ಕುಂದಾಪುರ: ನಗರದಲ್ಲಿರುವ ಕಾಲೇಜಿನಲ್ಲೇ ಮಕ್ಕಳ ಹಕ್ಕುಗಳ ಸಮಿತಿ ಇಲ್ಲ, ಸಹಾಯ ದೂರವಾಣಿ ಇಲ್ಲ ಎಂದಾದರೆ ಗ್ರಾಮಗಳ ಸ್ಥಿತಿ ಹೇಗಿರಬಹುದು ಎಂದು ರಾಜ್ಯ ಮಕ್ಕಳ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಕೆ.ಟಿ. ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಾಲಾ–ಕಾಲೇಜುಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ರಚನೆಯಾಗಬೇಕು. ಸ್ಥಳೀಯಾಡಳಿತಗಳಲ್ಲಿ ಮಕ್ಕಳ ಗ್ರಾಮ ಸಭೆಯ ಪ್ರತ್ಯೇಕ ಕಡತ ಪಾಲನೆಯಾಗಬೇಕು ಎಂದು ಸೂಚಿಸಿದರು.
ಸಮಿತಿಯ ಕಾರ್ಯನಿರ್ವಹಣೆ ತಿಳಿದುಕೊಳ್ಳಲು ರಾಜ್ಯದ ಆಯ್ದ ತಾಲ್ಲೂಕುಗಳಲ್ಲಿ ಸಭೆ ನಡೆಸಲಾಗುತ್ತಿದೆ. ವಂಡ್ಸೆ, ಕುಂದಾಪುರ ಜೂನಿಯರ್ ಕಾಲೇಜಿಗೆ ಭೇಟಿ ನೀಡಿದಾಗ ಅನೇಕ ಲೋಪದೋಷಗಳು ಕಂಡಿವೆ. ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಫಲಕಗಳಲ್ಲಿ ಸಹಾಯವಾಣಿ ಸಂಖ್ಯೆ ಪ್ರದರ್ಶಿಸುವುದರ ಜತೆಗೆ ಸಂಪರ್ಕದ ಕಾರಣಗಳನ್ನು ನಮೂದಿಸಿ ಜಾಗೃತಿ ಮೂಡಿಸಬೇಕು. ದೂರು, ಸಲಹೆ ಪೆಟ್ಟಿಗೆಗಳನ್ನು ಇಡಬೇಕು. ಶಾಲೆ, ಮೈದಾನ, ಹಾಸ್ಟೆಲ್ ಪಕ್ಕದಲ್ಲಿ ವಿದ್ಯುತ್ ತಂತಿ ಹಾದ ಹೋಗದಂತೆ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣ ಬಳಕೆಯಿಂದಾಗಿ ಹದಿಹರೆಯದವರ ಮೇಲೆ ಲೈಂಗಿಕ ದೌರ್ಜನ್ಯ, ಪೊಕ್ಸೊ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ತಿಪ್ಪೇಸ್ವಾಮಿ ಸೂಚನೆ ನೀಡಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಾರುತಿ, ಎಲ್ಲ ಕಾಲೇಜುಗಳಿಗೆ ಸಹಾಯವಾಣಿ ಸಂಖ್ಯೆ ಪ್ರದರ್ಶಿಸುವಂತೆ, ಸಮಿತಿ ರಚಿಸುವಂತೆ ಸೂಚಿಸಲಾಗಿದ್ದು, ರಚನೆಯಾಗದಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ್ ಅವರು, ವಸತಿ ನಿಲಯಗಳಲ್ಲಿ ಸಹಾಯವಾಣಿ ಸಂಖ್ಯೆ ಹಾಕಲಾಗಿದೆ. ಶಾಲಾ ಅವಧಿಯ ಬಳಿಕ ಟ್ಯೂಷನ್ ವ್ಯವಸ್ಥೆ ಮಾಡಲಾಗಿದೆ. ಸಲಹೆ ಪೆಟ್ಟಿಗೆ ಇಡಲಾಗಿದೆ ಎಂದರು.
ಕಾರ್ಮಿಕ ನಿರೀಕ್ಷಕ ಜಯೇಂದ್ರ ಅವರು, ಕುಂದಾಪುರ, ಬೈಂದೂರಿನಲ್ಲಿ 29 ಸಾವಿರ ಕಟ್ಟಡ ಕಾರ್ಮಿಕರು ನೊಂದಾಯಿತರಾಗಿದ್ದಾರೆ. ರಾಜ್ಯದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿದ್ದವರ ಪೈಕಿ 43 ಲಕ್ಷ ನಕಲಿ ಕಾರ್ಡ್‌ಗಳಿದ್ದ ಕಾರಣ ತಡೆ ಹಿಡಿಯಲಾಗಿತ್ತು. ಈಗ ಹೊಸದಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬಾಲ ಕಾರ್ಮಿಕರ ಬಳಕೆ ಬಗ್ಗೆ ದೂರು ಬಂದಾಗ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಅವರು, ಶಾಲೆಯಿಂದ ಹೊರಗುಳಿದ 23 ಮಕ್ಕಳಿದ್ದು, ಅವರಲ್ಲಿ 7 ಮಂದಿ ಮರಳಿ ಶಾಲೆಗೆ ಬರುತ್ತಿದ್ದಾರೆ. 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ. 1 ವಲಸೆ ಮಗುವಾಗಿದ್ದು, ಅಲ್ಲಿನ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. 3 ಜನರಿಗೆ ಅನಾರೋಗ್ಯವಿದೆ. ಪ್ರತಿ ಶಾಲೆಗಳಲ್ಲೂ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿ ರಚಿಸಿ ಸಭೆ ನಡೆಸಲು ಸೂಚಿಸಲಾಗಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ ಕೆ. ಅವರು, 1 ಶಿಶು ಮರಣ, 1 ತಾಯಿ ಮರಣ ಪ್ರಕರಣ ದಾಖಲಾಗಿದೆ. ಗಂಡಾಂತರಕಾರಿ ಹೆರಿಗೆ ಎಂದು ಗುರುತಿಸಲ್ಪಟ್ಟಿರುವುದನ್ನು 108 ಆಂಬುಲೆನ್ಸ್‌ಗೆ ಮಾಹಿತಿ ನೀಡಲಾಗಿದೆ. ಆಶಾ ಕಾರ್ಯಕರ್ತೆಯರು ನಿಗಾ ವಹಿಸುತ್ತಿದ್ದಾರೆ. 35 ವರ್ಷ ವಯಸ್ಸಿನ ನಂತರ ಗರ್ಭಿಣಿಯಾಗುವುದು, ತಡವಾಗಿ ಮದುವೆಯಾಗಿರುವುದು, ಚಿಕಿತ್ಸೆ ಮೂಲಕ ಗರ್ಭಿಣಿಯಾಗಿರುವ ಕಾರಣದಿಂದ ಗಂಡಾಂತರಕಾರಿ ಹೆರಿಗೆ ಪ್ರಕರಣ ಕಂಡುಬರುತ್ತಿದ್ದು, ನಿಗಾ ಇಡಲಾಗುತ್ತದೆ. ಸ್ನೇಹ ಕ್ಲಿನಿಕ್ ಮೂಲಕ ಆಪ್ತ ಸಮಾಲೋಚನೆ ಲಭ್ಯವಿದೆ. ಕುಂದಾಪುರ, ಬೈಂದೂರಿನಲ್ಲಿ ಸಮಾಲೋಚಕರು ಲಭ್ಯರಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಅಧೀಕ್ಷಕ ರಾಮಚಂದ್ರ ಮಯ್ಯ, ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.