ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಪ್ಪಟ್ಟು ಟೋಲ್ ಆದೇಶ ಕೈಬಿಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್

Published : 29 ಡಿಸೆಂಬರ್ 2022, 13:35 IST
ಫಾಲೋ ಮಾಡಿ
Comments

ಉಡುಪಿ: ಸುರತ್ಕಲ್ ಟೋಲ್‌ ದರವನ್ನೂ ಸೇರಿಸಿ ಹೆಜಮಾಡಿಯಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡುವ ಆದೇಶಕ್ಕೆ ಶಾಶ್ವತ ತಡೆ ನೀಡದಿದ್ದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಟೋಲ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಕೆ ನೀಡಿದರು.

ಹೆಜಮಾಡಿಯಲ್ಲಿ‌ ಹೆಚ್ಚುವರಿ ಟೋಲ್ ಸಂಗ್ರಹ ಆದೇಶ ಹಿಂಪಡೆಯುವಂತೆ ಟೋಲ್ ವಿರೋಧಿ ಹೋರಾಟ ಸಮಿತಿ ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಉಡುಪಿಯ ಬನ್ನಂಜೆಯಲ್ಲಿರುವ ತಾಲ್ಲೂಕು ಕಚೇರಿ ಎದುರು ಗುರುವಾರ ನಡೆದ ಸಾಮೂಹಿಕ ಧರಣಿಯಲ್ಲಿ ಮಾತನಾಡಿದರು.

ಸುರತ್ಕಲ್‌ನ ಮುಕ್ಕಾದಿಂದ ನಂತೂರುವರೆಗಿನ ಹೆದ್ದಾರಿಯನ್ನು ಟೋಲ್ ಮುಕ್ತ ರಸ್ತೆ ಎಂದು ಘೋಷಿಸಬೇಕು. ವಾಮ ಮಾರ್ಗದಲ್ಲಿ ಟೋಲ್ ಸಂಗ್ರಹಕ್ಕೆ ಮುಂದಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು. ಸುರತ್ಕಲ್‌ನಲ್ಲಿ ನಡೆದ ಹೋರಾಟಕ್ಕಿಂತ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.

ಸುರತ್ಕಲ್ ಟೋಲ್‌ ಅನ್ನು ಹೆಜಮಾಡಿ ಟೋಲ್ ಜತೆ ವಿಲೀನಗೊಳಿಸಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರ, ಕರಾವಳಿ ಸಂಸದರು, ಶಾಸಕರು ನೇರ ಹೊಣೆಗಾರರು ಎಂದು ವಾಗ್ದಾಳಿ ನಡೆಸಿದರು.

ಸುರತ್ಕಲ್‌ನ ಮುಕ್ಕಾದಿಂದ ಬಿ.ಸಿ. ರೋಡ್ ವರೆಗಿನ ರಸ್ತೆಗೆ ಬ್ರಹ್ಮಾರಕೂಟ್ಲುವಿನಲ್ಲಿರುವ ಟೋಲ್ ಕೇಂದ್ರದಲ್ಲಿ ಸುಂಕ ವಸೂಲಿ ಮಾಡಲಾಗುತ್ತಿದೆ. ಈ ಟೋಲ್‌ನಲ್ಲಿ ಪ್ರತಿದಿನ ₹ 5 ಲಕ್ಷ ಸಂಗ್ರಹಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ನೀಡಲಾಗುತ್ತಿದೆ. ವರ್ಷಕ್ಕೆ ಇಲ್ಲಿ ₹ 18 ಕೋಟಿ ಸಂಗ್ರಹವಾಗುತ್ತಿದೆ. ಟೋಲ್ ಹಣದಲ್ಲಿ ಹೆದ್ದಾರಿ ಪ್ರಾಧಿಕಾರ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಬಹುದಾಗಿತ್ತು. ಆದರೆ, ಜನ ಪ್ರತಿನಿಧಿಗಳು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು.

ನವ ಮಂಗಳೂರು ಬಂದರಿಗೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ನವ ಮಂಗಳೂರು ಬಂದರು‌ ಕಂಪೆನಿಶೇ 25ರಷ್ಟು ಹಣ ನೀಡಿದೆ. ಎಂಆರ್‌ಪಿಎಲ್ ನಂತಹ ಕೆಲವು ದೊಡ್ಡ ಕೈಗಾರಿಕೆಗಳಿಂದ ಹಣ ಸಂಗ್ರಹಿಸಿ ರಸ್ತೆಯನ್ನು ಟೋಲ್ ಮುಕ್ತವಾಗಿಸಬಹುದಿತ್ತು. ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಉತ್ಸುಕತೆ ಇಲ್ಲ ಎಂದು ಟೀಕಿಸಿದರು.

ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಲ್ಲಿ ಏನು ಬೇಕಾದರೂ ನಡೆಯುತ್ತದೆ. ಕ್ರಿಮಿನಲ್‌ಗಳೂ ಸುಂಕ ವಸೂಲಿಗೆ ನಿಂತರೆ ಅಚ್ಚರಿ ಇಲ್ಲ ಎಂದು ದೂರಿದರು.

ಪ್ರತಿಭಟನಾ ಧರಣಿಯಲ್ಲಿ ಮುಖಂಡರಾದ ಶೇಖರ್‌ ಹೆಜಮಾಡಿ, ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ಫಾದರ್ ವಿಲಿಯಂ ಮಾರ್ಟಿಸ್, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಶಾಂತ್ ಜತ್ತನ್ನ, ಪ್ರಖ್ಯಾತ್ ಶೆಟ್ಟಿ, ಸಂತೋಷ್ ಕುಲಾಲ್ ಪಕ್ಕಾಲು, ಕೆ.ಶಂಕರ್, ಫಣಿರಾಜ್, ಯಾಸೀನ್ ಮಲ್ಪೆ ಇದ್ದರು.

ಜನಾಕ್ರೋಶಕ್ಕೆ ಮಣಿದು ಸುರತ್ಕಲ್ ಟೋಲ್ ಬಂದ್‌
ಕರಾವಳಿ ಜಿಲ್ಲೆಗಳ ಜನಪ್ರತಿನಿಧಿಗಳ ಹೋರಾಟಕ್ಕೆ ಮಣಿದು ಸುರತ್ಕಲ್ ಟೋಲ್ ಮುಚ್ಚಿಲ್ಲ. ಬದಲಾಗಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರ ಹೋರಾಟದ ಫಲವಾಗಿ ಅನಧಿಕೃತ ಸುರತ್ಕಲ್ ಟೋಲ್ ಮುಚ್ಚಲಾಗಿದೆ. ಸುರತ್ಕಲ್ ಟೋಲ್ ಮುಚ್ಚುವ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಅ.28ರಂದು ಬೆಂಗಳೂರಿನಲ್ಲಿ ನಡೆದ ಅಂತಿಮ ಸಭೆಯಲ್ಲಿ ಸುರತ್ಕಲ್ ಟೋಲ್ ಕೇಂದ್ರವನ್ನು ಮುಚ್ಚಲು ಒಪ್ಪಿಗೆ ನೀಡಿತು ಎಂದು ಮುನೀರ್ ಕಾಟಿಪಳ್ಳ ಹೇಳಿದರು.

‘ಅಧಿಕೃತ ಆದೇಶ ಹೊರಬೀಳಲಿ’
ಹೆಜಮಾಡಿಯಲ್ಲಿ ದುಪ್ಪಟ್ಟು ಸುಂಕ ವಸೂಲಿ ಮಾಡುವುದಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ ಅಷ್ಟೆ. ಉಡುಪಿ ಜಿಲ್ಲೆಯ ನೋಂದಣಿ ಸಂಖ್ಯೆಯ ವಾಹನಗಳಿಗೆ ಹೆಜಮಾಡಿ ಟೋಲ್‌ ಕೇಂದ್ರದಲ್ಲಿ ಸುಂಕ ಪಡೆಯುವುದಿಲ್ಲ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ನೀಡಿರುವ ಹೇಳಿಕೆ ಸರ್ಕಾರದ ಆದೇಶದಲ್ಲಿ ಕಾರ್ಯರೂಪಕ್ಕೆ ಬರಬೇಕು. ಸದ್ಯ ಟೋಲ್ ವಸೂಲಿ ಮಾಡದೆ ಚುನಾವಣೆ ಮುಗಿದ ಬಳಿಕ ಸುಂಕ ವಸೂಲು ಮಾಡುವ ಹುನ್ನಾರ ಬೇಡ. ಸಾಂಕೇತಿಕವಾಗಿ ಆರಂಭವಾಗಿರುವ ಧರಣಿ ಎಲ್ಲೆಡೆ ವ್ಯಾಪಕವಾಗಲಿದೆ. ಸುರತ್ಕಲ್ ಮಾದರಿಯಲ್ಲಿ ಉಡುಪಿ ಜಿಲ್ಲೆಯಲ್ಲೂ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT