ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯುದ್ದಕ್ಕೂ ಕಾಂಡ್ಲಾವನ ವಿಸ್ತರಣೆ: ಸಚಿವ ಅರವಿಂದ ಲಿಂಬಾವಳಿ ಹೇಳಿಕೆ

Last Updated 10 ಜುಲೈ 2021, 16:06 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನಲ್ಲಿರುವ ಹೆಚ್ಚಾಗಿರುವ ಕಾಂಡ್ಲಾವನ ಇಡೀ ಕರಾವಳಿಗೆ ವಿಸ್ತರಿಸುವ ಉದ್ದೇಶ ಇದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಶನಿವಾರ ಬಿಜೆಪಿ ಕಚೇರಿಗೆ ಭೇಟಿನೀಡಿದ ಬಳಿಕ ಮಾತನಾಡಿದ ಸಚಿವರು, ಸಮುದ್ರದ ಹಿನ್ನೀರು ಪ್ರದೇಶದಲ್ಲಿ ಕಾಂಡ್ಲಾವನವನ್ನು ಹೆಚ್ಚಾಗಿ ಬೆಳೆಸುವುದರಿಂದ ಚಂಡಮಾರುತದಿಂದ ರಕ್ಷಣೆ ಪಡೆದುಕೊಳ್ಳಬಹುದು. ಮುಖ್ಯವಾಗಿ ಮೀನಿನ ಸಂತಾನೋತ್ಪತ್ತಿ ಪ್ರದೇಶವಾಗಿಸಬಹುದು. ಇಕೋ ಟೂರಿಸಂ ಅಡಿಯಲ್ಲಿ ಕಾಂಡ್ಲಾವನ ಪ್ರದೇಶವನ್ನು ಪ್ರವಾಸೋದ್ಯಮ ತಾಣವಾಗಿಸುವ ಉದ್ದೇಶವೂ ಇದೆ ಎಂದರು.

ಬ್ರಹ್ಮಾವರದಲ್ಲಿ ರಸ್ತೆ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆಯಿಂದ ಸಾವಿರಕ್ಕೂ ಹೆಚ್ಚು ಮರಗಳನ್ನು ಕಡಿಯಾಗಿತ್ತು. ಅದಕ್ಕೆ ಪ್ರತಿಯಾಗಿ 10,000 ಗಿಡಗಳನ್ನು ನೆಡಲಾಗುತ್ತಿದೆ. ಉಡುಪಿ ಸಾಂಸ್ಕೃತಿಕ ಹಾಗೂ ಪ್ರಾಕೃತಿಕವಾಗಿ ಶ್ರೀಮಂತವಾಗಿದ್ದು, ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಯಕ್ಷಗಾನ ಕಲಾವಿದರಿಗೆ ಪರಿಹಾರ ನೀಡುವ ‌ವಯೋಮಿತಿ ಇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ‘ಕಳೆದ ಲಾಕ್‌ಡೌನ್ ಅವಧಿಯಲ್ಲಿ 16,000 ಕಲಾವಿದರಿಗೆ ₹ 3,000 ಅನುದಾನ ನೀಡಲಾಗಿತ್ತು. ಈ ವರ್ಷ ಫಲಾನುಭವಿಗಳ ಸಂಖ್ಯೆ ಹೆಚ್ಚಾಗಿದ್ದು, 20,713 ಅರ್ಜಿಗಳು ಬಂದಿದ್ದು, ಎಲ್ಲರಿಗೂ ಪರಿಹಾರ ವಿತರಿಸಲಾಗಿದೆ ಎಂದರು.

‘ರಂಗಾಯಣ’ ನೋಡೋಣ:

ಪ್ರತಿ ಜಿಲ್ಲೆಗೂ ರಂಗಾಯಣ ಬೇಕು ಎಂಬ ಬೇಡಿಕೆ ಇದೆ. ಆದರೆ, ಕೊರೊನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲದ ಕಾರಣ ಸದ್ಯ ಬೇಡಿಕೆ ಈಡೇರದು. ಉಡುಪಿಯಲ್ಲಿ ರಂಗ ಮಂದಿರ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ಮಾಡುವುದಾಗಿ ಲಿಂಬಾವಳಿ ತಿಳಿಸಿದರು.

ಅರಣ್ಯದಂಚಿನ ರಸ್ತೆಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ವಿದ್ಯುತ್ ಸಂಪರ್ಕ ನೀಡಲು ಬೆಸ್ಕಾಂ ಒಪ್ಪುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಮೀಸಲು ಅರಣ್ಯ ವ್ಯಾಪ್ತಿಗೆ ಸೇರದ ಅರಣ್ಯದಲ್ಲಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು, ಮಣ್ಣಿನ ರಸ್ತೆಗಳನ್ನು ಸಿಮೆಂಟ್ ಅಥವಾ ಡಾಂಬಾರು ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲು ಅನುಮತಿ ನೀಡುವ ಅಧಿಕಾರ ಡಿಸಿಎಫ್‌ಗಳಿಗೆ ಇದೆ ಎಂದು ಸಚಿವರು ಹೇಳಿದರು.

ಮೀಸಲು ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕಾದರೆ ವೈಲ್ಡ್‌ಲೈಫ್‌ ಮಂಡಳಿಗೆ ಅರ್ಜಿ ಸಲ್ಲಿಸಬೇಕು. ಮಂಡಳಿಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಅರಣ್ಯ ಸಚಿವರು ಉಪಾಧ್ಯಕ್ಷರಾಗಿದ್ದು, ಅರ್ಜಿಗಳನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು ಎಂದರು.

ಅರಣ್ಯ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣಗಳ ಸ್ಥಾಪನೆಗೆ, ಸೇತುವೆಗಳ ನಿರ್ಮಾಣಕ್ಕೆ ಅರಣ್ಯ ಕಾನೂನುಗಳ ಅಡೆತಡೆಗಳಿವೆ. ಮರ ಕಡಿಯದೆ ಬಸ್‌ ನಿಲ್ದಾಣ ಹಾಗೂ ಸೇತುವೆಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಒಪ್ಪಿಗೆ ನೀಡಲಾಗುವುದು ಎಂದು ಲಿಂಬಾವಳಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿಗಳ ಜತೆ ಸಚಿವ ಲಿಂಬಾವಳಿ ಸಭೆ ನಡೆಸಿದರು.

ಈ ಸಂದರ್ಭ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಸುಕುಮಾರ ಶೆಟ್ಟಿ, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಬಿಜೆಪಿ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT