ಮಂಗಳವಾರ, ಸೆಪ್ಟೆಂಬರ್ 21, 2021
29 °C
ಜಿಲ್ಲೆಯ ಇಬ್ಬರು ನಾಯಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ: ಹಾಲಾಡಿಗಿಲ್ಲ ಮಣೆ

ಉಡುಪಿ: ಕೋಟ, ಸುನಿಲ್ ಕುಮಾರ್‌ಗೆ ಒಲಿದ ಮಂತ್ರಿಗಿರಿ, ಹಾಲಾಡಿಗಿಲ್ಲ ಮಣೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸ್ಥಾನ ದೊರೆತಿದೆ. ಈ ಮೂಲಕ ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿಗಿರಿ ಸಿಕ್ಕಿದ್ದು, ಜಿಲ್ಲೆಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆತಂತಾಗಿದೆ.

ಮೊದಲ ಬಾರಿಗೆ ಮಂತ್ರಿಗಿರಿ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್‌ಗೆ ಮೊದಲ ಬಾರಿ ಸಚಿವ ಸ್ಥಾನ ಸಿಕ್ಕಿದೆ. 2004, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೂ ಅವರಿಗೆ ಸಚಿವರಾಗುವ ಯೋಗ ಕೂಡಿ ಬಂದಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಕೊನೆ ಕ್ಷಣದಲ್ಲಿ ಹುಸಿಯಾಗಿತ್ತು. ಆದರೆ, ಬೊಮ್ಮಾಯಿ ಸಂಪುಟದಲ್ಲಿ ನಿರೀಕ್ಷೆ ನಿಜವಾಗಿದೆ.

ರಾಜಕೀಯ ಜೀವನ:‌ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನವರಾದ ವಾಸುದೇವ ಸುನಿಲ್ ಕುಮಾರ್ ರಾಜಕೀಯವಾಗಿ ಭದ್ರ ನೆಲೆ ಕಂಡುಕೊಂಡಿದ್ದು ಕಾರ್ಕಳದಲ್ಲಿ. ಕಾಲೇಜು ದಿನಗಳಲ್ಲೇ ರಾಷ್ಟ್ರೀಯವಾದ ಚಿಂತನೆಗಳನ್ನು ಮೈಗೂಡಿಸಿಕೊಂಡು, ಎಬಿವಿಪಿಯಲ್ಲಿ ಹೋರಾಟಗಳ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು.

ಪ್ರಖರ ಹಿಂದುತ್ವವಾದಿಯಾಗಿರುವ ಸುನಿಲ್‌ ಕುಮಾರ್ ಬಜರಂಗ ದಳದ ಮೂಲಕ ಹಿಂದೂ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರು. 1997ರ ದತ್ತಪೀಠ ಹೋರಾಟದಲ್ಲಿ ಹಿಂದೂಗಳನ್ನು ಸಂಘಟಿಸುವ ಮೂಲಕ ಗಮನ ಸೆಳೆದರು. ಬಜರಂಗ ದಳದ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿ, ರಾಜ್ಯ ಸಂಚಾಲಕರಾಗಿ ದುಡಿದ ಅನುಭವ ಸುನಿಲ್ ಅವರ ಬೆನ್ನಿಗಿದೆ.

ಕಾಂಗ್ರೆಸ್‌ ಕೋಟೆ ಛಿದ್ರ: ದಶಕಗಳಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಾರ್ಕಳ ಕ್ಷೇತ್ರವನ್ನು ಛಿದ್ರ ಮಾಡುವಲ್ಲಿ ಯಶಸ್ವಿಯಾದರು. ಆಡಳಿತ ವಿರೋಧಿ ಅಲೆಯ ಲಾಭ ಪಡೆದು 2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎಚ್.ಗೋಪಾಲ್ ಭಂಡಾರಿ ವಿರುದ್ಧ ಗೆದ್ದು ಮೊದಲ ಬಾರಿಗೆ ಶಾಸಕರಾದರು.

ಬಳಿಕ 2013 ಹಾಗೂ 2018ರ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಕಾರ್ಕಳ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿ ಮಾಡಿದರು. ರಾಜಕೀಯದಲ್ಲಿ ಹಂತ ಹಂತವಾಗಿ ಬೆಳೆಯುತ್ತ ಸರ್ಕಾರದ ಮುಖ್ಯ ಸಚೇತಕರಾಗಿ, ಕೇರಳ ಬಿಜೆಪಿಯ ಸಹ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಈಗ ಸಚಿವ ಸ್ಥಾನ ಒಲಿದು ಬಂದಿದೆ.

ಮೂರು ಬಾರಿ ಸಚಿವ ಸ್ಥಾನ: ಸರಳ, ಸಜ್ಜನ ರಾಜಕಾರಣಿ ಎಂದೇ ಕರೆಸಿಕೊಳ್ಳುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಒಲಿದು ಬಂದಿದೆ. 1999, 2010 ಹಾಗೂ 2016ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಕೋಟ 2012ರಲ್ಲಿ ಮುಜರಾಯಿ ಹಾಗೂ ಮೀನುಗಾರಿಕೆ ಖಾತೆಯ ಸಚಿವರಾಗಿದ್ದರು.

2018ರಲ್ಲಿ ಎರಡನೇ ಬಾರಿಗೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಸಾರಿಗೆ ಸಚಿವರಾದರು. ಬಳಿಕ ಸಂಪುಟ ವಿಸ್ತರಣೆಯಾಗಿ ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದರು. ಈಗ ಮೂರನೇ ಬಾರಿ ಸಚಿವರಾಗಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂರ್ತೆದಾರರ ಸಂಘಟನೆಯಲ್ಲಿ ಗುರುತಿಸಿಕೊಂಡು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಅಂದಿನ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ ಕೆಳಸ್ತರದಿಂದ ಉನ್ನತ ಸ್ಥಾನದವರೆಗೂ ಬೆಳೆದವರು ಕೋಟ.

ಮಂದರ್ತಿ ಯಕ್ಷಗಾನ ಮೇಳದಲ್ಲಿ ಕಲಾವಿದರ ಪರವಾಗಿ ಹೋರಾಟ, ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ಸ್ಮರಿಸುವ ಕಾರ್ಯಕ್ರಮಗಳ ಆಯೋಜನೆ, ಸಪ್ತಪದಿ ಕಾರ್ಯಕ್ರಮ, ಗೋಶಾಲೆಗಳ ಅಭಿವೃದ್ಧಿಗೆ ಒತ್ತು ಹಾಗೂ ರಾಜ್ಯದಲ್ಲೇ ಮೊದಲ ಬಾರಿಗೆ ಪಂಚಾಯಿತಿ ಜನ ಪ್ರತಿನಿಧಿಗಳಿಗೆ 'ಹೊಳಪು' ಕ್ರೀಡಾಕೂಟ ಆಯೋಜಿಸಿ ಗಮನ ಸೆಳೆದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ, ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿ ದುಡಿದ ಅನುಭವ ಕೋಟ ಅವರಿಗಿದೆ. ಆರ್‌ಎಸ್‌ಎಸ್‌ನ ಶಿಸ್ತಿನ ಸ್ವಯಂ ಸೇವಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಕರಾವಳಿಯ ಪ್ರಬಲ ಬಿಲ್ಲವ ಸಮುದಾಯದ ಮುಖಂಡರು.

‘ಹಾಲಾಡಿಗಿಲ್ಲ ಸಚಿವ ಸ್ಥಾನ’

ಅಭಿಮಾನಿಗಳಿಂದ ಕುಂದಾಪುರದ ವಾಜಪೇಯಿ ಎಂದು ಕರೆಸಿಕೊಳ್ಳುವ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದೆ. 1999, 2004, 2008, 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಸತತ 5 ಬಾರಿ ಗೆದ್ದರೂ ಒಮ್ಮೆಯೂ ಹಾಲಾಡಿ ಸಚಿವರಾಗಿಲ್ಲ. ಸಚಿವ ಸ್ಥಾನಕ್ಕೆ ಎಂದೂ ಲಾಬಿ ಮಾಡುವುದಿಲ್ಲ. ಸಚಿವ ಸ್ಥಾನ ಕೊಡಿ ಎಂದು ಯಾರ ಬಳಿಯೂ ಬೇಡುವುದಿಲ್ಲ ಎಂದು ಈಚೆಗಷ್ಟೆ ಹಾಲಾಡಿ ರಾಜಕೀಯ ವ್ಯವಸ್ಥೆಯ ವಿರುದ್ದ ಅಸಮಾಧಾನ ಹೊರಹಾಕಿದ್ದರು. ಈ ಬಾರಿಯಾದರೂ ಸಚಿವ ಸ್ಥಾನ ಸಿಗುತ್ತದೆ ಎಂಬ ಅವರ ಅಭಿಮಾನಿಗಳಿಗೆ ಮತ್ತೆ ನಿರಾಶೆಯಾಗಿದೆ.

ಅಪಪ್ರಚಾರದ ಮಧ್ಯೆ ಗೆದ್ದ ಕೋಟ

ಬ್ರಹ್ಮಾವರ ತಾಲ್ಲೂಕಿನ ಗಿಳಿಯಾರು ಗ್ರಾಮದಲ್ಲಿರುವ 13 ಸೆಂಟ್ಸ್ ಜಾಗದಲ್ಲಿ ಕೋಟ ಶ್ರೀನಿವಾಸ ಪೂಜಾರಿ ₹ 6 ಕೋಟಿ ವೆಚ್ಚದಲ್ಲಿ ಗುಡಿಸಲು ಕಟ್ಟುತ್ತಿದ್ದಾರೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಸದ್ದುಮಾಡಿ ಕೋಟ ಅವರ ರಾಜಕೀಯ ಜೀವನಕ್ಕೆ ಪೆಟ್ಟು ಬೀಳಬಹುದು ಎನ್ನಲಾಗಿತ್ತು. ಆದರೆ, ಆರೋಪದ ವಿರುದ್ಧ ಲೋಕಾಯುಕ್ತರಿಗೆ ಪತ್ರ ಬರೆದಿದ್ದ ಕೋಟ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದರೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಕೊನೆಗೂ ಅಪಪ್ರಚಾರಗಳ ನಡುವೆ ಕೋಟ ಮೂರನೇ ಬಾರಿ ಸಚಿವರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು