ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರಿಗೆ ಸಮುದ್ರಕ್ಕಿಂತ ಬಂದರಿನ ಹೂಳೇ ಡೇಂಜರ್‌!

6 ವರ್ಷಗಳಲ್ಲಿ ಮಲ್ಪೆ ಬಂದರಿನ ಹೂಳಿನಲ್ಲಿ ಸಿಲುಕಿ ಜೀವ ಕಳೆದುಕೊಂಡ 54 ಮೀನುಗಾರರು
Last Updated 16 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ಮೀನುಗಾರರಿಗೆ ಕಡಲಿಗಿಂತ ಬಂದರು ಹೆಚ್ಚು ಅಪಾಯಕಾರಿಯಾಗಿದೆ. ಆಳ ಸಮುದ್ರ ಮೀನುಗಾರಿಕೆಯಲ್ಲಿ ಸಂಭವಿಸುವ ಅವಘಡಗಳಲ್ಲಿ ಮೃತಪಡುವ ಮೀನುಗಾರರಿಗಿಂತ ಬಂದರಿನ ಹೂಳಿನಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿರುವ ಮೀನುಗಾರರ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ.

ಪೊಲೀಸ್ ಇಲಾಖೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ 2017ರಿಂದ 2022ರವರೆಗೆ ಮಲ್ಪೆ ಬಂದರಿನಲ್ಲಿ ಬರೋಬ್ಬರಿ 54 ಮೀನುಗಾರರು ಮೃತಪಟ್ಟಿದ್ದಾರೆ. ಇವರಲ್ಲಿ ಬಹುತೇಕರು ಬಂದರಿನಲ್ಲಿ ಜಮೆಯಾಗಿರುವ ಹೂಳಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂಬುದು ಆತಂಕಕಾರಿ ವಿಚಾರ.

2017 ರಲ್ಲಿ 8, 2018 ರಲ್ಲಿ 10, 2019 ರಲ್ಲಿ 8, 2020 ರಲ್ಲಿ 11, 2021 ರಲ್ಲಿ 9, 2022 ರಲ್ಲಿ 11ಮೀನುಗಾರರು ಮಲ್ಪೆ ಬಂದರಿನಲ್ಲಿ ಜೀವ ಬಿಟ್ಟಿದ್ದಾರೆ. ಬೆಳಕಿಗೆ ಬಾರದ ಪ್ರಕರಣಗಳನ್ನು ಸೇರಿಸಿದರೆ ಮೃತರ ಸಂಖ್ಯೆ 100ಕ್ಕೂ ಹೆಚ್ಚಾಗಲಿದೆ ಎನ್ನುತ್ತಾರೆ ಮೀನುಗಾರರು.

ಮೃತ್ಯುಕೂಪವಾದ ಹೂಳು:7–8 ವರ್ಷಗಳಿಂದ ಧಕ್ಕೆಯಲ್ಲಿ ಹೂಳು ತೆಗೆಯದ ಪರಿಣಾಮ ಮಲ್ಪೆ ಬಂದರು ಮೀನುಗಾರರ ಪಾಲಿಗೆ ಮೃತ್ಯು ಕೂಪವಾಗಿ ಕಾಡುತ್ತಿದೆ. ದಕ್ಕೆಯಲ್ಲಿ ಸಂಗ್ರಹವಾಗಿರುವ ಭಾರಿ ಪ್ರಮಾಣದ ಹೂಳು ನಿರಂತರವಾಗಿ ಮೀನುಗಾರರ ಜೀವಗಳನ್ನು ಬಲಿ ಪಡೆಯುತ್ತಿದೆ.

ದಕ್ಕೆಯಲ್ಲಿ ಒಂದು ಬೋಟ್‌ನಿಂದ ಮತ್ತೊಂದು ಬೋಟ್‌ಗೆ ದಾಟುವಾಗ, ಧಕ್ಕೆಗೆ ಮೀನು ಇಳಿಸುವಾಗ ಮೀನುಗಾರರು ಆಯತಪ್ಪಿ ಸಮುದ್ರಕ್ಕೆ ಬಿದ್ದರೆ ಬದುಕಿ ಮೇಲೆ ಬರುವ ಸಾದ್ಯತೆಗಳು ತೀರಾ ಕಡಿಮೆ. ಕಾರಣ ಬಂದರಿನಲ್ಲಿ ಸಂಗ್ರಹವಾಗಿರುವ ಭಾರಿ ಪ್ರಮಾಣದ ಹೂಳು.

ಧಕ್ಕೆಯಲ್ಲಿ ಆಯತಪ್ಪಿ ಬಿದ್ದವರು ನೇರವಾಗಿ ಹೂಳಿನಡಿ ಸಿಲುಕುತ್ತಿದ್ದು ಮೇಲೆ ಬರಲು ಸಾದ್ಯವಾಗದೆ ಮೃತಪಡುತ್ತಿದ್ದಾರೆ. ನುರಿತ ಈಜುಗಾರರು ಕೂಡ ಹೂಳಿನಿಂದ ಹೊರಬರಲು ಸಾದ್ಯವಾಗದೆ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಮೀನುಗಾರರು.

ಮೀನುಗಾರಿಕೆಗೂ ಅಡ್ಡಿ:ಬಂದರಿನಲ್ಲಿ ತುಂಬಿಕೊಂಡಿರುವ ಹೂಳಿನಿಂದ ಮೀನುಗಾರಿಕೆಗೂ ತೊಡಕಾಗಿದ್ದು ಧಕ್ಕೆಗೆ ಬೋಟ್‌ಗಳು ಸರಾಗವಾಗಿ ಒಳಗೆ ಬರಲು ಹಾಗೂ ಹೊರಗೆ ಹೋಗಲು ಸಾದ್ಯವಾಗುತ್ತಿಲ್ಲ. ಸ್ಪೀಡ್‌ ಬೋಟ್‌ಗಳ ರೆಕ್ಕೆಗಳು ಕೆಸರಿನಲ್ಲಿ ಸಿಲುಕುತ್ತಿದ್ದು ಬೋಟ್‌ಗಳಿಗೆ ಹಾನಿಯಾಗುತ್ತಿದೆ. ನೀರಿನ ಮಟ್ಟ ಇಳಿಮುಖವಾಗಿದ್ದಾಗ ಧಕ್ಕೆಯಿಂದ ಬೋಟ್ ಹೊರ ತೆಗೆಯಲು ಸಾದ್ಯವಾಗುವುದಿಲ್ಲ ಎನ್ನುತ್ತಾರೆ ಬೋಟ್‌ ಮಾಲೀಕರಾದ ವಿಜಯ್‌ ಕುಂದರ್.

ಬೋಟ್‌ನ ತಳಭಾಗ ನೀರಿನ ಮೇಲ್ಮೈನಿಂದ 2 ರಿಂದ 3 ಮೀಟರ್‌ ನೀರಿನ ಆಳಕ್ಕೆ ಇಳಿಯುವುದರಿಂದ ಸರಾಗವಾಗಿ ಕನಿಷ್ಠ ಐದಾರು ಮೀಟರ್ ಆಳ ಇರಬೇಕು. ಆದರೆ, ಮಲ್ಪೆ ಬಂದರಿನ ಕೆಲವು ಕಡೆ ಕೇವಲ ಒಂದು ಮೀಟರ್‌ ಆಳದಲ್ಲಿಯೇ ಕೆಸರು ಕಾಣುತ್ತಿದೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.

ಎಲ್ಲೆಲ್ಲಿ ಸಮಸ್ಯೆ:ಮಲ್ಪೆ ಬಂದರಿನ 1, 2 ಹಾಗೂ 3ನೇ ಜೆಟ್ಟಿಯಲ್ಲಿ ಹೂಳಿನ ಸಮಸ್ಯೆ ಇದೆ. ಬಾಪು ತೋಟದಲ್ಲಂತೂ ಸಮಸ್ಯೆ ಗಂಭೀರವಾಗಿದೆ. ಪ್ರತಿದಿನ ಇಲ್ಲಿ ಬೋಟ್‌ಗಳು ಹೂಳಿನಲ್ಲಿ ಸಿಲುಕುತ್ತಿವೆ ಎನ್ನುತ್ತಾರೆ ಮೀನುಗಾರರು.

ಭಟ್ಕಳ, ಕಾರವಾರ, ಶಿರೂರು ಭಾಗಗಳಿಂದ ಬರುವ ಹೈಸ್ಪೀಡ್‌ ಬೋಟ್‌ಗಳ ಪ್ರಮುಖ ತಂಗುದಾಣವಾಗಿ ಮಲ್ಪೆ ಬಂದರು ಗುರುತಿಸಿಕೊಂಡಿದೆ. ಬಂದರಿನಲ್ಲಿರುವ ಹೂಳಿನ ಸಮಸ್ಯೆಯಿಂದಾಗಿ ಮೀನುಗಾರಿಕಾ ಉದ್ಯಮಕ್ಕೆ ಪೆಟ್ಟುಬೀಳುವ ಜತೆಗೆ ಮೀನುಗಾರರ ಸಂಚಕಾರ ಉಂಟಾಗಿದೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.

ಮೀನುಗಾರರ ಪಾಲಿಗೆ ಸಮುದ್ರಕ್ಕಿಂತ ಹೂಳು ಹೆಚ್ಚು ಆತಂಕ ತಂದೊಡ್ಡಿದೆ. ದಕ್ಕೆಯಲ್ಲಿ ಬಿದ್ದವರು ಮತ್ತೆ ಮೇಲೆ ಬರುವ ಯಾವ ಖಚಿತತೆಯೂ ಇಲ್ಲವಾಗಿದೆ. ಸರ್ಕಾರ ಕೂಡಲೇ ಹೂಳೆತ್ತುವ ಮೂಲಕ ಮೀನುಗಾರರ ಪ್ರಾಣ ರಕ್ಷಣೆ ಮಾಡಬೇಕು ಎನ್ನುತ್ತಾರೆ ಅವರು.

ಬಂದರಿನ ಮೂರು ಜೆಟ್ಟಿಗಳಲ್ಲಿ 1,000 ಬೋಟ್‌ಗಳನ್ನು ನಿಲ್ಲಿಸುವಷ್ಟು ಮಾತ್ರ ಜಾಗವಿದ್ದರೂ 2,500 ಬೋಟ್‌ಗಳು ಬಂದು ನಿಲ್ಲುತ್ತಿವೆ. ಟೆಬ್ಮಾ ಶಿಪ್‌ಯಾರ್ಡ್‌ ಜಾಗವನ್ನು ಬೋಟ್ ನಿಲ್ಲಿಸುವ ತಂಗುದಾಣವಾಗಿಸಿದರೆ ಹೆಚ್ಚು ಅನುಕೂಲವಾಗಲಿದೆ ಎನ್ನುತ್ತಾರೆ ದಯಾನಂದ ಸುವರ್ಣ.

ಹೆಜಮಾಡಿ ಬಂದರಿನ ಸ್ಥಿತಿ:ಮೀನುಗಾರರ 2 ದಶಕಗಳ ಹೋರಾಟದ ಬಳಿಕ ಹೆಜಮಾಡಿ ಬಂದರು ಕಾರ್ಯಾರಂಭವಾಗಿದ್ದು, 188.73 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಹೆಜಮಾಡಿ ಬಂದರು ಸಂಪೂರ್ಣವಾಗಿ ನಿರ್ಮಾಣವಾದರೆ ಕಾಪುವಿನಿಂದ ಸುರತ್ಕಲ್‌ವರೆಗಿನ ಮೀನುಗಾರರಿಗೆ ಉಪಯೋಗವಾಗಲಿದೆ. ವಾರ್ಷಿಕ 26,224 ಮೆಟ್ರಿಕ್ ಟನ್ ಮೀನು ಸಾಮರ್ಥ್ಯ ಹೊಂದಲಿದೆ ಎನ್ನುತ್ತಾರೆ ಹೋರಾಟಗಾರ ವಿಜಯ ಬಂಗೇರ.

‘ಹೂಳು ಬಹುದೊಡ್ಡ ಸಮಸ್ಯೆ’
ಸರ್ವ ಋತು ಬಂದರು ಹಾಗೂ ಏಷ್ಯಾದ ಪ್ರಮುಖ ಮೀನುಗಾರಿಕಾ ಬಂದರು ಎಂಬ ಖ್ಯಾತಿ ಹೊಂದಿರುವ ಮಲ್ಪೆ ಬಂದರಿನಲ್ಲಿ ಏಳೆಂಟು ವರ್ಷಗಳಿಂದ ಹೂಳು ತೆಗೆದಿಲ್ಲ. ಪರಿಣಾಮ ಬೋಟ್‌ಗಳು ಸರಾಗವಾಗಿ ಸಂಚರಿಸಲು ಸಾದ್ಯವಾಗದೆ ಕೆಸರಿನಲ್ಲಿ ಸಿಲುಕುತ್ತಿವೆ. ಬೋಟ್‌ಗಳಿಗೆ ಹಾನಿಯಾಗಿ ಮೀನುಗಾರರು ನಷ್ಟ ಅನುಭವಿಸುತ್ತಿದ್ದಾರೆ. ಬಂದರು ಹೂಳೆತ್ತುವಂತೆ ಪ್ರತಿವರ್ಷ ಮೀನುಗಾರಿಕಾ ಇಲಾಖೆಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಹೋರಾಟ ಮಾಡಲಾಗಿದೆ ಎನ್ನುತ್ತಾರೆ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ.

‘ಬಿದ್ದವರು ಮೇಲೆ ಬಂದರೆ ಪವಾಡ’
ಮಲ್ಪೆಯ ಬಂದರಿನಲ್ಲಿ ಹೂಳಿನಡಿ ಸಿಲುಕಿದ್ದ 100ಕ್ಕೂ ಹೆಚ್ಚು ಶವಗಳನ್ನು ಹೊರ ತೆಗೆದಿದ್ದೇನೆ. ಧಕ್ಕೆಯಲ್ಲಿ ಬಿದ್ದ 40ಕ್ಕೂ ಹೆಚ್ಚು ಜನರ ರಕ್ಷಣೆ ಮಾಡಿದ್ದೇನೆ. ಧಕ್ಕೆಯಲ್ಲಿ ಬಿದ್ದವರು ಬದುಕಿ ಮೇಲೆ ಬರುವುದು ಬಹಳ ಕಡಿಮೆ. ಪರಿಣತ ಈಜುಗಾರರೂ ಕೆಸರಿನಲ್ಲಿ ಸಿಲುಕಿ ಪ್ರಾಣಬಿಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ಹಲವು ಶವಗಳು ಕುತ್ತಿಗೆಯವರೆಗೂ ಕೆಸರಿನಲ್ಲಿ ಹೂತುಹೋಗಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಸರ್ಕಾರ ಬಂದರಿನಲ್ಲಿ ತುಂಬಿಕೊಂಡಿರುವ ಹೂಳು ತೆಗೆಸಿದರೆ ಬಡ ಮೀನುಗಾರರ, ಕೂಲಿ ಕಾರ್ಮಿಕರ ಜೀವ ಉಳಿಸಬಹುದು.

‘ಹೂಳೆತ್ತಲು ₹ 3 ಕೋಟಿ ಅನುದಾನ ಬಿಡುಗಡೆ’
ಮಲ್ಪೆ ಬಂದರು ಹೂಳೆತ್ತಲು ಸರ್ಕಾರದಿಂದ ₹ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು. 2 ತಿಂಗಳಲ್ಲಿ ಬಂದರು ಹೂಳೆತ್ತುವ ಪ್ರಕ್ರಿಯೆ ಶುರುವಾಗಲಿದೆ ಎನ್ನುತ್ತಾರೆ ಬಂದರು ಇಲಾಖೆಯ ಅಧಿಕಾರಿಗಳು.

ಮಲ್ಪೆ ಬಂದರಿನಲ್ಲಿ ಮೃತಪಟ್ಟ ಮೀನುಗಾರರ ವಿವರ
ವರ್ಷ–ಮೃತಪಟ್ಟ ಮೀನುಗಾರರು

2017–8
2018–10
2019–8
2020–11
2021–9
2022–11

ಪೂರಕ ಮಾಹಿತಿ: ಕೆ.ಸಿ.ರಾಜೇಶ್‌, ಅಬ್ದುಲ್ ಹಮೀದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT