ಉಡುಪಿ: ಹೂವು, ತಳಿರು ತೋರಣ, ರಂಗೋಲಿಯಿಂದ ಸಿಂಗಾರಗೊಂಡ ಕಟ್ಟಡ, ಮಂಗಳವಾದ್ಯಗಳ ನಿನಾದ, ಎಲ್ಲರ ಮೊಗದಲ್ಲೂ ಕಳೆಗಟ್ಟಿದ ಸಂತಸ, ನಗುಮೊಗದಿಂದಲೇ ಅತಿಥಿಗಳನ್ನು ಸ್ವಾಗತಿಸಿದ ಅಧಿಕಾರಿಗಳು...
ಇಂತಹ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾಗಿದ್ದು ಉಡುಪಿಯ ನಿಟ್ಟೂರಿನ ರಾಜ್ಯ ಮಹಿಳಾ ನಿಲಯ.
ನಿಲಯದ ನಿವಾಸಿ ಖಷ್ಬು ಸುಮೇರಾ ಮತ್ತು ಮಧುರಾಜ್ ಎ.ಡಿ ಅವರ ವಿವಾಹ ಸಮಾರಂಭವು ಶುಕ್ರವಾರ ಇಲ್ಲಿ ವಿಜೃಂಭಣೆಯಿಂದ ಜರುಗಿತು.
ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಅವರು, ವಧುವನ್ನು ಧಾರೆ ಎರೆದು ಕೊಟ್ಟರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ, ನಿಲಯದ ಅಧೀಕ್ಷಕಿ ಪುಷ್ಪರಾಣಿ ಸೇರಿದಂತೆ ಅಧಿಕಾರಿಗಳು ಈ ವಿವಾಹದ ಮಂಗಳ ಕಾರ್ಯದಲ್ಲಿ ಪಾಲ್ಗೊಂಡರು.
ರಾಜಸ್ಥಾನ ಮೂಲದ ಅನಾಥೆ ಸುಮೇರಾ ಆರಂಭದಲ್ಲಿ ಕಾರವಾರದ ಬಾಲಕಿಯರ ನಿಲಯದಲ್ಲಿದ್ದಳು, ಅನಂತರ ಉಡುಪಿಯ ಬಾಲಕಿಯರ ನಿಲಯಕ್ಕೆ ಆಕೆಯನ್ನು ಕರೆತರಲಾಗಿತ್ತು. 18 ವರ್ಷ ಪೂರ್ತಿಯಾದ ಬಳಿಕ ರಾಜ್ಯ ಮಹಿಳಾ ನಿಲಯದ ನಿವಾಸಿಯಾಗಿದ್ದಾಳೆ ಎಂದು ಪುಷ್ಪರಾಣಿ ತಿಳಿಸಿದರು.
ಮೂರು ವರ್ಷಗಳವರೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ನಮ್ಮ ಇಲಾಖೆಯವರು ಯುವತಿಯ ಮನೆಗೆ ತೆರಳಿ ಸ್ಥಿತಿಗತಿಗಳನ್ನು ನಿರೀಕ್ಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.
21 ವರ್ಷದ ಸುಮೇರಾ ಪಿಯುಸಿ ಓದಿದ್ದು, ಮಕ್ಕಳ ರಕ್ಷಣಾ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 25 ವರ್ಷದ ಮಧುರಾಜ್ ಶಿವಮೊಗ್ಗದ ತೀರ್ಥಹಳ್ಳಿಯ ಅಂಬುತೀರ್ಥ ನಿವಾಸಿಯಾಗಿದ್ದು ಪದವೀಧರರಾಗಿದ್ದಾರೆ. ಕೃಷಿಕರಾಗಿರುವ ಅವರು ಕೆಟರಿಂಗ್ ವೃತ್ತಿಯನ್ನೂ ಮಾಡುತ್ತಿದ್ದಾರೆ.
ಮದುವೆಯ ವಿಧಿ ವಿಧಾನಗಳನ್ನು ಪುರೋಹಿತರು ನೆರವೇರಿಸಿದರು. ಮದುವೆಗೆ ಬಂದವರಿಗೆ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಭೋಜನದ ವ್ಯವಸ್ಥೆ, ಅಲಂಕಾರ, ವಾದ್ಯಮೇಳದ ಖರ್ಚುವೆಚ್ಚಗಳನ್ನು ದಾನಿಗಳು ಭರಿಸಿದ್ದರು.
ಇದು ಈ ಮಹಿಳಾ ನಿಲಯದಲ್ಲಿ ನಡೆದ 25ನೇ ಮದುವೆಯಾಗಿದೆ. ಪೊಲೀಸ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ವರನ ಪೂರ್ವಾಪರಗಳನ್ನು ವಿಚಾರಿಸಿದ ಬಳಿಕವೇ ಮದುವೆಗೆ ಒಪ್ಪಿಗೆ ಸೂಚಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು. ಮಹಿಳಾ ನಿಲಯದಲ್ಲಿ ವಧು ಅನ್ವೇಷಿಸಿ ಹಲವರು ನಮ್ಮನ್ನು ಭೇಟಿಯಾಗುತ್ತಾರೆ. ಯುವತಿಯರಿಗಿಂತ ಹೆಚ್ಚು ವಯಸ್ಸಿನ ಅಂತರವಿರುವವರನ್ನು ನಾವು ಪರಿಗಣಿಸುವುದಿಲ್ಲ. ಯುವತಿಯರು ಸಮ್ಮತಿ ಸೂಚಿಸಿದ ಬಳಿಕವೇ ಮದುವೆಗೆ ಒಪ್ಪಿಗೆ ನೀಡುತ್ತೇವೆ ಎಂದರು. ಯುವತಿಯ ಮುಂದಿನ ಜೀವನಕ್ಕಾಗಿ ಸರ್ಕಾರದ ವತಿಯಿಂದ ₹15 ಸಾವಿರ ಸ್ಥಿರ ಠೇವಣಿ ಇಡಲಾಗುವುದು. ಮದುವೆಗೆ ಖರ್ಚಿಗೆ ₹5 ಸಾವಿರ ನೀಡಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.