ಭಾನುವಾರ, ನವೆಂಬರ್ 27, 2022
26 °C
ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅಲಂಕಾರ,

ಉಡುಪಿ: ದುರ್ಗೆಯರ ಸನ್ನಿಧಿಯಲ್ಲಿ ನವರಾತ್ರಿ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಾದ್ಯಂತ ನವರಾತ್ರಿ ಉತ್ಸವ ಆರಂಭವಾಗಿದ್ದು ಮೊದಲ ದಿನವಾದ ಸೋಮವಾರ ದುರ್ಗೆಯರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮ, ಹವನ, ಧಾರ್ಮಿಕ ವಿಧಿವಿಧಾನಗಳು ನಡೆದವು. ಕದಿರು ಕಟ್ಟುವ ಸಂಪ್ರದಾಯದೊಂದಿಗೆ ಆರಂಭವಾಗಿರುವ ನವರಾತ್ರಿ ಉತ್ಸವ ಮುಂದಿನ 9 ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದೆ.

ಉಡುಪಿಯ ನಾಲ್ಕು ದಿಕ್ಕುಗಳಲ್ಲಿ ನಿರ್ಮಾಣವಾಗಿರುವ ಶತಮಾನಗಳಷ್ಟು ಪುರಾತನವಾಗಿರುವ ದುರ್ಗಾಲಯಗಳಲ್ಲಿ ದೇವಿಯರಿಗೆ ವಿಶೇಷ ಪೂಜೆ ನಡೆಯಿತು. ಉಡುಪಿಯ ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದಲ್ಲಿ ನವರಾತ್ರಿ ರಂಗು ತುಂಬಿದೆ. ಇಡೀ ದೇಗುಲಕ್ಕೆ ಹೂವಿನ ಅಲಂಕಾರ ಮಾಡಲಾಗಿದೆ.

ದೇವಾಲಯಕ್ಕೆ ಸಂಪರ್ಕಿಸುವ ರಸ್ತೆಗೆ ಹಾಗೂ ಹೆದ್ದಾರಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅ.5ರವರೆಗೂ ಉತ್ಸವ ಪ್ರತಿನಿತ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೋಮವಾರ ಕಡಿಯಾಳಿ ಮಹಿಷ ಮರ್ಧಿನಿ ದೇವಸ್ಥಾನದ ನೂತನ ಶರ್ವಾಣಿ ಮಂಟಪ, ಯಾಗ ಶಾಲೆಯನ್ನು ಸೋದೆ ವಾದಿರಾಜ ಮಠದ ವಿಶ್ವವಲ್ಲಭತೀರ್ಥ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಶಾಸಕ ಕೆ.ರಘುಪತಿ ಭಟ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ರವಿರಾಜ್ ಆಚಾರ್ಯ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನಾಗೇಶ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪುರುಶೋತ್ತಮ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್ ಕಲ್ಮಾಡಿ, ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಇದ್ದರು.

ನಗರದ ಕನ್ನಾರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಿದರು. ಇಲ್ಲಿಯೂ ಪ್ರತಿನಿತ್ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಬೈಲೂರು ಮಹಿಷ ಮರ್ಧಿನಿ ದೇವಸ್ಥಾನ, ಪುತ್ತೂರು ಭಗವತಿ ದುರ್ಗಾ ಪರಮೇಶ್ವರಿ ದೇಗುಲ, ಅಂಬಲಪಾಡಿ ಮಹಾಕಾಳಿ ದೇವಸ್ಥಾನಗಳಲ್ಲೂ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ದೇವಿಗೆ ಮನಮೋಹಕ ಅಲಂಕಾರ ಮಾಡಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ಕೃಷ್ಣಮಠದಲ್ಲಿ ಕೃಷ್ಣದೇವರಿಗೆ ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಶ್ರೀಗಳು ‘ಮೋಹಿನಿ’ ವಿಶೇಷ ಅಲಂಕಾರ ಮಾಡಿದ್ದರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥ ಶ್ರೀಗಳು ಮಹಾಪೂಜೆ ನೆರವೇರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು