ಕುಂದಾಪುರ: ಹೊಳೆಗಳ ಹೂಳೆತ್ತುವ ಪ್ರಕ್ರಿಯೆಯನ್ನು ಮಾರ್ಚ್‌ನಲ್ಲಿ ನಡೆಸಬೇಕು ಎಂಬ ಇರಾದೆಯಿಂದ ಸಿದ್ಧತೆಗಳು ಆರಂಭವಾಗಿದ್ದು ಆಯಾ ಪಂಚಾಯಿತಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಕಂದಾಯ ಇಲಾಖೆ ಜತೆಗೂಡಿ ಗಡಿ ಗುರುತು ಮಾಡಿ ನದಿ ದಂಡೆಯ ಜಾಗದ ಮಾಲಕರ ವಿವರ ಸಂಗ್ರಹಿಸಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಕುಂದಾಪುರ, ಬ್ರಹ್ಮಾವರ ತಾಲ್ಲೂಕಿನ ಅನೇಕ ಕಡೆ ಹೊಳೆ ಹೂಳಿನ ಸಮಸ್ಯೆಯಿಂದ ನೆರೆ ಬರುತ್ತಿದ್ದು, ಬೆಳೆ ಕೊಳೆಯುತ್ತಿದೆ. ಇದಕ್ಕೆ ಶಾಶ್ವತ ಪರಿಹಾರಕ್ಕಾಗಿ ಹೂಳೆತ್ತುವ ಕುರಿತು ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ, ನರೇಗಾ, ಸಣ್ಣ ನೀರಾವರಿ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ವಾರಾಹಿ ನೀರಾವರಿ ನಿಗಮದವರು ಈ ಕೆಲಸದಲ್ಲಿ ಜೊತೆಗೂಡಬೇಕು. ಹೂಳು ತೆಗೆಯುವ ಸಲುವಾಗಿ ವಾರಾಹಿ ನೀರು ವಿಳಂಬ ಮಾಡಬೇಕಾದ ಸಂದರ್ಭ ಬಂದಲ್ಲಿ ರೈತರ ಸಭೆ ಕರೆದು ಸಲಹೆ ಪಡೆಯಬೇಕು ಎಂದು ಶಾಸಕರು ಸೂಚಿಸಿದರು.
ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಇನ್ನು 6 ತಿಂಗಳು ಕಡತ ಸಿದ್ಧತೆಗಾಗಿ ಇದೆ. ಹೂಳಿನ ಜತೆ ಮರಳು ದೊರೆತರೆ ಗಣಿ ಇಲಾಖೆ ಅನುಮತಿಯೊಂದಿಗೆ ಪಂಚಾಯಿತಿ ಮಾರಾಟ ಮಾಡಿ ಆದಾಯ ಗಳಿಸಬಹುದು ಎಂದರು.
ವಾರಾಹಿ ಕಾಲುವೆ ಮೂಲಕ ಬರುವ ಮಳೆಗಾಲದ ನೀರನ್ನು ಸಹಜ ಒಡ್ಡುಗಳ ಮೂಲಕ ನದಿ ಸೇರುವಂತೆ ಮಾಡಬಹುದೇ ಎಂದು ಪರಿಶೀಲಿಸಿ ಎಂದು ವಾರಾಹಿಯವರಿಗೆ ಹಾಗೂ ನದಿ ದಂಡೆಯ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕುರಿತು ಪರಿಶೀಲಿಸಿ ಎಂದು ಅರಣ್ಯ ಇಲಾಖೆಗೆ ಸೂಚನೆ ನೀಡಿದರು.
13 ಪಂಚಾಯಿತಿಗಳಿಗೆ ಈಗಾಗಲೇ ಮರಳು ತೆಗೆಯಲು ಅನುಮತಿ ನೀಡಲಾಗಿದೆ ಎಂದು ಗಣಿ ಇಲಾಖೆಯವರು ತಿಳಿಸಿದರು.
ಯಡಾಡಿ ಮತ್ಯಾಡಿಯಿಂದ ಬಾರ್ಕೂರುವರೆಗೆ ಹಿರೇಹೊಳೆಗೆ, ಹೊಂಬಾಡಿ ಮಂಬಾಡಿಯಿಂದ ಗಿಳಿಯಾರ್‌ವರೆಗೆ ಕಿರಿಹೊಳೆಗೆ, ಕಾರ್ಕಡ ನಾಗರಮಠದಿಂದ ಉಳ್ತೂರುವರೆಗೆ ಉಪ್ಲಾಡಿ ಹೊಳೆಗೆ ಒಟ್ಟು 350 ಕಿ.ಮೀ. ಹೊಳೆದಂಡೆ ರಚನೆ, ಹೂಳೆತ್ತಲು ₹21 ಕೋಟಿ ಅಂದಾಜುಪಟ್ಟಿ ತಯಾರಿಸಲಾಗಿದೆ. ಕಾಳಾವರ ರಾಮಚಂದ್ರ ನಾವಡ, ವಾರಾಹಿ ನೀರು ನಿಲ್ಲಿಸಿದರೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯವರು ತಿಳಿಸಿದರು.
ಮಲ್ಯಾಡಿ ಶಿವರಾಮ ಶೆಟ್ಟಿ, ಹೂಳೆತ್ತಿ ಅಲ್ಲೇ ಹಾಕಿದರೆ ಪ್ರಯೋಜನ ಇಲ್ಲ. ತೋಟ, ಮನೆಗಳ ರಕ್ಷಣೆ ಕೆಲಸ ಮೊದಲಾಗಲಿ ಎಂದರು. ಬೇಳೂರು, ಗಿಳಿಯಾರ್ ಪಂಚಾಯಿತಿ ಪ್ರತಿನಿಧಿಗಳು ಮಾತನಾಡಿದರು.
ನೆರೆಪೀಡಿತ ಪ್ರದೇಶಗಳಿಗೆ ಜಿ.ಪಂ. ಸಿಇಒ ಪ್ರತೀಕ್ ಬಾಯಲ್ ಭೇಟಿ ನೀಡಿ ನರೇಗಾ ಮೂಲಕ ಸಾಧ್ಯವಾದಷ್ಟು ಕಾಮಗಾರಿ ನಡೆಸಲು ಸೂಚಿಸಿದ್ದಾರೆ ಎಂದು ತಾ.ಪಂ. ಇಒ ಶಶಿಧರ್ ಕೆ.ಜಿ. ತಿಳಿಸಿದರು.
ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗಡೆ, ತಾ.ಪಂ. ಇಒ ಇಬ್ರಾಹಿಂಪುರ್, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಗ್ರಾ.ಪಂ.ಗಳ ಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಹೂಳು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಜನಾಗ್ರಹ ಸಭೆಗಳನ್ನು ನಡೆಸಿ ಹಕ್ಕೊತ್ತಾಯ ಮಾಡಲಾಗಿದ್ದ ಕಾರಣ ಶಾಸಕರು ನೀಡಿದ್ದ ಭರವಸೆಯಂತೆ ಇಂದಿನ ಸಭೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.