ಮಂಗಳವಾರ, ಅಕ್ಟೋಬರ್ 20, 2020
23 °C
ಅ.13ರಂದು 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಕಾಣಿಸಲಿರುವ ಅಂಗಾರಕ

ಭೂಮಿಗೆ ಹತ್ತಿರದಲ್ಲಿ ಕಾಣಲಿದೆ ಮಂಗಳ ಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಅಕ್ಟೋಬರ್‌ 13ರಂದು ಮಂಗಳಗ್ರಹ ಭೂಮಿಗೆ ಹತ್ತಿರವಾಗಿ ಕಾಣುತ್ತಾನೆ. ಈ ಆಕಾಶ ವಿಸ್ಮಯವನ್ನು ಖಗೋಳಾಸಕ್ತರು ಕಣ್ತುಂಬಿಕೊಳ್ಳಬಹುದು ಎಂದು ಪೂರ್ಣಪ್ರಜ್ಞ ಅಮೆಚೂರ್‌ ಆಸ್ಟ್ರೋನಾಮರ್ಸ್‌ ಕ್ಲಬ್‌ನ ಸಹ ಸಂಚಾಲಕ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಸುಮಾರು 2 ವರ್ಷ 2 ತಿಂಗಳಿಗೊಮ್ಮೆ ಭೂಮಿಯ ಸಮೀಪದಲ್ಲಿ ಮಂಗಳ ಗ್ರಹ ಕಾಣುತ್ತದೆ. ಸಮೀಪ ಬಂದಾಗ ಕೆಂಬಣ್ಣದಿಂದ ದೊಡ್ಡದಾಗಿ ಹೊಳೆಯುತ್ತ ರಾತ್ರಿ ಆಕಾಶದಲ್ಲಿ ಎಲ್ಲರನ್ನೂ ಸೆಳೆಯುತ್ತದೆ. ಅ.13 ರಂದು ಭೂಮಿಗೆ ಸಮೀಪ ಅಂದರೆ 6 ಕೋಟಿ 20 ಲಕ್ಷ ಕಿ.ಮೀ ದೂರದಲ್ಲಿ ಕಾಣಿಸಲಿದ್ದು, ವಾರವಿಡಿ ಬರಿಗಣ್ಣಿಗೆ ಗೋಚರಿಸಲಿದೆ. ಇದಕ್ಕೆ ಮಾರ್ಸ್ ಒಪೋಸಿಷನ್ (ಮಂಗಳನ ವಿಯುತಿ) ಎನ್ನುತ್ತಾರೆ ಎಂದು ತಿಳಿಸಿದ್ದಾರೆ.

ಕೆಂಡದಂತೆ ಕಾಣುವ ಕಾರಣಕ್ಕೆ ಮಂಗಳ ಗ್ರಹಕ್ಕೆ ಅಂಗಾರಕ ಎಂಬ ಹೆಸರು ಬಂದಿದ್ದು, ಯಾವಾಗಲೂ ಹೀಗೆ ಕಾಣುವುದಿಲ್ಲ. 2021 ಡಿಸೆಂಬರ್ ಸಮಯಕ್ಕೆ ಭೂಮಿಯಿಂದ ಸುಮಾರು 39 ಕೋಟಿ ಕಿ.ಮೀ ದೂರದಲ್ಲಿ ಕಾಣುವ ಮಂಗಳ ಪ್ರತಿ 2 ವರ್ಷ 2 ತಿಂಗಳಿಗೊಮ್ಮೆ ಹತ್ತಿರ ಬರುತ್ತಾನೆ. ಅ.13ರಂದು ಭೂಮಿಗೆ ಹತ್ತಿರವಾಗಿ ಕಾಣುವಷ್ಟು ಮತ್ತೆ ಕಾಣಿಸಿಕೊಳ್ಳುವುದು 2,035ಕ್ಕೆ ಮಾತ್ರ. ಹಿಂದೆ 2003ರಲ್ಲಿ 2018 ರಲ್ಲಿ ಭೂಮಿಗೆ ಹತ್ತಿರದಲ್ಲಿ ಮಂಗಳ ಗ್ರಹ ಗೋಚರಿಸಿತ್ತು ಎಂದರು.

ಸೌರವ್ಯೂಹದ ಬೇರಾವ ಗ್ರಹವೂ ಕೆಂಪು ಬಣ್ಣದಿಂದ ಕಾಣುವುದಿಲ್ಲ. ವಾತಾವರಣವಿಲ್ಲದ ಮಂಗಳ ಗ್ರಹವು ಕಬ್ಬಿಣ ಆಕ್ಸೈಡ್‌ನ ಹುಡಿಗಳ ಧೂಳು, ಸೂರ್ಯನ ಬೆಳಕನ್ನು ಹೀರಿ ಕೆಂಬಣ್ಣ ಹೊರಸೂಸುವುದರಿಂದ ಮಂಗಳ ಕೆಂಬಣ್ಣದಲ್ಲಿ ಕಾಣುತ್ತದೆ.

ಬರಿಗಣ್ಣಿಗೆ ಕಾಣುವ ಗ್ರಹಗಳಾದ ಶುಕ್ರ, ಮಂಗಳ, ಗುರು, ಶನಿ ನಮಗೆ ಒಂದೇ ಗಾತ್ರದಲ್ಲಿ ಕಾಣುವುದಿಲ್ಲ, ಸೂರ್ಯನಿಂದ ಹೆಚ್ಚುಕಡಿಮೆ ಒಂದೇ ದೂರದಲ್ಲಿದ್ದರೂ, ಭೂಮಿಯಿಂದ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದೂರದಲ್ಲಿರುತ್ತವೆ ಎಂದು ಮಾಹಿತಿ ನೀಡಿದ್ದಾರೆ.

1964ರಿಂದ ಮಂಗಳನ ಅದ್ಯಯನಕ್ಕಾಗಿ ಕೃತಕ ಉಪಗ್ರಹಗಳನ್ನು ಹಾರಿಸಲಾಗಿದ್ದರೂ ಶೇ 60 ರಷ್ಟು ಸಫಲವಾಗಿಲ್ಲ. 2018ರ ಹೊತ್ತಿಗೆ 8 ಕೃತಕ ಉಪಗ್ರಹಗಳು ಮಂಗಳನ ಅದ್ಯಯನ ನಡೆಸುತ್ತಿವೆ. ಇಲ್ಲಿಯವರೆಗೆ 56 ಕೃತಕ ಉಪಗ್ರಹಗಳು ಅದ್ಯಯನಕ್ಕೆ ತೆರಳಿದ್ದರೂ ಕೇವಲ 26 ಮಾತ್ರ ಸಫಲವಾಗಿವೆ.

2 ವರ್ಷ 2 ತಿಂಗಳಿಗೊಮ್ಮೆ ಭೂಮಿಗೆ ಸಮೀಪವಾಗುವ ಸಂದರ್ಭ ಮಂಗಳನ ಅದ್ಯಯನಕ್ಕಾಗಿ ಹೆಚ್ಚಾಗಿ ಕಾಲ ನಿಗದಿ ಮಾಡಲಾಗುತ್ತದೆ. ರಷ್ಯಾ, ಅಮೆರಿಕ ಮಾತ್ರ ಮಂಗಳನ ಅಂಗಳದಲ್ಲಿ ಕೃತಕ ಉಪಗ್ರಹಗಳನ್ನು ಇಳಿಸಿ ಅದ್ಯಯನ ಮಾಡಿದ ರಾಷ್ಟ್ರಗಳಾಗಿವೆ. ಯುರೋಪಿಯನ್ ಸ್ಪೇಸ್ ಎಜೆನ್ಸಿ ಮತ್ತು ಭಾರತವು ಕೃತಕ ಉಪಗ್ರಹಗಳನ್ನು ಕಳುಹಿಸಿ ಮಂಗಳನ ಸುತ್ತ ಅದ್ಯಯನ ನಡೆಸಿ ಯಶಸ್ಸು ಕಂಡಿವೆ ಎಂದು ಡಾ.ಎ.ಪಿ ಭಟ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು