ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಅಶಕ್ತರ ಶುಶ್ರೂಷೆಯಲ್ಲಿ ಸೋತ ಸರಸ್ವತಿಗೆ ಬೇಕು ದಾನಿಗಳ ನೆರವು

Last Updated 30 ಜೂನ್ 2020, 13:39 IST
ಅಕ್ಷರ ಗಾತ್ರ

ಬೈಂದೂರು: ಗಂಗೊಳ್ಳಿ ಬಂದರು ಪ್ರದೇಶದ ದೊಡ್ಡಹಿತ್ಲುವಿನ ಆ ಪುಟ್ಟ ಮನೆಯಲ್ಲಿ ದುಡಿಯುವ ಪುರುಷರಿಲ್ಲ. ಮೀನುಗಾರಿಕೆ ಬಂದರಿನಲ್ಲಿ ಕೂಲಿಕೆಲಸ ಮಾಡುವ ಮಧ್ಯವಯಸ್ಸಿನ ಸರಸ್ವತಿ ಮೊಗವೀರ ತರುವ ದಿನಗೂಲಿಯೇ ಮನೆಗೆ ಆಧಾರ. ಕಷ್ಟದ ಬದುಕು ಸಾಗಿಸುತ್ತಿರುವ ಅವರ ಕಾರ್ಪಣ್ಯ ಹೆಚ್ಚಿಸಿರುವುದು ಮನೆಯಲ್ಲಿರುವ ಮೂವರು ಅಶಕ್ತರು. ಹೀಗಾಗಿ ಅವರು ನೆರವಿಗೆ ಮೊರೆಹೋಗಿದ್ದಾರೆ.

ಮಾವ ನಾಣು ಮೊಗವೀರರ 90 ವರ್ಷ ವಯಸ್ಸು. ಅವರ ಸೊಂಟಕ್ಕೆ ಶಸ್ತ್ರಕ್ರಿಯೆ ನಡೆಸಿ ರಾಡ್ ಅಳವಡಿಸಿದ್ದರಿಂದ ಈಗ ಮಲಗಿದ್ದಲ್ಲಿಂದ ಏಳಲಾರರು. ವೃದ್ಧಾಪ್ಯ, ಅನಾರೋಗ್ಯದಿಂದ ಎಲುಬು ಚರ್ಮದ ಚಕ್ಕಳವಾಗಿದ್ದಾರೆ. ತಾಯಿ ನೀಲು ಮೊಗವೀರ ಅವರಿಗೆ 70 ವರ್ಷ ವಯಸ್ಸು. ಜಗುಲಿಯಿಂದ ಕೆಳಗೆ ಬಿದ್ದು ಸೊಂಟದ ಮೂಳೆ ಮುರಿದ ಕಾರಣ ಕುಳಿತಲ್ಲೇ ಎಲ್ಲ ಕೆಲಸ. ಬಾಲ್ಯದಿಂದಲೂ ಅಂಗವಿಕಲರಾಗಿರುವ ಚಿಕ್ಕಮ್ಮನ ಮಗ 50 ವಯಸ್ಸಿನ ದಯಾನಂದ ಮೊಗವೀರ ಕತ್ತಲ ಕೋಣೆಯೊಳಗೆ ಬಂದಿ. ಸರಸ್ವತಿಯೇ ದುಡಿಮೆಯ ಜತೆಗೆ ಇವರ ದಿನಚರಿ ನೋಡಿಕೊಳ್ಳಬೇಕು. ಇವೆಲ್ಲದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗುತ್ತಿರುವ ಅವರಿಗೆ ಮುಂದಿನ ದಿನಗಳ ಚಿಂತೆ ಕಾಡುತ್ತಿದೆ.

ಮೂವರು ಅಶಕ್ತರಿಗೂ ಸರ್ಕಾರದ ಮಾಸಿಕ ವೇತನ ಸಿಗುತ್ತಿದೆ. ಅದು ಅವರ ಔಷಧೋಪಚಾರಕ್ಕೇ ವ್ಯಯವಾಗುತ್ತದೆ. ಸರಸ್ವತಿ ಅವರಿಗೆ ಕೆಲಸ ಇದ್ದಾಗ ಹೇಗೋ ಸಾಗುತ್ತದೆ. ಮೀನುಗಾರಿಕೆ ಸ್ಥಗಿತವಾದ ತಕ್ಷಣ ದಿನದೂಡುವ ಸಮಸ್ಯೆ ಎದುರಾಗುತ್ತದೆ.

‘ಈ ಬಡ ಕುಟುಂಬಕ್ಕೆ ಸಹೃದಯಿ ದಾನಿಗಳ ನೆರವು ಬೇಕು. ಸಹಾಯ ಮಾಡಲಿಚ್ಛಿಸುವವರು ಸಿಂಡಿಕೇಟ್ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಸರಸ್ವತಿ ಹೆಸರಿನಲ್ಲಿರುವ ಉಳಿತಾಯ ಖಾತೆ ಸಂಖ್ಯೆ: 01232200071056, ಐಎಫ್‌ಎಸ್‌ಸಿ ಕೋಡ್ : SYN 0000123 ಖಾತೆಗೆ ಜಮೆ ಮಾಡಬಹುದು’ ಎಂದು ಅವರ ಸ್ಥಿತಿಯನ್ನು ಹತ್ತಿರದಿಂದ ಕಂಡಿರುವ ಗ್ರಾಮ ಪಂಚಾಯಿತಿ ಸದಸ್ಯ ಬಿ. ರಾಘವೇಂದ್ರ ಪೈ ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT