ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿ ಮಾಂಸ ದರ ಏರಿಕೆ: ಶುಂಠಿಯೂ ದುಬಾರಿ

Published 1 ಜೂನ್ 2023, 23:30 IST
Last Updated 1 ಜೂನ್ 2023, 23:30 IST
ಅಕ್ಷರ ಗಾತ್ರ

ಬಾಲಚಂದ್ರ ಎಚ್‌.

ಉಡುಪಿ: ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ದರ ಏರುಗತಿಯಲ್ಲಿ ಸಾಗಿದ್ದು ತಿಂಗಳಿನಲ್ಲಿ ಕೆ.ಜಿಗೆ ₹50ರಷ್ಟು ಹೆಚ್ಚಾಗಿದೆ. ತಿಂಗಳ ಹಿಂದೆ ಕೆ.ಜಿಗೆ 200ರ ಆಸುಪಾಸಿನಲ್ಲಿದ್ದ ಚಿಕನ್‌ ದರ ಪ್ರಸ್ತುತ ಶೇ 25ರಷ್ಟು ಏರಿಕೆ ಕಂಡಿದೆ.

ಬ್ರಾಯ್ಲರ್ ಕೋಳಿ (ಜೀವಂತ) ಕೆ.ಜಿಗೆ ₹170, ಚರ್ಮ ಸಹಿತ ಕೋಳಿ ಕೆ.ಜಿಗೆ ₹240 ಹಾಗೂ ಚರ್ಮ ರಹಿತ ಕೋಳಿ ಕೆ.ಜಿಗೆ ₹260 ಮುಟ್ಟಿದ್ದು ಮಾಂಸ ಪ್ರಿಯರಿಗೆ ಹೊರೆಯಾಗಿದೆ.

ಮತ್ತಷ್ಟು ಹೆಚ್ಚಲಿದೆ ದರ

ಕರಾವಳಿಯಲ್ಲಿ ಯಾಂತ್ರೀಕೃತ ಬೋಟ್‌ಗಳ ಮೀನುಗಾರಿಕೆ ನಿಷೇಧವಾಗಿರುವುದರಿಂದ ಮೀನಿನ ಅಲಭ್ಯತೆ ಹಾಗೂ ದರ ಹೆಚ್ಚಳದ ಪರಿಣಾಮ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗಲಿದೆ. ಪರಿಣಾಮ ಸಹಜವಾಗಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಜತೆಗೆ, ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವುದರಿಂದ ಸಹಜವಾಗಿ ಕೋಳಿ ಮಾಂಸಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿ ಬೆಲೆ ಹೆಚ್ಚಾಗಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕೋಳಿ ಸಾಕಣೆಯಲ್ಲಿ ಬಳಸುವ ಮೆಕ್ಕೆಜೋಳ, ಸೋಯಾ, ಅಕ್ಕಿ ನುಚ್ಚು, ಹಿಟ್ಟು ಸೇರಿದಂತೆ ಹಲವು ಕಚ್ಚಾವಸ್ತುಗಳ ದರ ಏರಿಕೆ, ಕೂಲಿ ಕಾರ್ಮಿಕರ ಅಲಭ್ಯತೆ, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ, ಬೇಸಿಗೆಯಲ್ಲಿ ಮಾಂಸ ಉತ್ಪಾದನೆ, ಇಂಧನ ದರ ಹೆಚ್ಚಳ, ದುಬಾರಿ ಸಾಗಣೆ ವೆಚ್ಚದಿಂದಾಗಿ ಕೋಳಿ ಮಾಂಸ ದರ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ನಾಟಿ ಕೋಳಿ ಬಲು ದುಬಾರಿ: ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಸಾಕುವ ನಾಟಿ ಕೋಳಿಗಳ ದರವೂ ಹೆಚ್ಚಾಗಿದೆ. ಕೆ.ಜಿಗೆ ₹350 ರಿಂದ ₹380 ಇದ್ದ ದರ ₹450ಕ್ಕೆ ಮುಟ್ಟಿದೆ. ಮೊಟ್ಟೆಯ ದರ ಸ್ಥಿರವಾಗಿದ್ದು ಒಂದಕ್ಕೆ ₹6.50 ಇದೆ.

ಶುಂಠಿ ದರ ಗಗನಕ್ಕೆ

ಸಾಮಾನ್ಯವಾಗಿ ಕೆ.ಜಿಗೆ ₹70 ರಿಂದ ₹80ರ ಆಸುಪಾಸಿನಲ್ಲಿರುತ್ತಿದ್ದ ಶುಂಠಿಯ ದರ ಗಗನಕ್ಕೇರಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹250ರಿಂದ ₹280 ಮುಟ್ಟಿದೆ. ಶುಂಠಿಯನ್ನು ಹೆಚ್ಚಾಗಿ ಬೆಳೆಯುವ ಕೇರಳ, ಆಂಧ್ರ, ಹಾಗೂ ತಮಿಳುನಾಡಿನಲ್ಲಿ ಶುಂಠಿಗೆ ರೋಗಬಾಧೆಯಿಂದ ಇಳುವರಿ ಕುಸಿತವಾಗಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.

ಸಸ್ಯಹಾರಿ ಹಾಗೂ ಮಾಂಸಹಾರಿ ಖಾದ್ಯಗಳಿಗೆ ಶುಂಠಿಯ ಬಳಕೆ ಹಾಗೂ ತಂಪು ಪಾನೀಯಗಳ ಬಳಕೆಗೂ ಹೆಚ್ಚು ಉಪಯೋಗವಾಗುತ್ತಿರುವುದರಿಂದ ದರ ಹೆಚ್ಚಾಗಿದ್ದರೂ ಶುಂಠಿಗೆ ಬೇಡಿಕೆ ತಗ್ಗಿಲ್ಲ.

ತರಕಾರಿ ದರ ಸ್ಥಿರ

ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿಗಳ ದರದಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಕ್ಯಾರೆಟ್‌, ಬೀನ್ಸ್‌ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದರೆ, ಈರುಳ್ಳಿ, ಬೆಂಡೆ, ತೊಂಡೆಕಾಯಿ ದರ ಸ್ವಲ್ಪ ಇಳಿಕೆ ಕಂಡಿವೆ. ನೂರರ ಗಡಿ ದಾಟಿದ್ದ ಬೀನ್ಸ್‌ ಪ್ರಸ್ತುತ ₹100ಕ್ಕೆ ಸಿಗುತ್ತಿದೆ. ವಾರದ ಹಿಂದೆ ₹50ಕ್ಕೆ ಸಿಗುತ್ತಿದ್ದ ಕ್ಯಾರೆಟ್ ₹90 ಮುಟ್ಟಿದೆ.

ಏಪ್ರಿಲ್‌ನಲ್ಲಿ ಕ್ಯಾರೆಟ್‌ ಕೆ.ಜಿಗೆ ₹40ಕ್ಕೆ ಸಿಗುತ್ತಿತ್ತು. ಮೇನಲ್ಲಿ ದರ ಏರಿಕೆ ಆರಂಭವಾಗಿದ್ದು ದುಪ್ಪಟ್ಟಾಗಿದೆ. ಕೆಲವೇ ದಿನಗಳಲ್ಲಿ ₹100ಕ್ಕೆ ಮುಟ್ಟಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಸೋರೆಕಾಯಿ ₹25, ಎಲೆಕೋಸು ₹20, ಬದನೆಕಾಯಿ ₹40, ಸಾಂಬಾರ್ ಸೌತೆ ₹25‌, ಕುಂಬಳಕಾಯಿ ₹30, ಹೂಕೋಸು ₹25, ಸೋತೆಕಾಯಿ ₹25, ಬೀಟ್‌ರೂಟ್‌ ₹40 ದರ ಇದೆ.

ಹಣ್ಣುಗಳ ದರವೂ ಅಲ್ಪ ಏರಿಕೆ: ಹಣ್ಣುಗಳ ದರವೂ ಅಲ್ಪ ಹೆಚ್ಚಾಗಿದ್ದು ಸೇಬು ₹200ರಿಂದ ₹280, ದಾಳಿಂಬೆ ₹200 ರಿಂದ ₹220, ಮೂಸಂಬಿ ₹100, ಸಪೋಟ ₹100, ಏಲಕ್ಕಿ ಬಾಳೆಹಣ್ಣು ಕೆ.ಜಿಗೆ ₹60, ಪಪ್ಪಾಯ ₹40, ಕಲ್ಲಂಗಡಿ ₹25, ಸೀಬೆ ₹80 ರಿಂದ ₹100 ದರ ಇತ್ತು. 

ತರಕಾರಿ ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಟೊಮೆಟೊ;30

ಈರುಳ್ಳಿ;25

ಬೆಂಡೆಕಾಯಿ;40

ಆಲೂಗಡ್ಡೆ;30

ತೊಂಡೆಕಾಯಿ;40

ಕ್ಯಾರೆಟ್‌;90

ಹಸಿ ಮೆಣಸಿನಕಾಯಿ;90

ಕ್ಯಾಪ್ಸಿಕಂ;50

ಬೆಳ್ಳುಳ್ಳಿ;120

ಹಿರೇಕಾಯಿ;40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT