ಗುರುವಾರ , ಅಕ್ಟೋಬರ್ 21, 2021
21 °C

ಮಲ್ಪೆ ಬೀಚ್‌: 2 ಗಂಟೆಯಲ್ಲಿ ರಾಶಿ ಕಸ ಸಂಗ್ರಹ, ವಿದ್ಯಾರ್ಥಿಗಳ ಪರಿಸರ ಕಾಳಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಡಲತೀರ ಸ್ವಚ್ಛತಾ ದಿನಚರಣೆಯ ಅಂಗವಾಗಿ ಈಚೆಗೆ ಸ್ಕೌಟ್ಸ್, ಗೈಡ್ಸ್‌, ರೇಂಜರ್ಸ್‌ ಹಾಗೂ ರೋವರ್ಸ್‌ಗಳು, ಕರಾವಳಿ ಕಾವಲುಪಡೆಯ ಸಿಬ್ಬಂದಿ ಹಾಗೂ ಕಾಲೇಜು ವಿದ್ಯಾರ್ಥಿಗಳು ಒಟ್ಟಾಗಿ ಮಲ್ಪೆ ಬೀಚ್‌ ತೀರವನ್ನು ಸ್ವಚ್ಛಗೊಳಿಸಿದರು.

ಮಳೆಗಾಲದಲ್ಲಿ ಸಮುದ್ರದ ಅಲೆಗಳು ದಡಕ್ಕೆ ತಂದು ಬಿಸಾಡಿದ್ದ ತ್ಯಾಜ್ಯ ಹಾಗೂ ಪ್ರವಾಸಿಗರು ಎಸೆದುಹೋಗಿದ್ದ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ವಿದ್ಯಾರ್ಥಿಗಳು ಹೆಕ್ಕಿ ತೀರವನ್ನು ಶುಚಿಗೊಳಿಸಿದರು.

ಬೆಳಿಗ್ಗೆ 8.45ಕ್ಕೆ ಆರಂಭವಾದ ಸ್ವಚ್ಛತಾ ಅಭಿಯಾನ 11 ಗಂಟೆಯವರೆಗೂ ನಡೆಯಿತು. ಸುಮಾರು 40 ಚೀಲಗಳಷ್ಟು ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಿದ ವಿದ್ಯಾರ್ಥಿಗಳು ವಿಲೇವಾರಿ ಮಾಡಿದರು. ವಿದ್ಯಾರ್ಥಿಗಳ ಪರಿಸರ ಪ್ರೀತಿ ಕಂಡು, ಸ್ಥಳೀಯರು ಹಾಗೂ ಪ್ರವಾಸಿಗರೂ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದು ವಿಶೇಷವಾಗಿತ್ತು. ನೂರಾರು ಮದ್ಯ ಹಾಗೂ ನೀರಿನ ಪ್ಲಾಸ್ಟಿಕ್ ಬಾಟೆಲ್‌ಗಳು, ಚಪ್ಪಲಿಗಳು, ನಿರುಪಯುಕ್ತ ವಸ್ತುಗಳನ್ನು ಹೆಕ್ಕಲಾಯಿತು.

ಸ್ಕೌಟ್ಸ್ ಅಂಡ್ ಗೈಡ್ಸ್‌ ಜಿಲ್ಲಾ ಸಹಕಾರ್ಯದರ್ಶಿ ಡಾ.ಜಯರಾಮ್ ಶೆಟ್ಟಿಗಾರ್ ಮಾತನಾಡಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯ ಮಾರ್ಗದರ್ಶನದಂತೆ, ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಶಾಂತಾ ವಿ.ಎಸ್ ಆಚಾರ್ಯ ನೇತೃತ್ವದಲ್ಲಿ ಕರಾವಳಿಯಲ್ಲಿ ಬೀಚ್ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ.

ಮುಂದೆಯೂ ಉಡುಪಿ ಹಾಗೂ ಕುಂದಾಪುರ ತಾಲ್ಲೂಕಿನ ಸಮುದ್ರ ತೀರದಲ್ಲಿ ನಿರಂತರವಾಗಿ ಬೀಚ್ ಸ್ವಚ್ಚತೆ, ಪರಿಸರದ ಅಧ್ಯಯನ ಮತ್ತು ಸ್ವಚ್ಛತೆಯ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಹಾಗೂ ಸ್ವಚ್ಛತಾ ಅಭಿಯಾನ ನಡೆಸಲಾಗುವುದು. ಮಲ್ಪೆಯ ಸೇಂಟ್ ಮೇರಿಸ್‌ ದ್ವೀಪ ಹಾಗೂ ಪಡುಕೆರೆಯಲ್ಲಿ ಬೀಚ್‌ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಸ್ವಚ್ಛತಾ ಅಭಿಯಾನಕ್ಕೆ ಕರಾವಳಿ ಕಾವಲು ಪೊಲೀಸರು, ಮಲ್ಪೆ ಬೀಚ್ ಅಭಿವೃದ್ದಿ ಮಂಡಳಿ ಸಹಯೋಗವಿತ್ತು. ಸಿಎಸ್‌ಪಿ ಇನ್‌ಸ್ಪೆಕ್ಟರ್ ರತ್ನಕುಮಾರ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಡಾ. ಕರುಣಾಕರ, ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ. ಗಣೇಶ್, ಸಹಾಯಕ ನಿರ್ದೇಶಕ ಶಿವಕುಮಾರ್, ಎನ್‌ಜಿಒನ ಶೃತಿ,  ಸ್ಕೌಟ್ಸ್ ಅಂಡ್‌ ಗೈಡ್ಸ್‌ ಜಿಲ್ಲಾ ಸಂಘಟಕರಾದ ನಿತಿನ್ ಅಮೀನ್, ಸುಮನ್ ಶೇಖರ್‌, ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಾಟ್ಕರ್ ಇದ್ದರು.

ಎಸ್‌ಐ ಮನಮೋಹನ ರಾವ್ ಕಾರ್ಯಕ್ರಮ ನಿರೂಪಿಸಿದರು. ಪಿಎಸ್‌ಐ ಭಾಸ್ಕರ್ ಸ್ವಾಗತಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು