ಬುಧವಾರ, ಆಗಸ್ಟ್ 21, 2019
22 °C
ಹೆಚ್ಚುತ್ತಿವೆ ಆನ್‌ಲೈನ್ ವಂಚನೆ ಪ್ರಕರಣಗಳು; ಬಹುಮಾನದ ಆಮಿಷವೊಡ್ಡಿ ಮೋಸ

ಎಟಿಎಂನಲ್ಲಿ ಕಳ್ಳಗಣ್ಣಿವೆ ಎಚ್ಚರ!

Published:
Updated:
Prajavani

ಉಡುಪಿ: ದೇಶದ ಆರ್ಥಿಕತೆ ನಗದು ರಹಿತ ಡಿಜಿಟಲ್‌ ವ್ಯವಸ್ಥೆಗೆ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಂಚಕರ ಜಾಲಕ್ಕೆ ಬಿದ್ದು ಹಲವರು ಹಣ ಕಳೆದುಕೊಂಡಿವ ಪ್ರಕರಣ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿದೆ.

ಎಟಿಎಂ ಕಾರ್ಡ್‌ ಬಳಸುವಾಗ ಇರಲಿ ಎಚ್ಚರ:

ತಂತ್ರಜ್ಞಾನ ಬದಲಾದಂತೆ ಅಪರಾಧದ ಸ್ವರೂಪಗಳು ಬದಲಾಗಿದ್ದು, ವಂಚಕರು ಎಟಿಎಂ ಕೇಂದ್ರಗಳನ್ನು ಬಳಸಿಕೊಂಡು ಗ್ರಾಹಕರ ಖಾತೆಗೆ ಕನ್ನ ಹಾಕುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿವೆ.

ಸ್ಕಿಮ್ಮರ್ ವಂಚನೆ:

ಎಟಿಎಂ ಕಾರ್ಡ್‌ನಲ್ಲಿರುವ ಸಂಪೂರ್ಣ ವಿವರಗಳನ್ನು ನಕಲು ಮಾಡುವ ಸ್ಕಿಮ್ಮರ್ ಸಾಧನಗಳನ್ನು ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಕೇಂದ್ರಗಳಲ್ಲಿ ಅಳವಡಿಸುತ್ತಿರುವುದು ಕಂಡುಬಂದಿದೆ. ಕುಂದಾಪುರದಲ್ಲಿ ಈಚೆಗೆ ಬ್ಯಾಂಕ್‌ವೊಂದರ ಎಟಿಎಂನಲ್ಲಿ ಸ್ಕಿಮ್ಮರ್ ಯಂತ್ರ ಪತ್ತೆಯಾಗಿದ್ದು, ಹರೀಶ್ ಖಾರ್ವಿ ಅವರ ಖಾತೆಯಿಂದ ₹80,000 ಹಣ ದೋಚಲಾಗಿದೆ. ಇದೇ ಎಟಿಎಂನಿಂದ ನಾಲ್ಕೈದು ಜನ ಹಣ ಕಳೆದುಕೊಂಡಿದ್ದಾರೆ ಎನ್ನುತ್ತಾರೆ ಸೆನ್‌ ಠಾಣೆಯ ಇನ್‌ಸ್ಪೆಕ್ಟರ್ ಪಿ.ಸೀತಾರಾಮ್‌.

ವಂಚನೆ ಹೇಗೆ ?

ಹಣ ಬಿಡಿಸಲು ಎಟಿಎಂಗೆ ಬರುವ ಗ್ರಾಹಕರು ಕಾರ್ಡ್‌ ಹಾಕಿದಾಕ್ಷಣ ಅದರ ಸಂಪೂರ್ಣ ಮಾಹಿತಿ ಸ್ಕಿಮ್ಮರ್ ಯಂತ್ರದಲ್ಲಿ ಸಂಗ್ರಹವಾಗುತ್ತದೆ. ಅಲ್ಲಿ ವಂಚಕರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ರಹಸ್ಯ ಸಂಖ್ಯೆಯ ಮಾಹಿತಿ ಲಭ್ಯವಾಗುತ್ತದೆ. 

ಇದೆಲ್ಲವನ್ನೂ ಬಳಸಿಕೊಂಡು ನಕಲಿ ಎಟಿಎಂ ಕಾರ್ಡ್‌ಗಳನ್ನು ತಯಾರಿಸಿ, ಬೇರೆ ಜಿಲ್ಲೆ ಅಥವಾ ರಾಜ್ಯಗಳಲ್ಲಿರುವ ಎಟಿಎಂಗಳಿಂದ ಹಣ ಬಿಡಿಸಿಕೊಳ್ಳಲಾಗುತ್ತದೆ ಎನ್ನುತ್ತಾರೆ ಅವರು.

ಕಾಲ್‌ಸೆಂಟರ್ ವಂಚನೆ:

ಈಚೆಗೆ ನಕಲಿ ಕಾಲ್‌ಸೆಂಟರ್‌ಗಳ ಮೂಲಕ ಆನ್‌ಲೈನ್ ಶಾಪಿಂಗ್‌ ಮಾಡುವ ಗ್ರಾಹಕರನ್ನು ಗುರಿಯಾಗಿಸಿ ವಂಚನೆ ಎಸಗಲಾಗುತ್ತಿದೆ. ಈಚೆಗೆ ದಿನೇಶ್ ಎಂಬುವರು ಆನ್‌ಲೈನ್‌ನಲ್ಲಿ ಬ್ಲೂಟೂತ್ ಸ್ಪೀಕರ್ ಖರೀದಿಸಿ, ಉತ್ಪನ್ನ ಇಷ್ಟವಾಗದೆ ಹಣ ಪಾಪಸ್‌ ಪಡೆಯಲು ಗೂಗಲ್‌ನಲ್ಲಿ ಸಿಕ್ಕ ಕಾಲ್‌ ಸೆಂಟರ್ ನಂಬರ್ ಕರೆ ಮಾಡಿದ್ದರು.

ಕರೆ ಸ್ವೀಕರಿಸಿದವರು ದಿನೇಶ್‌ ಮೊಬೈಲ್‌ಗೆ ಲಿಂಕ್‌ ಕಳಿಸಿ, ಎಟಿಎಂ ಕಾರ್ಡ್‌ನ ವಿವರ ಪಡೆದುಕೊಂಡಿದ್ದರು. ಬಳಿಕ ಒಟಿಪಿ ವರ್ಗಾಯಿಸಿಕೊಂಡು ₹ 87,998 ಲಪಟಾಯಿಸಿದ್ದರು ಎಂದು ಇನ್‌ಸ್ಪೆಕ್ಟರ್ ವಂಚನೆಯ ವಿವರ ನೀಡಿದರು.

ಬಂಪರ್ ಬಹುಮಾನದ ಆಮಿಷ:

ಈಚೆಗೆ ಬ್ರಹ್ಮಾವರದ ಪಲ್ಲವಿ ಎಂಬುವರಿಗೆ ಖ್ಯಾತ ಕಂಪೆನಿಯ ಹೆಸರಿನಲ್ಲಿ ಪಾರ್ಸಲ್‌ ಕಳಿಸಲಾಗಿತ್ತು. ಅದರಲ್ಲಿದ್ದ ಕೂಪನ್‌ನಲ್ಲಿ ₹ 12 ಲಕ್ಷದ ಬಹುಮಾನ ಗೆದ್ದಿರುವುದಾಗಿ ಬರೆಯಲಾಗಿತ್ತು. ಅದನ್ನು ನಂಬಿ ಕೂಪನ್‌ನಲ್ಲಿದ್ದ ಕಾಲ್‌ಸೆಂಟರ್‌ಗೆ ಕರೆ ಮಾಡಿದಾಗ, ವಂಚಕರು ಜಿಎಸ್‌ಟಿ, ಎನ್‌ಒಸಿ, ಸೆಂಟ್ರಲ್ ಟ್ಯಾಕ್ಸ್‌ ಹೆಸರಿನಲ್ಲಿ ₹ 3.55 ಲಕ್ಷ ಹಣವನ್ನು ಖಾತೆಗೆ ಹಾಕಿಸಿಕೊಂಡು ಮೋಸ ಮಾಡಿದ್ದಾರೆ ಎಂದು ಜಾಲದ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು.

Post Comments (+)