ ಅಪೇಕ್ಷಿಸುತ್ತಾನೆ. ಭಕ್ತಿಯೇ ಪರಮಾತ್ಮನನ್ನು ಗೆಲ್ಲವ ಮಾರ್ಗವಾಗಿದ್ದು, ಅದನ್ನೇ ಅನುಸರಿಸುತ್ತೇನೆ.

–ಮಠಾಧಿಪತಿಗಳು ಐಶಾರಾಮಿ ಕಾರುಗಳಲ್ಲಿ ಸಂಚರಿಸುವಾಗ ನೀವಿನ್ನು ಅಂಬಾಸಿಡರ್ ಕಾರು ಬಳಸುತ್ತಿದ್ದೀರಿ ?

ಸರಳತೆಯಲ್ಲಿ ಗಟ್ಟಿಯಾದ ನಂಬಿಕೆ ಇಟ್ಟಿದ್ದು, ಐಶ್ವರ್ಯ, ಸಂಪತ್ತು, ಐಶಾರಾಮಿ ವಸ್ತುಗಳ ಬಗ್ಗೆ ವ್ಯಾಮೋಹವಿಲ್ಲ. ಸದಾ ದೇವರ ಸೇವಕನಾಗಿರಲು ಬಯಸುತ್ತೇನೆ. ಸ್ವಾಮೀಜಿ ಜಿಪುಣರು ಎಂಬ ಟೀಕೆಗಳು ಕೇಳಿಬರುತ್ತವೆ, ಇದಕ್ಕೆಲ್ಲ ತಲೆ ಕೆಡಸಿಕೊಳ್ಳುವುದಿಲ್ಲ. ಸರಳತೆ ಮನಸ್ಸಿಗೆ ಶಾಂತಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT