ಭಾನುವಾರ, ಜುಲೈ 25, 2021
28 °C
ತಾಯಿ, ಮಗು ಆರೋಗ್ಯ; ಶಿಶುವಿಗೆ ಸೋಂಕು ತಗುಲದಂತೆ ಎಚ್ಚರಿಕೆ: ಜಿಲ್ಲಾಧಿಕಾರಿ

ಉಡುಪಿ | ಮಗುವಿಗೆ ಜನ್ಮನೀಡಿದ ಕೋವಿಡ್ ಸೋಂಕಿತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಬುಧವಾರ ಕೋವಿಡ್ ಸೋಂಕಿತ ಗರ್ಭಿಣಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಚೇತರಿಸಿಕೊಳ್ಳುತ್ತಿದ್ದು, ಮಗು ಆರೋಗ್ಯವಾಗಿದೆ ಎಂದು ಜಿಲ್ಲಾ ಕೋವಿಡ್ ನೋಡೆಲ್‌ ಅಧಿಕಾರಿ ಡಾ.ಪ್ರಶಾಂತ್ ಭಟ್‌ ತಿಳಿಸಿದರು.

ಕಾರ್ಕಳದ 22 ವರ್ಷದ ಮಹಿಳೆ ಜೂನ್ 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಯಿತು. ಜಿಲ್ಲೆಯಲ್ಲಿ ಸೋಂಕಿತ ಗರ್ಭಿಣಿಗೆ ನಡೆದ ಮೊದಲ ಶಸ್ತ್ರಚಿಕಿತ್ಸೆ ಇದಾಗಿದ್ದು, ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸೂತಿ ತಜ್ಞೆ ಡಾ.ಶಶಿಕಲಾ ಕೆ.ಭಟ್‌, ಡಾ.ಸುರಭಿ ಸಿನ್ಹಾ, ಅರಿವಳಿಕೆ ತಜ್ಞ ಡಾ.ರೋಶನ್ ಶೆಟ್ಟಿ ತಂಡಕ್ಕೆ ವೆರೊನಿಕಾ, ಅಶ್ವಿನಿ, ಜಯಶ್ರೀ ನೆರವು ನೀಡಿದರು. ಡಾ.ಆಶಿಶ್ ಗುಪ್ತಾ, ಡಾ.ಚೈತನ್ಯ ಶಿಶುವಿನ ಆರೈಕೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌ ಈ ಕುರಿತು ಮಾತನಾಡಿ, ‘ಮಗುವಿಗೆ ಕೋವಿಡ್‌ ಸೋಂಕು ತಗುಲದಂತೆ ವೈದ್ಯರು ಎಚ್ಚರ ವಹಿಸಿದ್ದಾರೆ. ಮಗುವಿಗೂ ಕೋವಿಡ್‌ ಪರೀಕ್ಷೆ ಮಾಡಲಾಗುವುದು. ವರದಿ ನೆಗೆಟಿವ್ ಬಂದ ಬಳಿಕ ತಾಯಿಯ ಜತೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು’ ಎಂದರು.

4 ಪ್ರಕರಣ: ಬುಧವಾರ ನಾಲ್ವರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ. ಮೂವರು ಮುಂಬೈನಿಂದ ಬಂದವರಾಗಿದ್ದು, ಒಬ್ಬರಿಗೆ ಸ್ಥಳೀಯ ಸೋಂಕಿತನ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ವಿವರ ನೀಡಿದರು.‌

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1039ಕ್ಕೇರಿಕೆಯಾಗಿದ್ದು, ಇದುವರೆಗೂ 908 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 130 ಸಕ್ರಿಯ ಪ್ರಕರಣಗಳು ಮಾತ್ರ ಇವೆ. ಬುಧವಾರ 34 ಮಂದಿಯ ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 118 ವರದಿಗಳು ಬರುವುದು ಬಾಕಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು