ಉಡುಪಿ: ಇಂದ್ರಾಳಿಯ ರೈಲು ನಿಲ್ದಾಣವನ್ನು ಭಾರತೀಯ ರೈಲ್ವೆಯ ಮೂಲಕ ಅಭಿವೃದ್ಧಿ ಪಡಿಸಬೇಕೆಂಬ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಎಕ್ಸಿಕ್ಯೂಟಿವ್ ಲಾಂಜ್ ಉದ್ಘಾಟಿಸಿ ಅವರು ಮಾತನಾಡಿದರು.
ಇಂದ್ರಾಳಿ ರೈಲು ನಿಲ್ದಾಣದ ಅಭಿವೃದ್ಧಿ ಮತ್ತು ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯ ಜೊತೆ ವಿಲೀನ ಮಾಡಬೇಕೆನ್ನುವ ಪ್ರಸ್ತಾವಕ್ಕೆ ಶಕ್ತಿ ತುಂಬಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಕೊಂಕಣ ರೈಲ್ವೆಯು ಈ ಭಾಗದ ಜನರ ಕನಸಾಗಿದೆ. ಇದಕ್ಕೆ ಮಾಜಿ ರೈಲ್ವೆ ಸಚಿವ ದಿ.ಜಾರ್ಜ್ ಫರ್ನಾಂಡಿಸ್ ಅವರ ಕೊಡುಗೆ ಮಹತ್ವದ್ದು ಎಂದರು.
ಕೊಂಕಣ ರೈಲ್ವೆಯು ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದ್ದರೂ ಕೂಡ ಕೆಲವೊಂದು ಸಮಸ್ಯೆಗಳು ಇನ್ನೂ ಇವೆ. ಇದನ್ನು ಭಾರತೀಯ ರೈಲ್ವೆಯ ಜೊತೆ ವಿಲೀನ ಮಾಡಿದರೆ ಸಮಸ್ಯೆ ಪರಿಹಾರವಾಗಬಹುದು ಮತ್ತು ಇನ್ನಷ್ಟು ರೈಲುಗಳ ಸೇವೆ ಲಭ್ಯವಾಗಿ ಇಲ್ಲಿನ ಜನರಿಗೆ ಅನುಕೂಲವಾಗಬಹುದು ಎಂದು ಹೇಳಿದರು.
ಎಕ್ಸಿಕ್ಯೂಟಿವ್ ಲಾಂಜ್ ಉದ್ಘಾಟನೆಯಾಗಿರುವುದರಿಂದ ರೈಲು ನಿಲ್ದಾಣದಲ್ಲಿ ದೀರ್ಘಕಾಲ ಕಾಯಬೇಕಾದ ಪರಿಸ್ಥಿತಿ ಬಂದಾಗ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಮಡ್‌ಗಾಂವ್‌ನಿಂದ ಮಂಗಳೂರಿಗೆ ಇರುವ ವಂದೇ ಭಾರತ್ ರೈಲು ಸೇವೆಯನ್ನು ಮುಂಬೈವರೆಗೂ ವಿಸ್ತರಿಸಬೇಕು ಎಂದು ಕೇಂದ್ರ ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಸಕಲೇಶಪುರದ ಬಳಿ ರೈಲು ಹಳಿಗೆ ಮಣ್ಣು ಜರಿದು ಬೀಳುವುದರಿಂದ ಸಮಸ್ಯೆಯಾಗುತ್ತಿದೆ. ಈ ಪ್ರದೇಶದ ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿ ಸುರಂಗ ಮಾರ್ಗ ಯೋಜನೆಯಲ್ಲಿ ಸುರಂಗ ನಿರ್ಮಿಸುವಾಗ ಒಂದು ಸುರಂಗವನ್ನು ರೈಲ್ವೆ ಮಾರ್ಗಕ್ಕಾಗಿ ಮೀಸಲಿರಿಸಬೇಕೆಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಮಾಡಲಾಗುವುದು ಎಂದು ಯಶ್‌ಪಾಲ್ ಹೇಳಿದರು.
ನಾಗದತ್ ರಾವ್, ಬಾಳಾಸಾಹೇಬ್ ನಿಕಂ, ದಿಲೀಪ್ ಡಿ. ಭಟ್, ಎಸ್.ಕೆ. ಬಾಲಾ, ಆರ್.ಡಿ. ಗೋಲಬ್, ಸುಧಾ ಕೃಷ್ಣ ಮೂರ್ತಿ, ಜಿ.ಡಿ. ಮೀನಾ ಇದ್ದರು.
ಲಾಂಜ್ ಉದ್ಘಾಟನೆಗೂ ಮುನ್ನ ಯಕ್ಷಗಾನ ನೃತ್ಯ ಹಾಗೂ ಹುಲಿವೇಷ ಕುಣಿತ ಗಮನ ಸೆಳೆಯಿತು.
ವಿವಿಧ ಸೌಲಭ್ಯ: ಹವಾನಿಯಂತ್ರಿತ ಎಕ್ಸಿಕ್ಯೂಟಿವ್ ಲಾಂಜ್‌ನಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೋಫಾ ಅಳವಡಿಸಲಾಗಿದೆ. ದಿನಪತ್ರಿಕೆ, ಟಿ.ವಿ. ಕೂಡ ಲಭ್ಯವಿದೆ. ಕೆಫೆ ಸೌಲಭ್ಯ, ಸ್ವಚ್ಛ ಶೌಚಾಲಯ, ಉಚಿತ ವೈಫೈ, ಮೊಬೈಲ್ ಮತ್ತು ಲ್ಯಾಪ್ ಟಾಪ್ ಚಾರ್ಜಿಂಗ್ ಸೌಲಭ್ಯವೂ ಇದೆ. ಇದಕ್ಕೆ ಗಂಟೆಗೆ ₹50 ಮತ್ತು ಜಿಎಸ್‌ಟಿ ಶುಲ್ಕ ವಿಧಿಸಲಾಗುವುದು ಎಂದು ಕೊಂಕಣ ರೈಲ್ವೆಯ ಮೂಲಗಳು ತಿಳಿಸಿವೆ.
‘ನಿಲ್ದಾಣ ಅಭಿವೃದ್ಧಿಗೆ ₹2 ಕೋಟಿ ಮಂಜೂರು’ ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿ ಫ್ಲಾಟ್‌ಫಾರಂ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳಿಗೆ ₹2 ಕೋಟಿ ಮಂಜೂರಾಗಿದೆ ಎಂದು ಕೊಂಕಣ ರೈಲ್ವೆ ನಿಗಮದ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಹೇಳಿದರು. ಉಡುಪಿ ರೈಲು ನಿಲ್ದಾಣ ಮಾತ್ರವಲ್ಲದೆ ಸುರತ್ಕಲ್ ಸೇರಿದಂತೆ ರಾಜ್ಯದ ವಿವಿಧ ರೈಲು ನಿಲ್ದಾಣಗಳ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ ಎಂದರು. ಇಂದ್ರಾಳಿ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲು ಅಂದಾಜು ₹9 ಕೋಟಿ ಅನುದಾನ ಬೇಕು. ಕೊಂಕಣ ರೈಲ್ವೆಯ ಪ್ರಮುಖ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಇನ್ನಷ್ಟು ಅನುದಾನ ಮಂಜೂರು ಮಾಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.