ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಲಸಿಕೆ ಮಾತ್ರ ಪರಿಹಾರ: ಸಂಸದೆ ಶೋಭಾ ಕರಂದ್ಲಾಜೆ

Last Updated 21 ಜೂನ್ 2021, 15:38 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ನಿಯಂತ್ರಣಕ್ಕೆ ಲಸಿಕೆ ಮಾತ್ರ ಪರಿಣಾಮಕಾರಿಯಾಗಿದ್ದು ಸಾರ್ವಜನಿಕರು ಅಪ ಪ್ರಚಾರಗಳಿಗೆ ಕಿವಿಗೊಡದೆ ಉಚಿತ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಪುತ್ತೂರಿನ ಹನುಮಂತನಗರ ಶಾಲೆಯಲ್ಲಿ ಆಯೋಜಿಸಿದ್ದ ಕೋವಿಡ್–19 ಲಸಿಕಾ ಮಹಾಮೇಳ ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲೇ ಅತ್ಯಂತ ದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ದೇಶದಾದ್ಯಂತ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 3,37,095 ಮಂದಿ ಪ್ರಥಮ ಡೋಸ್ ಲಸಿಕೆ ಪಡೆದಿದ್ದು ಶೇ 25ರಷ್ಟು ಸಾಧನೆ ಆಗಿದೆ.

95,477 ಮಂದಿ ಎರಡನೇ ಡೋಸ್‌ ಪಡೆದು ಶೇ 7 ಸಾಧನೆಯಾಗಿದೆ. 3ನೇ ಅಲೆಯ ವೇಳೆಗೆ ಜಿಲ್ಲೆಯಲ್ಲಿ ಶೇ 70 ರಿಂದ ಶೇ 80ರವರೆಗೆ ಪ್ರಥಮ ಡೋಸ್ ನೀಡುವ ಗುರಿ ಹೊಂದಲಾಗಿದೆ ಎಂದರು.

ಹಿಂದೆ, ಜಿಲ್ಲೆಗೆ ಸಾಕಷ್ಟು ಲಸಿಕೆ ಸರಬರಾಜಾಗಿದ್ದರೂ ಲಸಿಕೆ ಕುರಿತು ಅಪಪ್ರಚಾರದಿಂದ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆಯಾಗಿತ್ತು. ಪ್ರಸ್ತುತ ಸಾರ್ವಜನಿಕರು ಲಸಿಕೆಯ ಕುರಿತು ಅಪಪ್ರಚಾರಕ್ಕೆ ಕಿವಿಗೊಡದೆ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಸರ್ಕಾರದಿಂದಲೂ ಹೆಚ್ಚಿನ ಲಸಿಕೆ ದೊರೆಯಲಿದೆ.

ಕೋವಿಡ್ ಲಸಿಕೆ ಪಡೆದವರಿಗೆ ಸೋಂಕು ತಗುಲಿದರೂ ತೀವ್ರತೆ ಕಡಿಮೆಯಿದ್ದು ಗುಣಮುಖರಾಗುತ್ತಾರೆ. ಯಾರೂ ವೆಂಟಿಲೇಟರ್ ಪಡೆಯುವ ಮಟ್ಟಿಗೆ ಭಾಧಿತರಾಗದೆ ಔಷಧಗಳಿಂದಲೇ ಗುಣಮುಖರಾಗಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆದು ಇತರರನ್ನೂ ಲಸಿಕೆ ಪಡೆಯಲು ಪ್ರೇರೇಪಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಶಾಸಕ ರಘುಪತಿ ಭಟ್ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಲಸಿಕೆಯಿಂದ ಪರಿಹಾರ ಸಾಧ್ಯ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಮಂಜು ಕೊಳ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ಡಿಎಚ್‌ಒ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಲಸಿಕಾ ಉಸ್ತುವಾರಿ ಡಾ. ಎಂ.ಜಿ.ರಾಮ ವಂದಿಸಿದರು. 300ಕ್ಕೂ ಅಧಿಕ ಮಂದಿಗೆ ಕೇಂದ್ರದಲ್ಲಿ ಲಸಿಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT