ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

13,878 ಕೋಟಿ ಸಾಲ ವಿತರಣೆ ಗುರಿ

ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ
Last Updated 29 ಮಾರ್ಚ್ 2023, 14:38 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಬ್ಯಾಂಕ್‌ಗಳ ಮೂಲಕ ₹ 13,878 ಕೋಟಿ ಸಾಲ ವಿತರಣೆಯ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ ಹೇಳಿದರು.

ನಗರದ ರಜತಾದ್ರಿಯ ಜಿಲ್ಲಾ ಪಂಚಾಯಿತಿಯ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ 2023-24ನೇ ಸಾಲಿನ ಜಿಲ್ಲಾ ಸಾಲ ಯೋಜನೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ ಆದ್ಯತಾ ವಲಯಕ್ಕೆ ₹10,644 ಕೋಟಿ, ಕೃಷಿ ಕ್ಷೇತ್ರಕ್ಕೆ ₹5,502 ಕೋಟಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ ₹3,444.72 ಕೋಟಿ, ಶಿಕ್ಷಣ ಕ್ಷೇತ್ರಕ್ಕೆ ₹190.06 ಕೋಟಿ, ವಸತಿ ಕ್ಷೇತ್ರಕ್ಕೆ ₹1,063 ಕೋಟಿ, ಇತರೆ ಆದ್ಯತಾ ವಲಯಗಳಿಗೆ 446 ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯ ಸಾಲ ವಿತರಣೆಯಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದ್ದು 3,049 ಮಂದಿಗೆ ಸಾಲ ನೀಡುವ ಗುರಿಗೆ ಪ್ರತಿಯಾಗಿ 4,550 ಮಂದಿಗೆ ಸಾಲ ವಿತರಣೆ ಮಾಡಲಾಗಿದೆ. ಶೇ 149 ರಷ್ಟು ಗುರಿ ಸಾಧನೆಯಾಗಿದ್ದು, ಬ್ಯಾಂಕ್‌ಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಸಿಇಒ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆಯಡಿ 180 ಮಂದಿಗೆ ಸಾಲ ನೀಡುವ ಗುರಿ ಇದ್ದು, 472 ಮಂದಿಗೆ ಸಾಲ ವಿತರಿಸುವ ಮೂಲಕ ಶೇ 262ರಷ್ಟು ಸಾಧನೆಯಾಗಿದ್ದು ರಾಜ್ಯದಲ್ಲಿ ಉಡುಪಿ ಜಿಲ್ಲೆ 2ನೇ ಸ್ಥಾನ ಪಡೆದಿದೆ ಎಂದರು.

ವಿವಿಧ ಯೋಜನೆಗಳಡಿ ಸಾಲ ಕೋರಿ ಫಲಾನುಭವಿಗಳು ಸಲ್ಲಿಸುವ ಅರ್ಜಿಗಳನ್ನು ತಾಂತ್ರಿಕ ಕಾರಣಗಳನ್ನು ನೀಡಿ ತಿರಸ್ಕರಿಸಬಾರದು. ತಾಂತ್ರಿಕ ಕಾರಣಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಒತ್ತು ನೀಡಬೇಕು, ಅರ್ಹ ಎಲ್ಲರಿಗೂ ಸರ್ಕಾರ ಯೋಜನೆಗಳಡಿ ಬ್ಯಾಂಕ್‌ಗಳು ಸಾಲ ವಿತರಿಸಬೇಕು ಎಂದು ಸಿಇಒ ಪ್ರಸನ್ನ ನಿರ್ದೇಶನ ನೀಡಿದರು.

ತ್ರೈಮಾಸಿಕ ವರದಿ ನೀಡಿದ ಕೆನರಾ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಂಟೋ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‌ಗೆ ಹೋಲಿಸಿದ್ದಲ್ಲಿ ಸಾಲ ನೀಡುವ ಪ್ರಮಾಣ ಶೇ 9.58ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ₹ 15,964 ಕೋಟಿ ಸಾಲ ವಿತರಣೆ ಮಾಡಲಾಗಿದ್ದು ₹ 34,120 ಕೋಟಿ ಠೇವಣಿ ಸಂಗ್ರಹಿಸಲಾಗಿದೆ.

ದುರ್ಬಲ ವರ್ಗಕ್ಕೆ ಸಾಲ ವಿತರಿಸಲು ವಿಶೇಷ ಒತ್ತು ನೀಡಲಾಗಿದ್ದು, 1,30,277 ಫಲಾನುಭವಿಗಳಿಗೆ ₹ 1,855 ಕೋಟಿ ಹಾಗೂ 1,50,716 ಮಹಿಳೆಯರಿಗೆ ₹ 3,452 ಕೋಟಿ ಸಾಲ ನೀಡಲಾಗಿದೆ. ಎಲ್ಲ ಬ್ಯಾಂಕ್‌ಗಳು ಮಾರ್ಚ್ ಅಂತ್ಯದ ವೇಳೆಗೆ ಗುರಿ ಸಾಧಿಸಬೇಕು ಎಂದು ಸೂಚನೆ ನೀಡಿದರು.

ರಿಸರ್ವ್ ಬ್ಯಾಂಕ್‌ನ ಕಾರ್ಯ ನಿರ್ವಾಹಕ ಅಧಿಕಾರಿ ಅಲೋಕ್ ಸಿನ್ಹಾ ಮಾತನಾಡಿ, ಗ್ರಾಹಕರು ಬ್ಯಾಂಕ್ ವ್ಯವಹಾರದಲ್ಲಿ ಆನ್‌ಲೈನ್ ವಂಚನೆಗೆ ಒಳಗಾಗದಂತೆ ಅರಿವು ಮತ್ತು ಜಾಗೃತಿ ಮೂಡಿಸಬೇಕು. ರಾಜ್ಯ ವಿಧಾನಸಭಾ ಚುನಾವಣೆ ಇರುವುದರಿಂದ ಖಾತೆದಾರರ ಬ್ಯಾಂಕ್ ವಹಿವಾಟುಗಳ ನಿರ್ವಹಣೆ ವೇಳೆ ಕೇಂದ್ರ ಚುನಾವಣಾ ಆಯೋಗವು ಸೂಚಿಸಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ಆಯೋಗ ಕೋರುವ ಅಗತ್ಯ ಮಾಹಿತಿಗಳನ್ನು ನೀಡಬೇಕು ಎಂದು ಎಲ್ಲ ಬ್ಯಾಂಕ್‌ಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ನಬಾರ್ಡ್‌ ಡಿಡಿಎಂ ಸಂಗೀತಾ ಕಾರ್ಥಾ, ಯೂನಿಯನ್ ಬ್ಯಾಂಕ್‌ನ ಪ್ರಾದೇಶಿಕ ಮ್ಯಾನೇಜರ್ ಡಾ.ವಾಸಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT