ಗುರುವಾರ , ಮಾರ್ಚ್ 4, 2021
18 °C
ಲಾಕ್‌ಡೌನ್ ಬಳಿಕ ಕಾಡಲಿದೆ ಕಾರ್ಮಿಕರ ಕೊರತೆ: ಆರ್ಥಿಕ ಹಿನ್ನೆಡೆ ಸಾಧ್ಯತೆ

ಉಡುಪಿ|ತವರಿನತ್ತ ಕಾರ್ಮಿಕರ ಚಿತ್ತ: ಆರ್ಥಿಕತೆಗೆ ಹೊಡೆತ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಲಸೆ ಕಾರ್ಮಿಕರು ಜಿಲ್ಲೆಯ ಆರ್ಥಿಕ ಅಭಿವೃದ್ಧಿಯ ಬಹುಮುಖ್ಯ ಭಾಗ. ಕರಾವಳಿಯ ಮೀನುಗಾರಿಕೆ, ಗೋಡಂಬಿ ಕಾರ್ಖಾನೆಗಳು, ಮರಳುಗಾರಿಕೆ, ಹೋಟೆಲ್‌ ಉದ್ಯಮ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾವಿರಾರು ವಲಸೆ ಕಾರ್ಮಿಕರು ದಶಕಗಳಿಂದಲೂ ದುಡಿಯುತ್ತಿದ್ದಾರೆ.

ಸದ್ಯ ಕೊರೊನಾ ಸಂಕಷ್ಟದಿಂದ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ವಲಸೆ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ. ಕೆಲಸವಿಲ್ಲದೆ, ಕೂಲಿಯೂ ಇಲ್ಲದೆ ಒಂದೂವರೆ ತಿಂಗಳು ಜಿಲ್ಲೆಯಲ್ಲಿ ತಂಗಿದ್ದ ವಲಸೆ ಕಾರ್ಮಿಕರು ಸ್ವಂತ ಊರುಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ಮುಂದೆ ಕಾರ್ಮಿಕರ ಅಲಭ್ಯತೆ ಎದುರಾಗಿ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಪೆಟ್ಟುಬೀಳುವ ಆತಂಕ ಎದುರಾಗಿದೆ.

ಲಾಕ್‌ಡೌನ್‌ ಜಾರಿ ಬಳಿಕ ಜಿಲ್ಲೆಯಲ್ಲಿ ಸಿಲುಕಿದ್ದ 3,000 ವಲಸೆ ಕಾರ್ಮಿಕರನ್ನು ಜಿಲ್ಲಾಡಳಿತ ಅವರ ಸ್ವಂತ ಜಿಲ್ಲೆಗಳಿಗೆ ಕಳುಹಿಸಿಕೊಟ್ಟಿದೆ. ಇನ್ನೂ 8,000ಕ್ಕೂ ಹೆಚ್ಚು ಕಾರ್ಮಿಕರು ಸ್ವಂತ ಊರುಗಳಿಗೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದು, ಹಂತಹಂತವಾಗಿ ಹೋಗುತ್ತಿದ್ದಾರೆ. 

ಪರಿಸ್ಥಿತಿ ಹೀಗೆ ಮುಂದುವರಿದರೆ, ಕರಾವಳಿಯ ಮತ್ಸ್ಯೋದ್ಯಮಕ್ಕೆ ಬಲವಾದ ಪೆಟ್ಟು ಬೀಳಲಿದೆ. ಬಂದರಿನಲ್ಲಿ ಬೋಟ್‌ಗಳಿಂದ ಮೀನುಗಳನ್ನು ಇಳಿಸಲು, ಲಾರಿಗಳಿಗೆ ಲೋಡ್ ಮಾಡಲು ಕಾರ್ಮಿಕರ ಸಮಸ್ಯೆ ಎದುರಾಗಲಿದೆ.

ಜತೆಗೆ, ಫಿಶ್‌ ಮಿಲ್‌ಗಳು, ಐಸ್‌ ಫ್ಯಾಕ್ಟರಿಗಳು, ಬಲೆಗಳ ದುರಸ್ತಿ, ಬೋಟ್‌ ಹಾಗೂ ದೋಣಿಗಳ ವರ್ಕ್‌ ಶಾಪ್‌ ಹೀಗೆ ಮೀನುಗಾರಿಕೆಯ ಮೇಲೆ ಅವಲಂಬಿತ ಉದ್ಯಮವೂ ಕಾರ್ಮಿಕರ ಸಮಸ್ಯೆಯಿಂದ ಸೊರಗಲಿದೆ ಎನ್ನಲಾಗುತ್ತಿದೆ.

ಮೂಲಸೌಕರ್ಯಕ್ಕೂ ಹೊಡೆತ

ವಲಸೆ ಕಾರ್ಮಿಕರ ಅಲಭ್ಯತೆ ಮುಖ್ಯವಾಗಿ ಜಿಲ್ಲೆಯ ಮೂಲಸೌಕರ್ಯ ನಿರ್ಮಾಣ ಕ್ಷೇತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ ಹಲವು ವರ್ಷಗಳ ಹಿಂದೆಯೇ ಜಿಲ್ಲೆಗೆ ಬಂದು ಸಣ್ಣ ಶೆಡ್‌ಗಳಲ್ಲಿ, ಟೆಂಟ್‌ಗಳಲ್ಲಿ ಬದುಕು ಕಟ್ಟಿಕೊಂಡಿದ್ದ ಕಾರ್ಮಿಕರು ತವರಿನತ್ತ ಮುಖ ಮಾಡಿದ್ದಾರೆ. ‌

ಮೇ 17ರ ನಂತರ ಲಾಕ್‌ಡೌನ್‌ ಸಡಿಲಿಕೆಯಾಗಿ ಜಿಲ್ಲೆಯ ಆರ್ಥಿಕತೆ ಪೂರ್ಣವಾಗಿ ತೆರೆದುಕೊಂಡರೂ ಅಗತ್ಯ ಪ್ರಮಾಣದಲ್ಲಿ ಕಾರ್ಮಿಕರು ಸಿಗುವುದು ಅನುಮಾನ ಎನ್ನಲಾಗುತ್ತಿದೆ. 

‘ಕಾರ್ಮಿಕರು ಸಂಪತ್ತಿನ ಸೃಷ್ಟಿಕರ್ತರು’

ಕಾರ್ಮಿಕರು ಹಾಗೂ ರೈತರು ಇಲ್ಲದಿದ್ದರೆ ಸಂಪತ್ತಿನ ಸೃಷ್ಟಿ ಸಾಧ್ಯವಿಲ್ಲ. ಲಾಕ್‌ಡೌನ್ ಸಡಿಲಗೊಂಡ ಬಳಿಕ ವಲಸೆ ಕಾರ್ಮಿಕರ ಮಹತ್ವ ಅರಿವಾಗಲಿದೆ. ಜಿಲ್ಲೆಯ ಆರ್ಥಿಕತೆಗೆ ಬೆನ್ನೆಲುಬಾಗಿದ್ದ ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ಸ್ವಂತ ಜಿಲ್ಲೆಗಳಿಗೆ ಹೋಗುತ್ತಿರುವುದು ಜಿಲ್ಲೆಯ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯ ವಿಷಯವಲ್ಲ. ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ. ವಲಸೆ ಕಾರ್ಮಿಕರನ್ನು ತಡೆದು, ಇಲ್ಲಿಯೇ ಉಳಿಸಿಕೊಳ್ಳುವ ಕೆಲಸ ಆಗಬೇಕು. ಕೊರೊನಾ ಸಂಕಷ್ಟ ಮುಗಿಯುವವರೆಗೂ, ಕನಿಷ್ಠ ಕೂಲಿ, ಸೌಲಭ್ಯಗಳನ್ನು ಕೊಟ್ಟು ಅವರನ್ನು ಉಳಿಸಿಕೊಳ್ಳಬಹುದು. ಕೇರಳ ಸರ್ಕಾರದ ಮಾದರಿಯಲ್ಲಿ ವಲಸೆ ಕಾರ್ಮಿಕರನ್ನು ಅತಿಥಿ ಕಾರ್ಮಿಕರು ಎಂದು ಪರಿಗಣಿಸಬೇಕು ಎನ್ನುತ್ತಾರೆ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು