ಮಂಗಳವಾರ, ಫೆಬ್ರವರಿ 18, 2020
16 °C

ಜಿಲ್ಲೆಯ 18 ಪ್ರೌಢಶಾಲೆಗಳಲ್ಲಿ ನ್ಯಾಪ್‌ಕಿನ್ ವಿಲೇವಾರಿ ಘಟಕಗಳ ಸ್ಥಾಪನೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ವಿದ್ಯಾರ್ಥಿನಿಯರು ಋತುಸ್ರಾವದ ದಿನಗಳಲ್ಲಿ ಮುಜುಗರವಿಲ್ಲದೆ ಶಾಲೆಗೆ ಬರಬೇಕು ಎಂಬ ಉದ್ದೇಶದಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ದಾನಿಗಳ ನೆರವಿನಿಂದ ನ್ಯಾಪ್‌ಕಿನ್‌ ವಿಲೇವಾರಿ ಘಟಕಗಳನ್ನು ಸ್ಥಾಪಿಸುತ್ತಿದೆ. ಇಲಾಖೆಯ ಈ ಕಾರ್ಯಕ್ಕೆ ಪೋಷಕರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ನ್ಯಾಪ್‌ಕಿನ್ ವಿಲೇವಾರಿ ಘಟಕಗಳು ನಿರ್ಮಾಣವಾದ ಬಳಿಕ ಋತುಸ್ರಾವದ ದಿನಗಳಲ್ಲಿ ವಿದ್ಯಾರ್ಥಿನಿಯರು ಶಾಲೆಗಳಲ್ಲಿ ಎದುರಿಸುತ್ತಿದ್ದ ಮುಜುಗರ, ಮಾನಸಿಕ ತೊಳಲಾಟ ನಿವಾರಣೆಯಾಗಿವೆ. ಅವರು ಆತ್ಮವಿಶ್ವಾಸದಿಂದ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಯೋಜನೆ ಜಾರಿ ಹೇಗೆ?: ಜಿಲ್ಲೆಯ 19 ಸರ್ಕಾರಿ ಪ್ರೌಢಶಾಲೆಗಳಿಗೆ ಹಿಂದೆ ಸರ್ಕಾರ ನ್ಯಾಪ್‌ಕಿನ್ ಬರ್ನಿಂಗ್ ಯಂತ್ರಗಳನ್ನು ವಿತರಿಸಿತ್ತು. ಇವುಗಳಲ್ಲಿ ಬಹುತೇಕ ದುರಸ್ತಿಯಲ್ಲಿರುವುದರಿಂದ ವಿದ್ಯಾರ್ಥಿನಿಯರು ಸಮಸ್ಯೆ ಎದುರಿಸುವಂತಾಗಿತ್ತು.

ಪ್ಯಾಡ್‌ಗಳ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಶೌಚಾಲಯದ ಗುಂಡಿಗೆ ಹಾಕುತ್ತಿದ್ದರು. ಇದರಿಂದ ಶೌಚದ ಪೈಪ್‌ ಕಟ್ಟಿಕೊಂಡು ಶಾಲೆಯ ಪರಿಸರ ಕೆಡುತ್ತಿತ್ತು. ದುರಸ್ತಿಯಾಗುವವರೆಗೂ ವಿದ್ಯಾರ್ಥಿನಿಯರು ಅಕ್ಕಪಕ್ಕದ ಮನೆಗಳಿಗೆ ಶೌಚಕ್ಕೆ ತೆರಳಬೇಕಾದ ಅನಿವಾರ್ಯತೆ ನಿರ್ಮಾಣವಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳಿಗೆ ನ್ಯಾಪ್‌ಕಿನ್ ವಿಲೇವಾರಿ ಘಟಕಗಳಿಂದ ಮುಕ್ತಿ ಸಿಕ್ಕಿದೆ.

ಪ್ರಯೋಗ ಯಶಸ್ವಿ: ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 18 ಶಾಲೆಗಳಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಹಲವು ಶಾಲೆಗಳಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಪ್ರೌಢಶಾಲೆಗಳಿಗೂ ಯೋಜನೆಯನ್ನು ವಿಸ್ತರಿಸುವ ಉದ್ದೇಶವಿದೆ. ಆದರೆ, ಇದಕ್ಕೆ ಸರ್ಕಾರದಿಂದ ನಿರ್ದಿಷ್ಟ ಅನುದಾನವಿಲ್ಲ, ದಾನಿಗಳ ನೆರವು ಪಡೆಯಲಾಗುತ್ತಿದೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಘಟಕ ನಿರ್ಮಾಣ ಹೇಗೆ?: ಬಾಲಕಿಯರ ಶೌಚಾಲಯದ ಗೋಡೆಗೆ ದೊಡ್ಡ ರಂಧ್ರ ಕೊರೆದು, ಕೆಳಮುಖವಾಗಿ ಪೈಪ್‌ ಅಳವಡಿಸಲಾಗಿದೆ. ಶೌಚಾಲಯದ ಪಕ್ಕದಲ್ಲಿರುವ ಕಾಂಕ್ರೀಟ್‌ ಪಿಟ್‌ಗೆ ಪೈಪ್‌ ಸಂಪರ್ಕ ನೀಡಲಾಗಿದೆ. ವಿದ್ಯಾರ್ಥಿನಿಯರು ಶೌಚಾಲಯದ ಒಳಗಿನಿಂದ ಪೈಪ್‌ನ ರಂಧ್ರಕ್ಕೆ ಪ್ಯಾಡ್‌ಗಳನ್ನು ಹಾಕಿದರೆ, ಪಿಟ್‌ಗೆ ಬಂದು ಬೀಳುತ್ತವೆ.

4 ಅಡಿಯ ಗುಂಡಿ ಭರ್ತಿಯಾಗಲು 8 ರಿಂದ 10 ವರ್ಷ ಬೇಕಾಗಬಹುದು. ನಿರ್ವಹಣೆಯ ಕಿರಿಕಿರಿ ಇರುವುದಿಲ್ಲ. ಗಾತ್ರಕ್ಕೆ ಅನುಗುಣವಾಗಿ ಘಟಕ ನಿರ್ಮಾಣ ಮಾಡಲು ₹6 ರಿಂದ ₹10 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ ಯೋಜನೆಯ ರೂವಾರಿಗಳಲ್ಲಿ ಒಬ್ಬರಾದ ಬಸ್ರೂರು ಶಾಲೆಯ ಸಹ ಶಿಕ್ಷಕ ಶ್ರೀಕಾಂತ್‌.

ಮಗಳ ನೋವು ಕಣ್ತೆರೆಸಿತು...
ಋತುಸ್ರಾವದ ಸಂದರ್ಭ ಶಾಲೆಯಲ್ಲಿ ಮಗಳು ಅನುಭವಿಸಿದ ನೋವು ನ್ಯಾಪ್‌ಕಿನ್ ವಿಲೇವಾರಿ ಘಟಕ ನಿರ್ಮಿಸುವ ಆಲೋಚನೆಗೆ ಕಾರಣವಾಯಿತು. ಕೆಲವು ಪೋಷಕರು ಆರ್ಥಿಕ ನೆರವು ನೀಡಿದರು. 3 ವರ್ಷದ ಹಿಂದೆ ಬಸ್ರೂರು ಪ್ರೌಢಶಾಲೆಯಲ್ಲಿ ಮೊದಲ ಪಿಟ್‌ ನಿರ್ಮಿಸಿದೆ. ಬಳಿಕ ಮಗಳು ಓದುತ್ತಿದ್ದ ಕುಂದಾಪುರದ ಒಡೆಯರ ಹೋಬಳಿ ಶಾಲೆಗೆ ಸ್ವಂತ ಹಣದಿಂದ ಘಟಕ ಕಟ್ಟಿಸಿಕೊಟ್ಟಿದ್ದೇನೆ. ಹಲವು ಶಾಲೆಗಳಿಂದ ಬೇಡಿಕೆ ಬಂದಿದ್ದು, ರಜೆಯ ದಿನಗಳಲ್ಲಿ ಘಟಕ ನಿರ್ಮಾಣಕ್ಕೆ ಹೋಗುತ್ತೇನೆ ಎಂದು ಸಹ ಶಿಕ್ಷಕ ಶ್ರೀಕಾಂತ್ ಹೇಳಿದರು.

‘ರಾಸಾಯನಿಕ ಸಿಂಪರಣೆ’
ಘಟಕದಲ್ಲಿ ಸಂಗ್ರಹವಾಗುವ ಪ್ಯಾಡ್‌ಗಳನ್ನು ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯೋಚನೆಯಿದೆ. ಸದ್ಯ ಬ್ಲೀಚಿಂಗ್ ಪೌಡರ್‌ ಹಾಗೂ ರಾಸಾಯನಿಕ ಸಿಂಪರಿಸಿ ಪ್ಯಾಡ್‌ಗಳನ್ನು ಕರಗಿಸಲಾಗುತ್ತಿದೆ. ಈ ವೇಳೆ ಉಳಿಯುವ ಪ್ಲಾಸ್ಟಿಕ್ ಅನ್ನು ಎಸ್‌ಎಲ್‌ಆರ್‌ಎಂ ಘಟಕಗಳಿಗೆ ನೀಡಲಾಗುವುದು ಡಿಡಿಪಿಐ ಶೇಷಶಯನ ಕಾರಿಂಜ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು