ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥದಲ್ಲಿ ಮನೆಗೊಬ್ಬ ಸೈನಿಕ ಹುಟ್ಟಿಕೊಳಲಿ

ಕೋಟಿ ಚೆನ್ನಯ್ಯ ಸೇನಾ ಪೂರ್ವ ತರಬೇತಿ ಶಾಲೆ ಉದ್ಘಾಟನೆಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 5 ಸೆಪ್ಟೆಂಬರ್ 2022, 15:29 IST
ಅಕ್ಷರ ಗಾತ್ರ

ಉಡುಪಿ: ಅಗ್ನಿಪಥ ಯೋಜನೆಗೆ ಪೂರಕವಾಗಿ ದೇಶದ ಮೊದಲ ಸೇನಾ ಪೂರ್ವ ತರಬೇತಿ ಶಾಲೆ ಉಡುಪಿ ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿರುವುದು ಸಂತಸ ತಂದಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರ ನಗರದ ಕಿದಿಯೂರು ಹೋಟೆಲ್ ಸಭಾಂಗಣದಲ್ಲಿ ಕೋಟಿ ಚೆನ್ನಯ್ಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಂಜಾ ನಾಯ್ಕ ಹಾಗೂ ಉಡುಪಿಯಲ್ಲಿ ಕೋಟಿ ಚೆನ್ನಯ್ಯರ ಹೆಸರಿನಲ್ಲಿ ಸೇನಾ ಪೂರ್ವ ತರಬೇತಿ ಶಾಲೆಗಳು ಆರಂಭವಾಗುತ್ತಿವೆ. ಮುಂದೆ ಎಲ್ಲ ಜಿಲ್ಲೆಗಳಲ್ಲೂ ಆರಂಭವಾಗುವ ತರಬೇತಿ ಶಾಲೆಗಳಿಗೆ ಅಲ್ಲಿನ ಹೋರಾಟಗಾರರ ಹೆಸರು ಇಡಲಾಗುವುದು ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇನಾ ತರಬೇತಿ ಶಾಲೆಗೆ ಪ್ರವೇಶಾತಿ ಪಡೆಯಲು 700 ಮಂದಿ ಅರ್ಜಿ ಹಾಕಿದ್ದು, ಉಡುಪಿ ಜಿಲ್ಲೆಯಲ್ಲಿ 60, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 70 ರಿಂದ 80 ಮಂದಿ ಆಯ್ಕೆಯಾಗಿದ್ದಾರೆ. ಇನ್ನೂ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಪ್ರಥಮ ಹಂತದಲ್ಲಿ ಮೂರು ಶಾಲೆಗಳಲ್ಲಿ 300 ಮಂದಿಗೆ ಉಚಿತ ಊಟ, ವಸತಿ ಸಹಿತ ತರಬೇತಿ ನೀಡಲಾಗುವುದು ಎಂದು ಸಚಿವ ಕೋಟ ತಿಳಿಸಿದರು.

ಕೋಟಿ ಚೆನ್ನಯ್ಯರು ಸ್ಫೂರ್ತಿ, ಶಕ್ತಿ, ಆದರ್ಶ ಹಾಗೂ ಸ್ವಾಭಿಮಾನಕ್ಕೆ ಹೆಸರಾಗಿದ್ದು ಅವರ ಹೆಸರಿನಲ್ಲಿ ತರಬೇತಿ ಶಾಲೆ ಆರಂಭಿಸಲಾಗಿದೆ. ಯುವಶಕ್ತಿ ಅಗ್ನಿವೀರರಾಗಲು ಉತ್ಸಾಹ ತೋರಬೇಕು. ಮನೆಗೊಬ್ಬ ಸೈನಿಕ ಹುಟ್ಟಿಕೊಳ್ಳಬೇಕು ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸೇನಾ ಪೂರ್ವ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದ ಯುವಕರು ನೇರವಾಗಿ ಅಗ್ನಿವೀರರಾಗಿ ನೇಮಕವಾಗುವುದಿಲ್ಲ. ನೇಮಕಾತಿಯಲ್ಲಿ ಮೀಸಲಾತಿಯೂ ಸಿಗವುದಿಲ್ಲ. ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಸ್ಪರ್ಧಿಸಿಯೇ ಅಗ್ನಿವೀರರ ಹುದ್ದೆಗೆ ಆಯ್ಕೆಯಾಗಬೇಕು ಎಂದು ಸಲಹೆ ನೀಡಿದರು.

ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರಿಗೆ ಮುಂದೆ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಹಾಗಾಗಿ, ನಾಳೆಯ ಬಗ್ಗೆ ಯೋಚಿಸದೆ ಭವಿಷ್ಯದ ಬಗ್ಗೆ ಯೋಚಿಸಬೇಕು ಎಂದು ಕಿವಿಮಾತು ಹೇಳಿದ ಅವರು ಬಾರ್ಕೂರಿನಲ್ಲಿ ತರಬೇತಿ ಶಾಲೆ ಆರಂಭಿಸಿರುವುದು ಸ್ವಾಗತಾರ್ಹ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಮಾತನಾಡಿ ‘ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ ಸ್ವಾಭಿಮಾನದ ಪ್ರತೀಕವಾಗಿರುವ ವೀರ ಪುರುಷರಾದ ಕೋಟಿ ಚೆನ್ನಯ್ಯ ಹೆಸರಿಟ್ಟಿರುವುದು ಸ್ವಾಗತಾರ್ಹ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮುಂಡರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಎಸ್‌.ಕಲ್ಮಾಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ಪ್ರಸನ್ನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಚಿನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT