ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ ಕೃಷ್ಣನಿಗೆ ಮಹಾಪೂಜೆ: ಭಕ್ತರಿಂದ ಭಜನೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ
Last Updated 5 ಆಗಸ್ಟ್ 2020, 13:15 IST
ಅಕ್ಷರ ಗಾತ್ರ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿದ್ದಂತೆ ಕೃಷ್ಣನೂರು ಉಡುಪಿಯಲ್ಲಿ ಸಂಭ್ರಮ ಕಳೆಗಟ್ಟಿತು.

ಕೃಷ್ಣನಿಗೆ ಮಹಾಪೂಜೆ

ಉಡುಪಿಯ ಕೃಷ್ಣಮಠದಲ್ಲಿ ಕೃಷ್ಣ ದೇವರಿಗೆ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಮಹಾ ಪೂಜೆ ನೆರವೇರಿಸಿದರು.ರಾಮಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಿದರು.

ಕೃಷ್ಣನಿಗೆ ಅಲಂಕಾರ

ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣನಿಗೆ ವಿಶೇಷವಾಗಿ 'ಪಟ್ಟಾಭಿರಾಮ' ಅಲಂಕಾರ ಮಾಡಿದ್ದರು.

ಪಲಿಮಾರು ಮಠದಲ್ಲಿ ಮಹಿಳೆಯರು ಭಜನೆ, ಪಾರಾಯಣದ ಮೂಲಕ ರಾಮನನ್ನು ಸ್ಮರಿಸಿದರು. ಪಲಿಮಾರು ವಿದ್ಯಾಧೀಶ ತೀರ್ಥ ಸ್ವಾಮೀಜಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ವೇದ ಮಂತ್ರಘೋಷಗಳು ಮೊಳಗಿದವು. ಹಲವು ಬಗೆಯ ಹೂಗಳಿಂದ ಮಠವನ್ನು ಸಿಂಗರಿಸಲಾಗಿತ್ತು.

‘ಅಯೋಧ್ಯೆಯಲ್ಲಿ ವಿವಾದಿತ ಕುಂಭವನ್ನು ಕೆಡವಿದ ಬಳಿಕ ಭಾರತೀಯರೆಲ್ಲರು ನಡೆಸಿದ ಅಖಂಡ ಭಜನೆ, ಪ್ರಾರ್ಥನೆ, ಪೂಜೆಗಳ ಫಲವಾಗಿ ರಾಮಮಂದಿರಕ್ಕೆ ಭೂಮಿಪೂಜೆ ನಡೆಯುತ್ತಿದೆ. ಸಾಮೂಹಿಕ ಪ್ರಾರ್ಥನೆಯ ಫಲ ಸಿಕ್ಕಿರುವುದು ಸಂತಸ ತಂದಿದೆ ಎಂದು ಪಲಿಮಾರು ಶ್ರೀಗಳು ಹೇಳಿದರು.

ಕೃಷ್ಣಮಠದ ಕನಕನ ಕಿಂಡಿ ಎದುರು ಬಜರಂಗದಳ ಸದಸ್ಯರು ಭಜನೆ ಮಾಡಿದರು. ಬಜರಂಗದಳದ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್‌. ಸುನೀಲ್ ಭಾಗವಹಿಸಿದ್ದರು. ಅದಮಾರು ಮಠದ ವ್ಯವಸ್ಥಾಪಕ ಗೋವಿಂದರಾಜ್ ದೇವರ ಪ್ರಸಾದ ವಿತರಿಸಿದರು.

ಜಿಎಸ್‌ಬಿ ಸಮಾಜದ ‘ಘರ್ ಘರಾಂತು ಭಾಜನಂತರಂಗ’ ಭಜನಾ ಮಂಡಳಿಯಿಂದ ಒಳಕಾಡಿನ ವೀರ ಹನುಮಾನ್ ಮಂದಿರ ಕಾಶಿ ಮಠದಲ್ಲಿ ಹೂವಿನ ಪೂಜೆ ಹಾಗು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಚೇಂಪಿ ರಾಮಚಂದ್ರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆನ್‌ಲೈನ್ ರಂಗೋಲಿ ಸ್ಪರ್ಧೆ

ಉಡುಪಿ ನಗರ ಬಿಜೆಪಿ ಹಾಗೂ ಮಹಿಳಾ ಮೋರ್ಚಾ ಸಹಭಾಗಿತ್ವದಲ್ಲಿ ‘ಮನ್ವಂತರ-2020’ ಆನ್‌ಲೈನ್‌ ರಂಗೋಲಿ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಶಾಸಕ ಕೆ. ರಘುಪತಿ ಭಟ್ ಕುಟುಂಬ ಭಾಗವಹಿಸಿತ್ತು. ಬಳಿಕ ರಾಮಮಂದಿರ ಭೂಮಿ ಪೂಜೆಯ ನೇರಪ್ರಸಾರವನ್ನು ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ್ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ರಾಮಮಂದಿರ ಕರ ಸೇವೆಯಲ್ಲಿ ಭಾಗವಹಿಸಿದ್ದ ಕೊಗ್ಗಣ್ಣ ಸನಿಲ್, ಮೋಹನ್ ಉಪಾಧ್ಯ ಇದ್ದರು.

ಮನೆಗಳಲ್ಲಿ ಪೂಜೆ ಹವನ

ಶ್ರೀರಾಮಸೇನೆ ಕಾರ್ಯಕರ್ತರು ಮನೆಯಲ್ಲಿ ದೀಪ ಹಚ್ಚಿ, ಪೂಜೆಮಾಡಿ ಭಗವಾಧ್ವಜ ಕಟ್ಟಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂಧರ್ಭ ಶ್ರೀರಾಮಸೇನೆ ಮುಖಂಡರಾದ ಜಯರಾಂ ಅಂಬೆಕಲ್ಲು, ರಾಧಾಕೃಷ್ಣ ಶೆಟ್ಟಿ, ಶರತ್ ಪೂಜಾರಿ, ಹರೀಶ್ ಪೂಜಾರಿ, ಅಜಿತ್ ಹಾಗೂ ಕರಸೇವೆಯಲ್ಲಿ ಭಾಗವಹಿಸಿದ್ದ ವಿಠಲ ಮಡಿವಾಳ, ಜೋಸೆಫ್ ಸಲ್ದಾನ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT