ಮಂಗಳವಾರ, ನವೆಂಬರ್ 24, 2020
22 °C
ಮಲ್ಪೆ ವಾಸುದೇವ ಸಾಮಗರು ಇನ್ನಿಲ್ಲ: ಕಳಚಿತು ಯಕ್ಷಗಾನ ವಿದ್ವತ್ ಪರಂಪರೆಯ ಕೊಂಡಿ

ರಂಗದಲ್ಲಿ ಮಿಂಚಿ ಮರೆಯಾದ ಧೀಮಂತಿಕೆಯ ಅರ್ಥದಾರಿ ಮಲ್ಪೆ ವಾಸುದೇವ ಸಾಮಗ

ವಿಶೇಷ ವರದಿ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಯಕ್ಷಗಾನದ ಹಿರಿಯ ವೇಷಧಾರಿ, ತಾಳಮದ್ದಳೆ ಅರ್ಥಧಾರಿ ಹಾಗೂ ಸಂಘಟಕರಾದ ಎಂ.ಆರ್.ವಾಸುದೇವ ಸಾಮಗರು (71) ಶನಿವಾರ ಬೆಳಗಿನ ಜಾವ 3ಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಕೋವಿಡ್‌–19ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಮೃತರಿಗೆ ಪತ್ನಿ ಮೀರಾ ಹಾಗೂ ಪುತ್ರ ಡಾ.ಪ್ರದೀಪ ಸಾಮಗ ಇದ್ದಾರೆ. ಕೋಟೇಶ್ವರದ ನಿವಾಸದಲ್ಲಿ ಶನಿವಾರ ಅಂತ್ಯಕ್ರಿಯೆ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಲ್ಪೆ ರಾಮದಾಸ ಸಾಮಗ ಹಾಗೂ ನಾಗರತ್ನ ದಂಪತಿಯ ಪುತ್ರನಾಗಿ 1949ರಲ್ಲಿ ವಾಸುದೇವ ಸಾಮಗರು ಜನಿಸಿದರು. 19ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿ, ಐದು ದಶಕಗಳ ಕಾಲ ಕರಾವಳಿಯ ಪ್ರಸಿದ್ಧ ಅಮೃತೇಶ್ವರಿ, ಪೆರ್ಡೂರು, ಧರ್ಮಸ್ಥಳ, ಕದ್ರಿ, ಸಾಲಿಗ್ರಾಮ, ಶಿರಸಿ, ಸುರತ್ಕಲ್ ಮೇಳಗಳಲ್ಲಿ ಕಲಾಸೇವೆ ಮಾಡಿದ್ದರು.

‘ಸಂಯಮಂ’ ಸಂಘಟನೆ ಕಟ್ಟಿ ನಾಡಿನಾದ್ಯಂತ ತಾಳಮದ್ದಳೆಯನ್ನು ಪರಿಚಯಿಸಿದ್ದರು. 80 ತಾಳಮದ್ದಳೆ ಪ್ರಸಂಗಗಳನ್ನು ಸಂಪಾದಿಸಿದ್ದು, 30ಕ್ಕೂ ಹೆಚ್ಚು ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕಿಲಾರು, ಗೋಪಾಲ ಕೃಷ್ಣಯ್ಯ ಪ್ರಶಸ್ತಿ, ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಸೇರಿದಂತೆ ಹಲವು ಪುರಸ್ಕಾರಗಳು ಸಾಮಗರನ್ನು ಹರಸಿ ಬಂದಿವೆ.

ಯಕ್ಷಗಾಲ ಲೋಕದ ಧ್ರುವತಾರೆ

ಬಪ್ಪನಾಡು ದೇಗುಲದಲ್ಲಿ ಗೆಳೆಯರ ಒತ್ತಡಕ್ಕೆ ಮಣಿದು ಹರಿಕಥೆ ಮಾಡಿದ ಹುಡುಗ ಮುಂದೆ ಯಕ್ಷಗಾನ ಲೋಕದ ಧ್ರುವತಾರೆಯಾಗಿ ಬೆಳೆದರು. 5 ದಶಕಗಳಿಗೂ ಹೆಚ್ಚು ಕಾಲ ತಾಳಮದ್ದಳೆಯ ಅರ್ಥದಾರಿಯಾಗಿ ಕಲಾರಸಿಕರನ್ನು ರಂಜಿಸಿದರು. ಅವರು ಮಲ್ಪೆ ವಾಸುದೇವ ಸಾಮಗರು.

ಅರ್ಥಗಾರಿಕೆಯ ರುಚಿ ಹತ್ತಿದ್ದು: ತಂದೆ ಮಲ್ಪೆ ರಾಮದಾಸ ಸಾಮಗರ ಹರಿಕಥೆಗೆ ತಬಲ ವಾದನಕ್ಕೆ ಆಮಂತ್ರಣ ನೀಡಲು ರಾಮಚಂದ್ರ ಪಾಂಗಣ್ಣಾಯರ ವಿದ್ಯಾದಾಯಿನಿ ಯಕ್ಷಗಾನ ಸಂಘಕ್ಕೆ ಹೋಗಿದ್ದಾಗ ವಾಸುದೇವ ಸಾಮಗರಿಗೆ ಅರ್ಥಗಾರಿಕೆಯ ರುಚಿ ಹತ್ತಿತ್ತು. ಅಲ್ಲಿಂದ ಅವರು ತಾಳಮದ್ದಳೆಯ ಖಾಯಂ ಅರ್ಥಧಾರಿಯಾಗಿ ಗುರುತಿಸಿಕೊಂಡರು.

ಮೇಳ ಪ್ರವೇಶ: ಹಂಗಾರಕಟ್ಟೆ ವಾರ್ಷಿಕ ಕೂಟದಲ್ಲಿ ‘ಕೃಷ್ಣಾರ್ಜುನ’ ಪ್ರಸಂಗದಲ್ಲಿನ ಕೃಷ್ಣನ ಪಾತ್ರ ಕಂಡು ಅಂದಿನ ಅಮೃತೇಶ್ವರಿ ಮೇಳದ ಯಜಮಾನರಾಗಿದ್ದ ಪಿ.ಶ್ರೀಧರ ಹಂದೆ ಅವರು ಸಾಮಗರನ್ನು ಮೇಳಕ್ಕೆ ಆಹ್ವಾನಿಸಿದರು. ಅಂದಿನಿಂದ ಅಧಿಕೃತ ವೃತ್ತಿರಂಗ ಪ್ರವೇಶವಾಯಿತು. ನಾರ್ಣಪ್ಪ ಉಪ್ಪೂರರ ಪ್ರಧಾನ ಭಾಗವತಿಕೆಯ ಮೇಳದಲ್ಲಿ ಪರಿಪೂರ್ಣ ಕಲಾವಿದರಾಗಿ ರೂಪುಗೊಂಡ ಸಾಮಗರಿಗೆ ಚಿಟ್ಟಾಣಿ, ಕೋಟ ವೈಕುಂಠ, ಗಜಾನನ ಹಳದೀಪುರ, ಸಾಲ್ಕೋಡು ಗಣಪತಿ ಹೆಗಡೆ ಸೇರಿದಂತೆ ಪ್ರಸಿದ್ಧ ಕಲಾವಿದರ ಸಾಂಗತ್ಯ ಬೆಳೆಯಿತು.

ಪೂರ್ಣ ಪ್ರಮಾಣದ ಕುಣಿತಗಾರನಾಗಿ ಎಂ.ಎ.ನಾಯ್ಕರ ಜೋಡಿಯಾಗಿ ರಂಗದ ಮೇಲೆ ಮಿಂಚಿದರು. ಯಕ್ಷಲೋಕ ವಿಜಯ ಪ್ರಸಂಗದ ‘ಪ್ರದೀಪ’ನ ಪಾತ್ರ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ‘ರಾಜಾ ಪ್ರಭಂಜನ’ ಪ್ರಸಂಗದ ‘ಸರಳ’ನ ಪಾತ್ರದಿಂದ ನಿರ್ದೇಶಕರಾದರು.

‘ಶ್ರೀಕೃಷ್ಣ ತುಲಾಭಾರ’ ಪ್ರಸಂಗದಲ್ಲಿ ಸತ್ಯಭಾಮೆಯಾಗಿ ಸ್ತ್ರೀವೇಷಕ್ಕೂ ಸೈಎನಿಸಿಕೊಂಡರು. ಮೋಹನ ತರಂಗಿಣಿಯ ಪ್ರಥಮ ಮನ್ವಥ ಪಾತ್ರ  ಪ್ರೇಕ್ಷಕರ ಗಮನ ಸೆಳೆಯಿತು. ಸಮಕಾಲೀನ ವಿಚಾರಗಳನ್ನು ಹರಿಕಥೆಯಲ್ಲಿ ಬಳಸಿಕೊಳ್ಳುವಂತೆ ಆಟದಲ್ಲೂ ಔಚಿತ್ಯಪೂರ್ಣವಾಗಿ ಬಳಸುವ ಪ್ರಯೋಗ ಮಾಡಿ ಹೊಗಳಿಕೆ ಹಾಗೂ ತೆಗೆಳಿಕೆಗಳನ್ನು ಸ್ವೀಕರಿಸಿದರು.

ಬೀಸಿದ ತೆಂಕಣ ಗಾಳಿ

ಬಡಗುತಿಟ್ಟಿನಿಂದ ತೆಂಕುತಿಟ್ಟು ಪ್ರವೇಶಿಸಿದ ಸಾಮಗರು ಅದ್ಭುತ ಹೆಜ್ಜೆಗಾರಿಕೆ ಹಾಗೂ ದಿಗಿಣದ ಮೂಲಕ ಬಹುಬೇಗ ಪ್ರಸಿದ್ಧರಾದರು. ದೇವಿ  ಮಹಾತ್ಮೆ ಪ್ರಸಂಗದಲ್ಲಿ ಬ್ರಹ್ಮನಾಗಿ ಕಣ್ಮನ ಸೆಳೆದರು. ಕುಣಿತ, ಅಭಿನಯ ಮಾತ್ರವಲ್ಲ, ರಂಗ ಸಂಘಟಕರಾಗಿ, ಎಲೆಕ್ಟ್ರಿಷಿಯನ್‌, ಟಿಕೆಟ್‌ ರೂಂ, ಕ್ಯಾಂಪ್‌ ಬುಕ್ಕಿಂಗ್‌, ಮ್ಯಾನೇಜ್ಮೆಂಟ್‌ ವಿಭಾಗಗಳಲ್ಲಿ ದುಡಿದರು.

ಧರ್ಮಸ್ಥಳ ಮೇಳದಲ್ಲಿ ಕಾಯಕಲ್ಪ ಪ್ರಸಂಗದ ಅಶ್ವಿನಿ ದೇವತೆ, ಸಹಸ್ರ ಕವಚಮೋಕ್ಷದ ನಾರಾಯಣ ಋಷಿ, ವೇಣುಗಂಧರ್ವ ಪಾತ್ರಗಳು ಹೆಚ್ಚು ಜನಪ್ರಿಯತೆ ತಂದುಕೊಟ್ಟವು. ಕದ್ರಿ ಮೇಳ, ಸಾಲಿಗ್ರಾಮ ಮೇಳಗಳಲ್ಲಿ ಅಭಿನಯಿಸಿದರು. ಭಾಗವತಿಕೆಯ ಧೃವತಾರೆಯಾಗಿದ್ದ ಕಾಳಿಂಗ ನಾವುಡರ ಜತೆಗೂ ರಂಗ ಹಂಚಿಕೊಂಡರು.

ಮುಂದೆ ಸುರತ್ಕಲ್‌ ಮೇಳ, ಶಿರಸಿ ಮೇಳ, ಪೆರ್ಡೂರು ಮೇಳ, ಬಗ್ವಾಡಿ ಮೇಳ, ಕರ್ನಾಟಕ ಮೇಳಗಳಲ್ಲಿ ಗುರುತಿಸಿಕೊಂಡು, ರಂಗದ ಬಗ್ಗೆ ಸಣ್ಣದೊಂದು ಜಿಗುಪ್ಸೆ ಮೂಡಿ ಆಟದ ತಿರುಗಾಟಕ್ಕೆ ವಿದಾಯ ಹೇಳಿದರು ಸಾಮಗರು.

ಸಂಯಮಂ ಉದಯ: 3 ದಶಕಗಳ ಹಿಂದೆ ‘ಸಂಯಮಂ’ ತಂಡ ಕಟ್ಟಿ ತಿರುಗಾಟ ನಡೆಸಿ ಕರುನಾಡಿಗೆ ತಾಳಮದ್ದಳೆಯ ರುಚಿ ಹತ್ತಿಸಿದರು. ಹೊಸಪೀಳಿಗೆಯ ಪ್ರೇಕ್ಷಕರನ್ನು ಯಕ್ಷಗಾನದೆಡೆಗೆ ಸೆಳೆಯುವ ಯತ್ನದಲ್ಲಿ ಸಫಲರಾದರು. 2018, ನವೆಂಬರ್ 2ರ ಹೊತ್ತಿಗೆ 17 ತಿರುಗಾಟ ಮುಗಿಸಿ ‘ಸಂಯಮಂ’ ತಿರುಗಾಟ ನಿಲ್ಲಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.