ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಿ’

ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published : 29 ಸೆಪ್ಟೆಂಬರ್ 2024, 7:15 IST
Last Updated : 29 ಸೆಪ್ಟೆಂಬರ್ 2024, 7:15 IST
ಫಾಲೋ ಮಾಡಿ
Comments

ಉಡುಪಿ: ಈ ಹಿಂದೆ ಮ್ಯಾನುವಲ್ ಸ್ಕ್ಯಾವೆಂಜಿಂಗ್‌ ವೃತ್ತಿ ನಿರ್ವಹಿಸುತ್ತಿದ್ದವರಿಗೆ ಸರ್ಕಾರದ ವಿವಿಧ ಸೌಲಭ್ಯಗಳು ಸೇರಿದಂತೆ ಪುನರ್ವಸತಿ ಯೋಜನೆಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಮ್ಯಾನುವಲ್ ಸ್ಕ್ಯಾವೆಂಜಿಂಗ್‌ ಪದ್ಧತಿ ದೇಶದಾದ್ಯಂತ ನಿಷೇಧವಿದೆ. ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ಸನ್ನು ನೇಮಿಸಿಕೊಂಡು ಕೆಲಸ ಮಾಡಿಸಿದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಗುರುತಿಸಲಾದ ಮ್ಯಾನುವಲ್ ಸ್ಕ್ಯಾವೆಂಜರ್ಸ್‌ಗಳಿಗೆ, ಮೃತಪಟ್ಟಿರುವ ಮ್ಯಾನುವಲ್ ಸ್ಕ್ಯಾವೆಂಜರ್ಸ್‌ಗಳ ಕುಟುಂಬದ ಅವಲಂಬಿತರಿಗೆ ಗುರುತಿನ ಚೀಟಿ, ಒಂದು ಬಾರಿ ನಗದು ಸಹಾಯ, ಮನೆ, ನಿವೇಶನ, ಶಿಕ್ಷಣ, ವಿದ್ಯಾರ್ಥಿವೇತನ, ಉದ್ಯೋಗ, ಸಾಲ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.

ಜಿಲ್ಲೆಯ ನಗರ ಅಥವಾ ಗ್ರಾಮೀಣ ಭಾಗದ ಯಾವುದೇ ಮನೆ, ಆಸ್ಪತ್ರೆ, ಅಪಾರ್ಟ್‌ಮೆಂಟ್‌, ಕಂಪನಿ ಸೇರಿದಂತೆ ಯಾವುದೇ ಕಡೆ ಮ್ಯಾನ್‌ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ ಗುಂಡಿ ಕಟ್ಟಿಕೊಂಡಲ್ಲಿ ಸ್ವಚ್ಛಗೊಳಿಸಲು ಘನ ತ್ಯಾಜ್ಯ ವಿಲೇವಾರಿ ವಾಹನಗಳ ಬಳಕೆ ಮಾಡಬೇಕು. ಇದಕ್ಕಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 14420, ಗ್ರಾಮೀಣ ಪ್ರದೇಶದಲ್ಲಿ 9480985555 ಸಹಾಯವಾಣಿಗೆ ಕರೆ ಮಾಡಬಹುದು ಎಂದು ತಿಳಿಸಿದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮ್ಯಾನುವಲ್ ಸ್ಕ್ಯಾವೆಂಜರ್ಸ್‌ ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ ಶೇ 5ರಷ್ಟು ಪ್ರವೇಶ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಪೌರ ಕಾರ್ಮಿಕರು ದೈನಂದಿನ ಸ್ವಚ್ಛತಾ ಕಾರ್ಯದ ಕರ್ತವ್ಯ ನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಪರಿಕರಗಳನ್ನು ಧರಿಸಿ, ಕಾರ್ಯ ನಿರ್ವಹಿಸಬೇಕು. ತಪ್ಪಿದ್ದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇದರ ಬಳಕೆ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ಪೌರ ಕಾರ್ಮಿಕರ ಆರೋಗ್ಯ ಹಿತದೃಷ್ಟಿಯಿಂದ ಪೌರಾಡಳಿತದ ನಿರ್ದೇಶನದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡಿಸಬೇಕು. ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಪ್ರತಿ ತಿಂಗಳ ವೇತನವನ್ನು ಕಾಲ ಕಾಲಕ್ಕೆ ಪಾವತಿಸಬೇಕು ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ, ಸಹಾಯಕ ಆಯುಕ್ತ ಮಹೇಶ್ಚಂದ್ರ, ಡಿವೈಎಸ್‌ಪಿ ಡಿ.ಟಿ. ಪ್ರಭು, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಾಡ್ಲೂರು, ಪೌರಾಯುಕ್ತ ರಾಯಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT