ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ರಾಹುಲ್ ರಾಜಕೀಯ ಸೇವೆ ಮುಗಿಸುವ ಹುನ್ನಾರ; ಕಾಂಗ್ರೆಸ್

ರಾಹುಲ್‌ ಗಾಂಧಿ ವಿರುದ್ಧ ದ್ವೇಷದ ರಾಜಕಾರಣ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Published 12 ಜುಲೈ 2023, 12:22 IST
Last Updated 12 ಜುಲೈ 2023, 12:22 IST
ಅಕ್ಷರ ಗಾತ್ರ

ಕುಂದಾಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ದ್ವೇಷದ ರಾಜಕಾರಣ ನಡೆಸುತ್ತಾ, ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗ ಪಡಿಸಿಕೊಂಡು, ಸಾಂವಿಧಾನಿಕ ಸಂಸ್ಥೆಗಳ ಸ್ವಾತಂತ್ರ್ಯವನ್ನು ನಾಶಗೊಳಿಸುತ್ತಿರುವುದನ್ನು ವಿರೋಧಿಸಿ ಕೆಪಿಸಿಸಿ ಕರೆಯಂತೆ ಬುಧವಾರ ರಾಜ್ಯದಾದ್ಯಂತ ನಡೆದ ಮೌನ ಪ್ರತಿಭಟನೆಯ ಅಂಗವಾಗಿ ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಬ್ಲಾಕ್‌ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಭಾಗವಹಿಸಿದರು.

ವಿಧಾನಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪಕ್ಷದ ಪ್ರಮುಖರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಬಿ.ಹೆರಿಯಣ್ಣ, ಕೆ.ವಿಕಾಸ್ ಹೆಗ್ಡೆ, ಕೆದೂರು ಸದಾನಂದ ಶೆಟ್ಟಿ, ದೇವಾನಂದ ಶೆಟ್ಟಿ ಹಳ್ನಾಡು, ಅಶೋಕ ಪೂಜಾರಿ ಬೀಜಾಡಿ, ವಿನೋದ ಕ್ರಾಸ್ಟೋ, ಜ್ಯೋತಿ ವಿ ಪುತ್ರನ್‌, ರೇವತಿ ಎಸ್‌ ಶೆಟ್ಟಿ, ಜ್ಯೋತಿ ನಾಯ್ಕ್‌, ಗಣೇಶ್‌ ಶೇರುಗಾರ, ಚಂದ್ರ ಎ ಅಮೀನ್‌, ಚಂದ್ರಶೇಖರ ಶೆಟ್ಟಿ, ಚಂದ್ರಶೇಖರ ಖಾರ್ವಿ, ಅಬ್ಬು ಮಹಮ್ಮದ್, ಪ್ರಭಾವತಿ ಶೆಟ್ಟಿ, ನಾರಾಯಣ ಆಚಾರ್ ಕೋಣಿ, ಇಚ್ಛಿತಾರ್ಥ ಶೆಟ್ಟಿ, ರಮೇಶ್ ಶೆಟ್ಟಿ ವಕ್ವಾಡಿ, ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ ಶೋಭಾ ಸಚ್ಚಿದಾನಂದ, ಅಶ್ಫಕ್, ಸುಜನ್‌ ಶೆಟ್ಟಿ, ಕೇಶವ್ ಭಟ್, ಮೇಬಲ್ ಡಿಸೋಜ, ರಾಕೇಶ್ ಶೆಟ್ಟಿ, ಅಶೋಕ ಸುವರ್ಣ, ದಿವಾಕರ ಶೆಟ್ಟಿ ಕೋಣಿ, ಗಂಗಾಧರ ಶೆಟ್ಟಿ ಇದ್ದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ‘ರಾಹುಲ್ ಗಾಂಧಿ ಅವರ ಬೆಳವಣಿಗೆ ಸಹಿಸದ ಬಿಜೆಪಿ ವಾಮ ಮಾರ್ಗದ ಮೂಲಕ ಅವರ ರಾಜಕೀಯ ಸೇವೆ ಮುಗಿಸುವ ಹುನ್ನಾರ ನಡೆಸುತ್ತಿದೆ. ಬಿಜೆಪಿ ಪಕ್ಷದ ಈ ಪ್ರಯತ್ನಗಳನ್ನು ನಾವು ಖಂಡಿಸುತ್ತೇವೆ. ಇಂತಹ ಸಂಕಷ್ಟದ ಕಾಲದಲ್ಲಿ ದೇಶವಾಸಿಗಳಾದ ನಾವೆಲ್ಲ ನಿಮ್ಮೊಂದಿಗೆ ಅಚಲವಾಗಿದ್ದೇವೆ ಎನ್ನುವ ಸಂದೇಶದೊಂದಿಗೆ ರಾಹುಲ್‌ ಗಾಂಧಿ ಅವರಿಗೆ ಶಕ್ತಿ ನೀಡಲು ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಸಂಘಟಿಸಲಾಗಿದೆ’ ಎಂದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಕೆ.ವಿಕಾಸ್‌ ಹೆಗ್ಡೆ ಮಾತನಾಡಿ, ‘ಶಾಂತಿ, ಅಹಿಂಸೆ, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಾಗೂ ದೇಶದ ಅಖಂಡತೆಗಾಗಿ ಬಲಿದಾನವನ್ನು ಮಾಡಿರುವ ಕುಟುಂಬದ ಕುಡಿಯಾದ ರಾಹುಲ್ ಗಾಂಧಿ ಅವರ ರಾಜಕೀಯ ಜೀವನವನ್ನು ಮುಗಿಸಲು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿರುವುದು ಅತ್ಯಂತ ಖೇದಕರ. ಯಾರು ಏನೇ ಪ್ರಯತ್ನ ಮಾಡಿದರೂ, ರಾಹುಲ್ ಗಾಂಧಿಯವರು ಈ ದೇಶದ ಮುಂದಿನ ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ‘ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ರಾಹುಲ್ ಗಾಂಧಿ ಅವರು ವಿವಿಧ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಅದಾನಿ ಅವರ ನಡುವಿನ ಸಂಬಂಧವನ್ನು ನಿರಂತರವಾಗಿ ಬಹಿರಂಗ ಪಡಿಸುತ್ತಿದ್ದಾರೆ. ಅವರ ಈ ನಿರ್ಭಿತಿ ನಡೆಯನ್ನು ಸಹಿಸಿಕೊಳ್ಳದೆ ಮೋದಿ ಎನ್ನುವ ಪದನಾಮವನ್ನು ಬಳಸಿದ್ದಾರೆ ಎನ್ನುವುದನ್ನೇ ನೆಪವಾಗಿರಿಸಿಕೊಂಡು ರಾಹುಲ್ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹತೆಗೊಳಿಸಿರುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ಸೇಡಿನ ಹುನ್ನಾರ ಖಂಡನಾರ್ಹ’ ಎಂದರು.

ಸುರಿಯುತ್ತಿರುವ ಮಳೆಯಿಂದ ಪ್ರತಿಭಟನೆಗೆ ತೊಂದರೆಯಾಗದಂತೆ ತಗಡಿನ ಚಪ್ಪರದಲ್ಲಿ ಪ್ರತಿಭಟನೆ ನಡೆಯಿತು. ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಕಪ್ಪು ಶರ್ಟ್‌ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಕೆಲ ಮುಖಂಡರು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT