ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ | ಅನ್ನದಾತನಿಗೆ ಬರೆ ಎಳೆದ ನೆರೆ: ಕಂಗಾಲಾದ ರೈತ

ಜಿಲ್ಲೆಯ ವಿವಿಧೆಡೆ ನೆರೆ ನೀರಿನಲ್ಲಿ ಮುಳುಗಿ ಭತ್ತದ ಕೃಷಿ ಹಾನಿ
Published : 19 ಆಗಸ್ಟ್ 2024, 6:33 IST
Last Updated : 19 ಆಗಸ್ಟ್ 2024, 6:33 IST
ಫಾಲೋ ಮಾಡಿ
Comments

ಉಡುಪಿ: ಭತ್ತದ ಕೃಷಿ ಮಾಡಿ, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರಿಗೆ ಈ ಬಾರಿ ಅತಿಯಾದ ಮಳೆ ಮತ್ತು ನೆರೆ ಬರೆ ಎಳೆದಿದೆ.

ಎಂಒ-4 ತಳಿಯ ಭತ್ತದ ಬಿತ್ತನೆ ಬೀಜದ ಅಲಭ್ಯತೆ, ಬಿತ್ತನೆ ಬೀಜದ ದರ ಏರಿಕೆಯ ಬಿಸಿಯಿಂದ ಈ ಬಾರಿ ಮಳೆಗಾಲದ ಆರಂಭದಲ್ಲೇ ಹೈರಾಣಾಗಿದ್ದ, ಕೃಷಿಕನಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ.

ಭತ್ತದ ಬೆಳೆಯು ಜಿಲ್ಲೆಯಲ್ಲಿ ಪ್ರಧಾನ ಬೆಳೆಯಾಗಿದ್ದು, ಕಾರ್ಮಿಕರ ಕೊರತೆ, ಯಂತ್ರಗಳ ದುಬಾರಿ ಬಾಡಿಗೆಯಿಂದ ಬೇಸತ್ತು ಕೃಷಿಯಿಂದ ವಿಮುಖರಾಗುತ್ತಿರುವ ರೈತರ ಸಂಖ್ಯೆಯೇ ಹೆಚ್ಚಿದೆ. ಈ ನಡುವೆ ಕೃಷಿ ಮಾಡಿಯೂ ಪ್ರಾಕೃತಿಕ ವಿಕೋಪದಿಂದಾಗಿ ಫಸಲು ಕೈಗೆ ಬಾರದ ಸ್ಥಿತಿಯಲ್ಲಿ ಹಲವು ರೈತರಿದ್ದಾರೆ.

ಜುಲೈ ತಿಂಗಳಿನಲ್ಲಿ ಮಳೆ ನಿರಂತರವಾಗಿ ಸುರಿದ ಪರಿಣಾಮವಾಗಿ ಪದೇ ಪದೇ ನೆರೆ ಬಂದು ಭತ್ತದ ಸಸಿಗಳು ಹಲವು ದಿನಗಳ ಕಾಲ ನೀರಿನಲ್ಲಿ ಮುಳುಗಡೆಯಾದ ಪರಿಣಾಮ ಕೊಳೆತು ಹೋಗಿವೆ.

ಇನ್ನು ಕೆಲವೆಡೆ ನೆರೆ ನೀರಿನ ಜೊತೆ ತೋಡಿನ ಹೂಳು ಗದ್ದೆಗಳಿಗೆ ನುಗ್ಗಿ, ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಕುಂದಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚು ಭತ್ತದ ಕೃಷಿ ನಾಶವಾಗಿದೆ. ನಂತರದ ಸ್ಥಾನದಲ್ಲಿ ಬೈಂದೂರು ತಾಲ್ಲೂಕಿದೆ. ಈ ಪ್ರದೇಶಗಳಲ್ಲಿ ಗಾಳಿ ಮಳೆಗೆ ತೋಟಗಾರಿಕೆ ಬೆಳೆಗಳಿಗೂ ಹಾನಿ ಸಂಭವಿಸಿದೆ.

ನಾಟಿ ಮಾಡಿ ಒಂದೂವರೆ ತಿಂಗಳೊಳಗೆ ಎರಡು ಬಾರಿ ನೆರೆ ಬಂದಿದ್ದು, ಒಮ್ಮೆ ಬಂದ ನೆರೆ ಏಳೆಂಟು ದಿನಗಳ ಕಾಲ ಇಳಿಕೆಯಾಗದ ಕಾರಣ ಬೆಳೆ ನಾಶವಾಗಿದೆ. ಕೆಲವು ರೈತರು ಭತ್ತದ ಬೆಳೆ ನಾಶವಾದ ಗದ್ದೆಗಳನ್ನು ಮತ್ತೆ ಹದಗೊಳಿಸಿ, ಸಸಿ ನಾಟಿ ಮಾಡಿದ್ದಾರೆ. ಅದರಿಂದಲೂ ಉತ್ತಮ ಫಸಲು ಬರುವ ನಿರೀಕ್ಷೆ ಇಲ್ಲ ಎನ್ನುತ್ತಾರೆ ಬ್ರಹ್ಮಾವರ ವ್ಯಾಪ್ತಿಯ ನೀಲಾವರದ ಮಧ್ಯಸ್ಥರಬೆಟ್ಟು ಪ್ರದೇಶದ ರೈತರು.

ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಭತ್ತದ ಕೃಷಿಯಲ್ಲಿ ಉಳುಮೆ, ನಾಟಿಗೆ ಯಂತ್ರಗಳನ್ನೇ ಆಶ್ರಯಿಸಬೇಕಾಗಿದೆ. ಭದ್ರಾವತಿ ಮೊದಲಾದೆಡೆಗಳಿಂದ ಬರುವ ಯಂತ್ರಗಳ ಬಾಡಿಗೆಯೂ ದುಬಾರಿ. ಇಷ್ಟೆಲ್ಲಾ ಖರ್ಚು ಮಾಡಿದರೂ ನೆರೆಯಿಂದಾಗಿ ಬೆಳೆ ಹಾನಿಯಾಗಿದೆ. ಅಳಿದುಳಿದ ಬೆಳೆಯಲ್ಲೂ ಉತ್ತಮ ಫಸಲು ಲಭಿಸುವ ನಿರೀಕ್ಷೆ ಇಲ್ಲ ಎನ್ನುತ್ತಾರೆ ನೀಲಾವರದ ರೈತ ರಮೇಶ್‌.

ಬ್ರಹ್ಮಾವರ ತಾಲ್ಲೂಕಿನ ಬಾರ್ಕೂರು ಬಂಡೀಮಠ, ನೀಲಾವರ ಗ್ರಾಮದ ಬಾವಲಿಕುದ್ರು, ಪಡುನೀಲಾವರ, ಆರೂರು ಗ್ರಾಮದಲ್ಲಿಯೂ ನೆರೆ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ನಾಶವಾಗಿದೆ.

ನದಿ ನೀರಿನ ಸೆಳೆತಕ್ಕೆ ನಾಟಿ ಮಾಡಿದ ಗದ್ದೆಗಳು ನದಿ ಪಾಲಾಗುವ ಸ್ಥಿತಿ ಆರೂರು ಗ್ರಾಮದಲ್ಲಿದೆ. ನೆರೆಯಿಂದ ಮರಳು, ಮಣ್ಣು ನಾಟಿ ಮಾಡಿದ ಗದ್ದೆಗಳಲ್ಲಿ ನಿಂತು ಬೆಳೆ ಕೊಳೆತು ಹೋಗಿದೆ. ಅಲ್ಲದೇ ನದಿ ತೀರದ ಗದ್ದೆಗಳು ನದಿ ಪಾಲಾಗುವ ಸಂಭವವೂ ಇದೆ ಎಂದು ರೈತರು ಹೇಳಿದ್ದಾರೆ.

ಹಿರಿಯಡಕ ವ್ಯಾಪ್ತಿಯಲ್ಲಿ ನೆರೆಯಿಂದಾಗಿ ನದಿ ಪಾತ್ರದ ಕೃಷಿ ಭೂಮಿಗಳು ಜಲಾವೃತಗೊಂಡ ಪರಿಣಾಮ ಪೆರ್ಡೂರು, ಭೈರಂಪಳ್ಳಿ, ಹರಿಖಂಡಿಗೆ, ಹಿರೇಬೆಟ್ಟು ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಭತ್ತದ ಕೃಷಿಗೆ ತೊಂದರೆ ಉಂಟಾಗಿದೆ. ಪುನರ್ವಸು ಹಾಗೂ ಪುಷ್ಯ ನಕ್ಷತ್ರದ ಮಳೆ ನಿರಂತರವಾಗಿ ಸುರಿದ ಪರಿಣಾಮ ಗದ್ದೆಯಲ್ಲಿ ನೀರು ನಿಂತಿದ್ದರಿಂದ ಭತ್ತ, ತರಕಾರಿ ಬೆಳೆಗಳು ಸ್ವಲ್ಪ ಮಟ್ಟಿಗೆ ನಾಶವಾಗಿವೆ. ಕೆಲವು ಕಡೆಗಳಲ್ಲಿ ಗಣೇಶ ಚತುರ್ಥಿಗೆ ಕಟಾವು ಆಗುವಂತೆ ಕೃಷಿಕರು ಸೌತೆ, ಹೀರೆಕಾಯಿ, ಬೆಂಡೆ, ಪಡವಲ ಕಾಯಿ ಸೇರಿದಂತೆ ವಿವಿಧ ಬಗೆಯ ತರಕಾರಿಗಳನ್ನು ಬೆಳೆದಿದ್ದು ಇಳುವರಿ ಕಡಿಮೆಯಾಗುವ ಸ್ಥಿತಿ ತಲುಪಿದೆ.

ಕಾರ್ಕಳ ತಾಲ್ಲೂಕಿನಲ್ಲಿ ವಿವಿಧೆಡೆ ಭತ್ತದ ಬೆಳೆ ನೆರೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಆದರೂ ತಾಲ್ಲೂಕಿನ ರೈತಾಪಿ ವರ್ಗ ತಮ್ಮ ಕಾಯಕವನ್ನು ಮುಂದುವರಿಸಿದ್ದು ಎರಡನೇ ಬಾರಿ, ಮೂರನೇ ಬಾರಿ ಬಿತ್ತನೆ, ನಾಟಿ ಕಾರ್ಯ ಮಾಡಿದ್ದಾರೆ. ಕೆಲವರಿಗೆ ನಾಟಿ ಮಾಡಲು ಪೈರು ದೊರೆಯದೆ ಕೈ ಚೆಲ್ಲಿ ಕೂತಿದ್ದಾರೆ.

ಹೆಬ್ರಿ ತಾಲ್ಲೂಕಿನ ವಿವಿಧೆಡೆ ಈ ಸಲದ ಭಾರಿ ಮಳೆಗೆ ಕೃಷಿಗೆ ಹಾನಿಯಾಗಿದೆ. ಹಲವು ಕಡೆಗಳಲ್ಲಿ ಗದ್ದೆಗಳಲ್ಲಿ ಮಳೆ ನೀರು ನಿಂತು ನಾಟಿ ಮಾಡಿದ ನೇಜಿ ಕೊಳೆತು ಹೋಗಿದೆ. ಮುನಿಯಾಲು, ಮಾತಿಬೆಟ್ಟು, ಕುಚ್ಚೂರು, ಕುಡಿಬೈಲು, ಶಿವಪುರ ಸೇರಿದಂತೆ ಬಹುತೇಕ ಕಡೆಯಲ್ಲಿ ಕೃಷಿ ಹಾನಿಯಾಗಿದೆ. ಕುಚ್ಚೂರು ಕುಡಿಬೈಲಿನಲ್ಲಿ ಗದ್ದೆಯ ಪಕ್ಕದ ತೋಡಿನ ದಂಡೆ ಒಡೆದು ಗದ್ದೆಗೆ ಮರಳು ಸಹಿತ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ಎರಡು ದಿನಕ್ಕಿಂತ ಹೆಚ್ಚು ಸಮಯ ನೀರಿನಲ್ಲಿ ಮುಳುಗಡೆಯಾದರೆ ಭತ್ತದ ಸಸಿ ಕೊಳೆಯುತ್ತದೆ. ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿರುವುದರಿಂದ ನೆರೆ ಬಂದು ಹಲವೆಡೆ ಕೃಷಿನಾಶ ಸಂಭವಿಸಿದೆ
ಸೀತಾ ಎಂ.ಸಿ. ಜಂಟಿ ನಿರ್ದೇಶಕಿ ಕೃಷಿ ಇಲಾಖೆ
ನೆರೆಗೆ ನಮ್ಮ ಭತ್ತದ ಗದ್ದೆಯು ಒಂದು ವಾರದವರೆಗೂ ನೀರಿನಲ್ಲಿ ಮುಳುಗಿ ನೇಜಿಯು ಕೊಳೆತುಹೋಗಿತ್ತು. ಮಳೆ ಕಡಿಮೆಯಾದ ಬಳಿಕ ಪುನಃ ಎರಡನೇ ಬಾರಿ ಬಿತ್ತನೆ ನಡೆಸಿದ್ದೇವೆ
ಗೋಪಾಲಕೃಷ್ಟ ಉಪ್ಪುಂದ ಕೃಷಿಕ
ನಾನು ಮೂರು ಬಾರಿ ಬಿತ್ತನೆ ಮಾಡಿದರೂ ಭಾರಿ ಮಳೆಯ ಕಾರಣ ಪೈರು ಕೊಳೆತು ಹೋಯಿತು. ಒಟ್ಟು ಮೂರು ಎಕರೆ ಪ್ರದೇಶದ ಬೆಳೆ ನಷ್ಟವಾಗಿದೆ. ಪುನಃ ಬಿತ್ತನೆ ಮಾಡಿದ ಒಂದು ಎಕರೆ ಪೈರಿಗೆ ಹುಳುಗಳ ಕಾಟ ಇದೆ. ಎರಡು ಗದ್ದೆಗೆ ಮತ್ತೆ ಬಿತ್ತನೆ ಮಾಡಿದ್ದೇನೆ
ಸುಬ್ರಹ್ಮಣ್ಯ ಪಂಡಿತ್ ಬಾರಾಡಿ ಕಾಂತಾವರ ಗ್ರಾಮ
ಪ್ರತೀ ವರ್ಷವೂ ನಮ್ಮ ಭಾಗದಲ್ಲಿ ಮಳೆಯಿಂದ ಬೆಳೆ ಹಾನಿಯಾಗಿ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ಸಲದ ಮಳೆಯಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ
ಪ್ರಕಾಶ ಪೂಜಾರಿ ಭತ್ತದ ಬೇಸಾಯಗಾರ ಮಾತಿಬೆಟ್ಟು

‘ಜಂಟಿ ಸಮೀಕ್ಷೆಗೆ ಆದೇಶ ಬಂದಿದೆ

ಈ ಬಾರಿ ಬೆಳೆ ನಾಶವಾದ ರೈತರಿಗೆ ಇನ್ನೂ ಪರಿಹಾರ ವಿತರಣೆಯಾಗಿಲ್ಲ. ಬೆಳೆ ಹಾನಿ ಕುರಿತು ಜಂಟಿ ಸಮೀಕ್ಷೆ ನಡೆಸಲು ಸರ್ಕಾರ ಆದೇಶಿಸಿದೆ. ನಾವು ಅದಕ್ಕೂ ಮೊದಲೇ ಸಮೀಕ್ಷೆ ಕಾರ್ಯ ಆರಂಭಿಸಿದ್ದೇವೆ. ಸಮೀಕ್ಷೆ ನಡೆಸಿದ ಬಳಿಕ ಅದರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ಅನುದಾನ ಬಿಡುಗಡೆ ಮಾಡಿದ ನಂತರ ಆ್ಯಪ್‌ ಮೂಲಕ ಕೃಷಿಕರಿಗೆ ವಿತರಣೆಯಾಗಲಿದೆ. 10ರಿಂದ 15 ದಿವಸಗಳೊಳಗೆ ಪ್ರಕ್ರಿಯೆ ಮುಗಿಯುವ ನಿರೀಕ್ಷೆ ಇದೆ ಎಂದು ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ತಿಳಿಸಿದರು.

ಬೈಂದೂರಿನ ಹಲವೆಡೆ ಕೃಷಿ ನಾಶ

ಬೈಂದೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಈಚೆಗೆ ಸುರಿದ ನಿರಂತರ ಮಳೆಯಿಂದಾಗಿ ನೆರೆ ನೀರಿಗೆ ಹೆಚ್ಚಿನ ಕಡೆಗಳಲ್ಲಿ ಕೃಷಿ ಭೂಮಿ ಜಲಾವೃತವಾಗಿ ಭತ್ತದ ಕೃಷಿ ಹಾನಿ ಸಂಭವಿಸಿದೆ. ತಗ್ಗರ್ಸೆ ಮರ್ಲ್ಹಿತ್ತಲು ಮಕ್ಕಿಗದ್ದೆ ಉದ್ದಾಬೆಟ್ಟು ಶಿರೂರು ಕರಾವಳಿ ದೊಂಬೆ ಹೊಸೂರು ತೂದಳ್ಳಿ ಆಲಂದೂರು ಕಡ್ಕೆ ಗಂಗನಾಡು ಅತ್ಯಾಡಿ ಮುಂತಾದ ಗ್ರಾಮೀಣ ಭಾಗಗಳಲ್ಲಿಯೂ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿತ್ತು. ಉಪ್ಪುಂದ ಖಂಬದಕೋಣೆ ಅರೆಹೊಳೆ ನಾವುಂದ ಬಡಾಕೆರೆ ಮರವಂತೆ ಸಾಲ್ಬುಡ ಕೋಣ್ಕಿ ಕುದ್ರು ಚಿಕ್ಕಳ್ಳಿ ಪಡುಕೋಣೆ ಭಾಗವು ನೆರೆಯಿಂದಾಗಿ ದ್ವೀಪದಂತೆ ಭಾಸವಾಗಿತ್ತು. ಈಗಾಗಲೇ ಬೆಳೆ ಹಾನಿಗೊಳಗಾದ ಹಲವಾರು ಬೆಳೆಗಾರರು ಕೃಷಿ ಇಲಾಖೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಹಾನಿ ಪರಿಶೀಲನೆ ವರದಿಯನ್ನು ತಾಲ್ಲೂಕು ಆಡಳಿತವು ಕ್ರೋಢೀಕರಿಸಿದೆ. ಇದನ್ನು ಪರಿಹಾರ ತಂತ್ರಾಂಶ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದ ನಂತರ ಅರ್ಜಿದಾರರ ಖಾತೆಗೆ ನೇರವಾಗಿ ಪರಿಹಾರದ ಹಣ ರವಾನೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಳೆಯ ಹೂಳು ತೆರವುಗೊಳಿಸಿ

ಬ್ರಹ್ಮಾವರ ತಾಲ್ಲೂಕಿನ ಮಲ್ಲ್ಯಾಡಿ ಮತ್ತು ಗಿಳಿಯಾರು ಗ್ರಾಮಗಳಲ್ಲಿ ಅಲ್ಲಲ್ಲಿ ಕೃಷಿ ಭೂಮಿ ಭೂಪರಿವರ್ತನೆಯಿಂದ ಮನೆಗಳು ನಿರ್ಮಾಣವಾಗಿರುವ ಕಾರಣ ಇಲ್ಲಿನ ನದಿಯ ಹರಿವಿಗೆ ತೊಡಕುಂಟಾಗಿದೆ. ಅಲ್ಲದೇ ದಶಕಗಳ ಹಿಂದೆ ದೊಡ್ಡ ಪೈಪ್ ಹಾಕಿ ಮಾಡಿದ ಸೇತುವೆಗಳಲ್ಲಿ ನೀರು ವೇಗವಾಗಿ ಹರಿಯುತ್ತಿಲ್ಲ. ಗಿಳಿಯಾರು ಸೇತುವೆ ಸಮೀಪ ಹೊಳೆ ಒತ್ತುವರಿ ತೆರವು ಮಾಡಿಸಬೇಕು. ಹಾಗೆಯೇ ಬನ್ನಾಡಿ ವೆಂಟೆಡ್ ಡ್ಯಾಂ ಬನ್ನಾಡಿ ಸೇತುವೆ ಕುದ್ರುಮನೆ ವೆಂಟೆಡ್ ಡ್ಯಾಂ ಹೊಸಾಳ ವೆಂಟೆಡ್ ಡ್ಯಾಂ ಬಾರಕೂರು ವೆಂಟೆಡ್ ಡ್ಯಾಂ ವರೆಗೂ ಅಲ್ಲಲ್ಲಿ ಹೊಳೆಗೆ ಅಡ್ಡಲಾಗಿ ಬಿದ್ದಿರುವ ಮರಗಳ ಜೊತೆಗೆ ಹೂಳು ತೆರವುಗೊಳಿಸಬೇಕು ಎಂದು ಸಾಲಿಗ್ರಾಮದ ಕೃಷಿಕ ರಮೇಶ ಮೆಂಡನ್‌ ಹೇಳಿದರು.

8 ಎಕರೆ ಕೃಷಿ ನಾಶ

ಈ ಬಾರಿ ಮಳೆ ಜಾಸ್ತಿಯಾದ ಕಾರಣ ಭತ್ತದ ಕೃಷಿ ತರಕಾರಿ ಫಸಲಿಗೆ ತೊಂದರೆ ಉಂಟಾಗಿದೆ. ಪ್ರತೀ ವರ್ಷ ಸುಮಾರು 15 ಎಕರೆ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲಾಗುತ್ತಿತ್ತು. ಈ ಬಾರಿ ಹೆಚ್ಚುವರಿಯಾಗಿ ಹಡಿಲು ಬಿದ್ದಿದ್ದ ಸುಮಾರು 8 ಎಕರೆ ಭೂಮಿಯಲ್ಲಿ ಕೃಷಿ ಮಾಡಿದ್ದೆವು. ಅಧಿಕ ಮಳೆಯಿಂದಾಗಿ ಆ 8 ಎಕರೆಯ ಕೃಷಿ ನಾಶವಾಗಿದೆ ಎಂದು ಬೊಮ್ಮರಬೆಟ್ಟು ಕೃಷಿಕ ಸುರೇಶ್ ನಾಯಕ್ ಬೇಸರ ವ್ಯಕ್ತಪಡಿಸಿದರು.

ನಾಲ್ಕು ಗದ್ದೆಗಳು ಸಂಪೂರ್ಣ ನಾಶ

ಶಾಂತಿನಿಕೇತನ ಯುವ ವೃಂದ ಕುಡಿಬೈಲು ಕುಚ್ಚೂರು ಸಂಘದ ವತಿಯಿಂದ ನಾವು ಹಡಿಲು ಭೂಮಿಯಲ್ಲಿ ಕೃಷಿ ಮಾಡಿದ್ದೇವೆ. ಭಾರಿ ನೆರೆಗೆ ಭತ್ತದ ಗದ್ದೆಯಲ್ಲಿ ನೀರು ನಿಂತು ಕೆಲವು ಗದ್ದೆಯ ಸಸಿಗಳು ಕೊಳೆತು ಹೋಗಿವೆ. ತೋಡಿನ ಕಟ್ಟೆ ಒಡೆದು ಅಲ್ಲಲ್ಲಿ ಬೃಹತ್ ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದೆ. ಬಹುತೇಕ ಕಡೆಯಲ್ಲಿ ಗದ್ದೆಯ ಅಂಚುಗಳು ತೊಳೆದುಕೊಂಡು ಹೋಗಿದೆ. ನಾಲ್ಕು ಗದ್ದೆಗಳು ಸಂಪೂರ್ಣ ನಾಶವಾಗಿವೆ ಎನ್ನುತ್ತಾರೆ ಕುಚ್ಚೂರು ಕೃಷಿಕ ದೀಕ್ಷಿತ್ ನಾಯಕ್.

ಪೂರಕ ಮಾಹಿತಿ: ವಾಸುದೇವ್‌ ಭಟ್‌, ಶೇಷಗಿರಿ ಭಟ್‌, ಸುಕುಮಾರ್‌ ಮುನಿಯಾಲ್‌, ವಿಶ್ವನಾಥ ಆಚಾರ್ಯ, ರಾಘವೇಂದ್ರ ಹಿರಿಯಡಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT