ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರವಂತೆ ಬೀಚ್ ಬಳಿ ಅರಬ್ಬಿ ಸಮುದ್ರಕ್ಕೆ ಉರುಳಿದ ಕಾರು: ಚಾಲಕ ಸಾವು, ಇಬ್ಬರಿಗೆ ಗಾಯ

Last Updated 3 ಜುಲೈ 2022, 4:22 IST
ಅಕ್ಷರ ಗಾತ್ರ

ಕುಂದಾಪುರ: ತಡರಾತ್ರಿ ಕುಂದಾಪುರ ಕಡೆಯಿಂದ‌ ಬೈಂದೂರಿನತ್ತ ಚಲಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಚಾಲಕನ‌ ನಿಯಂತ್ರಣ ತಪ್ಪಿ ರಸ್ತೆಯಿಂದ ಪಲ್ಟಿಯಾಗಿ ಸಮುದ್ರ ಪಾಲಾದ ಪರಿಣಾಮ ಕಾರಿನೊಳಗಿದ್ದ ನಾಲ್ವರ ಪೈಕಿ ಚಾಲಕ ಸಾವನ್ನಪ್ಪಿದ್ದು, ಇನ್ನೋರ್ವ ನಾಪತ್ತೆಯಾಗಿದ್ದು, ಇಬ್ಬರು ಗಾಯಾಳುಗಳಾಗಿ ಆಸ್ಪತ್ರೆಗೆ ಸೇರಿದ ಧಾರುಣ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಸಿದ್ದ ಮರವಂತೆ ಬೀಚ್ ನ ಬಳಿ ನಡೆದಿದೆ.

ದುರಂತದಲ್ಲಿ ಮೃತಪಟ್ಟವರನ್ನುಕುಂದಾಪುರ ತಾಲ್ಲೂಕಿನ ಬೀಜಾಡಿಯ ಗೋಳಿಬೆಟ್ಟು ನಿವಾಸಿ ವಿಲಾಸ್ ಮಾರ್ಬಲ್ ನ ಮಾಲಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ(28), ನಾಪತ್ತೆಯಾದವರನ್ನು ಕಾಡಿನಕೊಂಡ ನಿವಾಸಿ ನಾರಾಯಣ ಆಚಾರ್ ಅವರು ಪುತ್ರ ರೋಶನ್ ಆಚಾರ್ (23), ಗಾಯಾಳುಗಳನ್ನು ಕಾಡಿನಕೊಂಡ ನಿವಾಸಿ ಕಾರ್ತಿಕ್ ಹಾಗೂ ಬಸ್ರೂರ್ ಮೂರು ಕೈ ಬಳಿಯ ಸಂದೇಶ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರ:ಶನಿವಾರ ತಡರಾತ್ರಿ ಸುಮಾರು 12.30 ರಿಂದ 1 ಗಂಟೆಯ ವೇಳೆಯಲ್ಲಿ ವಿರಾಜ್ ಆಚಾರ್ ತನ್ನ ಸಹೋದರ ಸಂಬಂಧಿಗಳು ಹಾಗೂ ಸ್ನೇಹಿತನೊಂದಿಗೆ ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಕುಂದಾಪುರ ಕಡೆಯಿಂದ ಬೈಂದೂರು‌ ಕಡೆಗೆ ಪ್ರಯಾಣಿಸುತ್ತಿದ್ದರು. ವಿರಾಜ್ ಸ್ವತಃ ಕಾರನ್ನು ಚಾಲನೆ‌ ಮಾಡುತ್ತಿದ್ದರು ಎನ್ನಲಾಗಿದೆ.

ಮರವಂತೆ ಬೀಚ್ ಬದಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗುತ್ತಿದ್ದ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 40 ಅಡಿ ಕೆಳಕ್ಕೆ ಉರುಳಿದೆ. ಸಮುದ್ರದ ತಡೆಗೋಡೆಗಳಿಗೆ ಹಾಕಲಾಗಿದ್ದ ಬಂಡೆಕಲ್ಲುಗಳ‌ ಮೇಲೆ ಉರುಳಿಬಿದ್ದ ಕಾರು ಬಳಿಕ ಸಮುದ್ರದ ತಳಭಾಗದ ಬಂಡೆ ಕಲ್ಲುಗಳ ನಡುವೆ ಬಂದು ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಸಂದೀಪ್‌ ಹಾಗೂ ಕಾರ್ತಿಕ್ ಕಾರಿನಿಂದ ಹೊರಕ್ಕೆ ಬಿದ್ದಿದ್ದಾರೆ.

ಅಪಘಾತದಿಂದ ಚೇತರಿಸಿಕೊಂಡ ಹೆದ್ದಾರಿಗೆ ಬಂದ ಸಂದೀಪ್ ಸಹಾಯಕ್ಕಾಗಿ ವಾಹನಗಳನ್ನು ನಿಲ್ಲಿಸುವ ಪ್ರಯತ್ನ ಮಾಡಿದರೂ ಫಲಕಾರಿಯಾಗಿರಲಿಲ್ಲ‌‌. ಬಳಿಕ ನಡೆದುಕೊಂಡು 2 ಕಿ.ಮೀ ದೂರದ ತ್ರಾಸಿ‌ ಜಂಕ್ಷನ್ ತಲುಪಿದ್ದಾರೆ. ಅಲ್ಲಿ ಕೋಟೇಶ್ವರ-ಬೀಜಾಡಿ ಪರಿಸರದ‌ ಕೆಲ ಯುವಕರಿಗೆ ಘಟನೆಯ ಬಗ್ಗೆ ಮಾಹಿತಿ‌ ನೀಡಿ ಅವರನ್ನು‌ ಕರೆದುಕೊಂಡು ದುರಂತ‌ ನಡೆದ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಬಂಡೆಕಲ್ಲುಗಳ‌‌ ನಡುವೆ ಗಾಯಾಳುವಾಗಿ ಪತ್ತೆಯಾದ ಕಾರ್ತಿಕ್ ಅವರನ್ನು ರಕ್ಷಣೆ ಮಾಡಿ ಚಿಕಿತ್ಸೆಗೆಗಾಗಿ ಕುಂದಾಪುರದ ಆಸ್ಪತ್ರೆಗೆ ಸೇರಿಸಲಾಗಿದೆ.

ಫಲಕಾರಿಯಾಗದ ರಕ್ಷಣಾ ಕಾರ್ಯ: ಸ್ಥಳೀಯರ ಹಾಗೂ ರಕ್ಷಣಾ ಕಾರ್ಯಕರ್ತರು ಸಹಕಾರದಿಂದ ತಡ ರಾತ್ರಿಯಲ್ಲಿ ಕಾರನ್ನು ಸಮುದ್ರದ ನೀರಿನಿಂದ ಮೇಲೆ ಎತ್ತುವ ಪ್ರಯತ್ನ ಮಾಡಲಾಯಿತಾದರೂ, ಭಾರಿ ಮಳೆ ಹಾಗೂ ಗಾಳಿಯಿಂದ ಪ್ರಯತ್ನ ಫಲಕಾರಿಯಾಗದ ಕಾರಣ ರಕ್ಷಣಾ ಕಾರ್ಯ ಮೊಟಕುಗೊಳಿಸಲಾಗಿತ್ತು.

ಸ್ಥಳೀಯ ಮುಳುಗು ತಜ್ಞ ದಿನೇಶ್ ಗಂಗೊಳ್ಳಿ ಮತ್ತವರ ತಂಡ, ಆಪತ್ಭಾಂದವ ಇಬ್ರಾಹಿಂ ಗಂಗೊಳ್ಳಿ‌, ನದೀಮ್ ಮತ್ತವರ ತಂಡ ಹಾಗೂ ಸ್ಥಳೀಯರ ನೆರವಿನಿಂದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಭಾನುವಾರ ಮುಂಜಾನೆಯಿಂದ ಮತ್ತೆ ಕಾರ್ಯಾಚರಣೆ ಆರಂಭಿಸಿ ಅಲೆಗಳ ಹೊಡೆತಕ್ಕೆ ನಜ್ಜು ಗುಜ್ಜಾದ ಕಾರನ್ನು ಮೇಲಕ್ಕೆತ್ತಿದ್ದಾರೆ. ಈ ವೇಳೆ ಸೀಟ್ ಬೆಲ್ಟ್ ಧರಿಸಿದ್ದ ಸ್ಥಿತಿಯಲ್ಲಿ ವಿರಾಜ್ ಅವರ ಮೃತದೇಹ ಪತ್ತೆಯಾಗಿದೆ‌. ಕಾರಿನಲ್ಲಿದ್ದ ಇನ್ನೋರ್ವ ರೋಶನ್ ಅವರ ಪತ್ತೆ ಕಾರ್ಯ ಮುಂದುವರೆದಿದೆ. ಅವರು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.

ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಕೆ, ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ‌ ಠಾಣಾಧಿಕಾರಿ ವಿನಯ್ ಕುಮಾರ್, ಕುಂದಾಪುರ ಸಂಚಾರಿ ಠಾಣೆಯ ಠಾಣಾಧಿಕಾರಿ ಸುಧಾ ಪ್ರಭು ಸ್ಥಳಕ್ಕೆ ಭೇಟಿ‌ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT