ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಾಂ, ಬಿಸಿಎ ಕೋರ್ಸ್‌ ಸೇರಲು ಹೆಚ್ಚಾದ ಬೇಡಿಕೆ

ಕೋವಿಡ್‌ನಿಂದ ರದ್ದಾದ ದ್ವಿತಿಯ ಪಿಯುಸಿ ಪರೀಕ್ಷೆ: ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಳ
Last Updated 8 ಆಗಸ್ಟ್ 2021, 14:42 IST
ಅಕ್ಷರ ಗಾತ್ರ

ಉಡುಪಿ: ಪದವಿ ಕಾಲೇಜುಗಳು ಪ್ರತಿವರ್ಷ ವಿದ್ಯಾರ್ಥಿಗಳ ಬರುವಿಕೆಗೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವು. ಆದರೆ, ಈ ವರ್ಷ ಪರಿಸ್ಥಿತಿ ಬದಲಾಗಿದ್ದು, ವಿದ್ಯಾರ್ಥಿಗಳೇ ದಾಖಲಾತಿ ಪಡೆಯಲು ‌ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕಾರಣ ಕೋವಿಡ್‌–19.

ಕಳೆದ ಮಾರ್ಚ್‌ ಏಪ್ರಿಲ್‌, ಮೇನಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದ್ದರಿಂದ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಪ್ರವೇಶ ಪಡೆದಿದ್ದ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗುತ್ತಿದೆ.

ಜಿಲ್ಲೆಯಲ್ಲಿ ಪ್ರತಿವರ್ಷ ಪರೀಕ್ಷೆ ಬರೆದ ಶೇ 80 ರಿಂದ 85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಇವರಲ್ಲಿ ಬಿ.ಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಇ, ಎಂಬಿಬಿಎಸ್‌, ಪಾಲಿಟೆಕ್ನಿಕ್ ಸೇರಿದಂತೆ ಹಲವು ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿದ್ದರು. ಆದರೆ, ಈ ವರ್ಷ ಶೇ 100 ಫಲಿತಾಂಶ ಬಂದಿರುವುದು ದಾಖಲಾತಿ ಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣ.

ಈ ವರ್ಷ ಕೆಲವು ಕೋರ್ಸ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಕಾಲೇಜುಗಳ ಲಭ್ಯವಿರುವ ಮೂಲಸೌಕರ್ಯ ಹಾಗೂ ಬೋಧನಾ ಸಿಬ್ಬಂದಿಗೆ ಅನುಗುಣವಾಗಿ ನಿರ್ಧಿಷ್ಟ ಸಂಖ್ಯೆಯ ಸೀಟುಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಬೇಕಾಗಿರುವುದರಿಂದ, ಎಲ್ಲರಿಗೂ ಇಷ್ಟಪಟ್ಟ ಕೋರ್ಸ್‌ಗಳಿಗೆ ಪ್ರವೇಶ ಸಿಗುವುದು ಕಷ್ಟ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರು

ಬಿಸಿಎ, ಬಿಕಾಂಗೆ ಭಾರಿ ಬೇಡಿಕೆ:

ಈ ವರ್ಷ ಬಿಸಿಎ ಹಾಗೂ ಬಿಕಾಂ ಕೋರ್ಸ್‌ಗಳಿಗೆ ಸೇರಲು ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಉಡುಪಿಯ ಮಹಾತ್ಮಾ ಗಾಂಧಿ ಮೆಮೊರಿಯಲ್‌ (ಎಂಜಿಎಂ) ಕಾಲೇಜಿನಲ್ಲಿ ಲಭ್ಯವಿರುವ 120 ಬಿಸಿಎ ಸೀಟುಗಳಿಗೆ ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ 600ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಹಾಗೆಯೇ 205 ಬಿ.ಕಾಂ ಸೀಟುಗಳಿಗೆ ಪ್ರತಿಯಾಗಿ 675ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯಕ್‌.

225 ಬಿಎಸ್ಸಿ ಸೀಟುಗಳಿಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಅರ್ಜಿಗಳು ಬಂದಿವೆ. ಆದರೆ, ಬಿಎ ಪದವಿಗೆ ನಿರೀಕ್ಷಿತ ಅರ್ಜಿಗಳು ಬಂದಿಲ್ಲ. ಇಲ್ಲಿಯವರೆಗೂ 60 ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದಾರೆ ಎನ್ನುತ್ತಾರೆ ಅವರು.

ಕರಾವಳಿಯಲ್ಲಿ ಕಡಿಮೆ:

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಪ್ರತಿವರ್ಷ ಪಿಯುಸಿ ಫಲಿತಾಂಶದಲ್ಲಿ ಮುಂಚೂಣಿಯಲ್ಲಿರುತ್ತವೆ. ಸಾಮಾನ್ಯವಾಗಿ ಶೇ 80 ರಿಂದ 85ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವುದರಿಂದ, ಈ ವರ್ಷ ಪದವಿ ಕಾಲೇಜುಗಳಲ್ಲಿ ಶೇ. 15ರಿಂದ 20ರಷ್ಟು ದಾಖಲಾತಿ ಹೆಚ್ಚಾಗಬಹುದಷ್ಟೆ ಎನ್ನುತ್ತಾರೆ ತೆಂಕ ನಿಡಿಯೂರು ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲರಾದ ಗಣನಾಥ ಎಕ್ಕಾರು.

ಹೆಚ್ಚುವರಿಯಾಗಿರುವ ಶೇ 15ರಿಂದ 20ರಷ್ಟು ವಿದ್ಯಾರ್ಥಿಗಳಲ್ಲಿ ಮೆಡಿಕಲ್‌, ಎಂಜಿನಿಯರಿಂಗ್, ಪಾಲಿಟಿಕ್ನಿಕ್ ಸೇರುವವರೂ ಇದ್ದಾರೆ. ಹಾಗಾಗಿ, ಪದವಿ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳು ಭರ್ತಿಯಾಗಬಹುದು. ಸೀಟು ಸಿಗಲಾರದ ಸಮಸ್ಯೆ ಉದ್ಭವವಾಗುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಅವರು.

ತೆಂಕ ನಿಡಿಯೂರು ಕಾಲೇಜಿನಲ್ಲಿ ಈ ವರ್ಷ ಬಿಕಾಂ ಪ್ರವೇಶಕ್ಕೆ 140ಕ್ಕೂ ಹೆಚ್ಚು ಅರ್ಜಿಗಳನ್ನು ವಿತರಿಸಲಾಗಿದೆ. ಬಿ.ಎಗೆ 40 ಹಾಗೂ ಬಿಎಸ್ಸಿಗೆ 30 ಹಾಗೂ ಇತರೆ ಕೋರ್ಸ್‌ಗಳಿಗೆ 20 ಅರ್ಜಿಗಳನ್ನು ನೀಡಲಾಗಿದೆ. ಇದುವರೆಗೂ ದಾಖಲಾತಿ ಆರಂಭವಾಗಿಲ್ಲ. ಸರ್ಕಾರದ ಸೂಚನೆ ಬಂದ ಬಳಿಕವಷ್ಟೆ ದಾಖಲಾತಿ ಆರಂಭವಾಗಲಿದೆ ಎನ್ನುತ್ತಾರೆ ಪ್ರಾಂಶುಪಾಲರಾದ ಗಣನಾಥ ಎಕ್ಕಾರು.

ಪ್ರತಿವರ್ಷ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವಾಣಿಜ್ಯ ಹೊರತುಪಡಿಸಿ ಕಲಾ ಹಾಗೂ ವಿಜ್ಞಾನ ಕೋರ್ಸ್‌ಗಳ ಸೀಟುಗಳು ಉಳಿಯುತ್ತಿತ್ತು. ಈ ವರ್ಷ, ಎಲ್ಲ ಸೀಟುಗಳು ಭರ್ತಿಯಾಗಬಹುದು ಎಂಬ ನಿರೀಕ್ಷೆಗಳಿವೆ. ಸಹಜವಾಗಿ ಬಿಸಿಎ ಹಾಗೂ ಬಿಕಾಂಗೆ ಹೆಚ್ಚು ಬೇಡಿಕೆ ಇದ್ದು, ಈ ವರ್ಷ ವಾಣಿಜ್ಯ ಕೋರ್ಸ್‌ಗೆ ಬ್ಯಾಚ್‌ ಸಂಖ್ಯೆ ಹೆಚ್ಚಿಸಲು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದರು.

‘ಶುಲ್ಕ ಹೆಚ್ಚಳ ಇಲ್ಲ’

ಪದವಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಕೆಲವು ತಾಂತ್ರಿಕ ಅಡಚಣೆ ಇದ್ದು, ಇನ್ನೆರಡು ದಿನಗಳಲ್ಲಿ ಬಗೆಹರಿಯಲಿದೆ. ಪ್ರತಿವರ್ಷ ಪಿಯುಸಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದರು. ಈ ವರ್ಷ 6 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಸಹಜವಾಗಿ ದಾಖಲಾತಿ ಪ್ರಮಾಣ ಹೆಚ್ಚಲಿದೆ. ಇದರಿಂದ ಮುಚ್ಚುವ ಹಂತದಲ್ಲಿರುವ ಕಾಲೇಜುಗಳು ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ. ಬಿ.ಕಾಂ, ಬಿಸಿಎಗೆ ಬೇಡಿಕೆ ಹೆಚ್ಚಾಗಿದ್ದು, ಎಲ್ಲರಿಗೂ ಪ್ರವೇಶ ಸಿಗುವುದು ಕಷ್ಟ. ಈ ವರ್ಷ ಶುಲ್ಕ ಹೆಚ್ಚಿಸುವುದಿಲ್ಲ. ಸಾಂಸ್ಕೃತಿಕ ಚಟುವಟಿಕೆ ಇರುವುದಿಲ್ಲವಾದ್ದರಿಂದ ಸಾಂಸ್ಕೃತಿಕ ಚಟುವಟಿಕೆ ಶುಲ್ಕ ಇರುವುದಿಲ್ಲ. ಶುಲ್ಕ ಪಾವತಿಗೆ ವಿದ್ಯಾರ್ಥಿಗಳಿಗೆ ಕಂತುಗಳನ್ನು ಕೊಡಲಾಗಿದೆ. ಮಂಗಳೂರು ವಿವಿ ಅಡಿಯಲ್ಲಿ 207 ಕಾಲೇಜುಗಳು, 2 ಘಟಕ ಕಾಲೇಜು, ಒಂದು ಸ್ನಾತಕೋತ್ತರ ಅಧ್ಯಯನ ಕೇಂದ್ರ, 5 ಸ್ವಾಯತ್ತ ಕಾಲೇಜುಗಳು, 38 ಸರ್ಕಾರಿ, 133 ಅನುದಾನರಹಿತ ಕಾಲೇಜುಗಳಿವೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್‌.ಯಡಿಪಡಿತ್ತಾಯ ತಿಳಿಸಿದರು.

ಆನ್‌ಲೈನ್ ದಾಖಲಾತಿ

ಈ ವರ್ಷ ಪದವಿ ಕಾಲೇಜುಗಳಿಗೆ ಆನ್‌ಲೈನ್ ಮೂಲಕ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ದಾಖಲಾತಿಗೆ ಪ್ರತ್ಯೇಕ ಪೋರ್ಟಲ್‌ ರಚಿಸಲಾಗಿದ್ದು, ಶೀಘ್ರವೇ ದಾಖಲಾತಿ ಪ್ರಕ್ರಿಯೆಗಳು ಆರಂಭವಾಗಲಿವೆ. ಆಫ್‌ಲೈನ್‌ ದಾಖಲಾತಿಗೆ ಇದುವರೆಗೂ ಸರ್ಕಾರದಿಂದ ನಿರ್ದೇಶನ ಬಂದಿಲ್ಲ ಎಂದು ತೆಂಕ ನಿಡಿಯೂರು ಸರ್ಕಾರಿ ಪದವಿ ಕಾಲೇಜು ಪ್ರಾಂಶುಪಾಲ ಗಣನಾಥ ಎಕ್ಕಾರು ತಿಳಿಸಿದರು.

‘ದಾಖಲಾತಿ ಶೇ 20ರಷ್ಟು ಹೆಚ್ಚಳ’

ಉಡುಪಿ ಜಿಲ್ಲೆಯಲ್ಲಿ 12 ಸರ್ಕಾರಿ ಪದವಿ ಕಾಲೇಜುಗಳಲ್ಲಿ 9,631 ವಿದ್ಯಾರ್ಥಿಗಳು, 13 ಅನುದಾನಿತ ಕಾಲೇಜುಗಳಲ್ಲಿ 12,400, 13 ಖಾಸಗಿ ಕಾಲೇಜುಗಳಲ್ಲಿ 2,986 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರ ಪೈಕಿ ಮೊದಲ ವರ್ಷದ ಪದವಿಯಲ್ಲಿ 8,000ದಷ್ಟು ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಶೇ 20ರಷ್ಟು ದಾಖಲಾತಿ ಹೆಚ್ಚಾಗಬಹುದು ಎಂಬ ನಿರೀಕ್ಷೆ ಕಾಲೇಜುಗಳ ಪ್ರಾಂಶುಪಾಲರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT