ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಡುಬಿದ್ರಿ | ಟೋಲ್ ನಿರ್ಮಾಣ ಕೈಬಿಡದಿದ್ದಲ್ಲಿ ಹೋರಾಟ

ಯದಯಾದ್ರಿ ದೇವಸ್ಥಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಒಕ್ಕೊರಲಿನಿಂದ ಎಚ್ಚರಿಸಿದ ಸಾರ್ವಜನಿಕರು
Published : 13 ಆಗಸ್ಟ್ 2024, 3:13 IST
Last Updated : 13 ಆಗಸ್ಟ್ 2024, 3:13 IST
ಫಾಲೋ ಮಾಡಿ
Comments

ಪಡುಬಿದ್ರಿ: ಕಂಚಿನಡ್ಕದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ನಿರ್ಮಾಣ ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ 40 ಹಳ್ಳಿಗಳ ಜನತೆ ಸೇರಿಕೊಂಡು ತೀವ್ರ ಹೋರಾಟ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದರು.

ಪಡುಬಿದ್ರಿ–ಕಾರ್ಕಳ ರಾಜ್ಯ ಹೆದ್ದಾರಿ 1ರಲ್ಲಿ ನಿರ್ಮಿಸಲು ಉದ್ದೇಶಿಸಿರುವ ಟೋಲ್ ವಿರುದ್ಧ ಇಲ್ಲಿನ ಯದಯಾದ್ರಿ ದೇವಸ್ಥಾನದಲ್ಲಿ ಸೋಮವಾರ ನಡೆದ ಜನಾಗ್ರಹ ಸಭೆಯಲ್ಲಿ ಒಕ್ಕೊರಲಿನಿಂದ ಈ ಅವರು ಆಗ್ರಹಿಸಿದರು.

10 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಈ ಹೆದ್ದಾರಿಯಲ್ಲಿ ಟೋಲ್‌ಗೆ ಅವಕಾಶ ನೀಡುವುದು ಬೇಡ. ಜನರ ವಿರೋಧದ ಮಧ್ಯೆಯೂ ಟೋಲ್ ನಿರ್ಮಿಸಿದಲ್ಲಿ 40 ಹಳ್ಳಿಗಳ ಜನರು ಸೇರಿ ಉಗ್ರ ಹೋರಾಟ ನಡೆಸಲಾಗುವುದು. ರಾಜ್ಯ ಸರ್ಕಾರ ಈ ಪ್ರಸ್ತಾವನೆ ಶೀಘ್ರ ಕೈಬಿಡಬೇಕು. ಇಲ್ಲದಿದ್ದಲ್ಲಿ ಮುಂದೆ ನಡೆಯುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಸಭೆಯಲ್ಲಿ ಎಚ್ಚರಿಸಲಾಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಈಗಾಗಲೇ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಟೋಲ್ ಕಾರ್ಯಾಚರಿಸುತ್ತಿದ್ದು, 5 ಕಿ.ಮೀ. ವ್ಯಾಪ್ತಿಯಲ್ಲಿ ರಾಜ್ಯ ಹೆದ್ದಾರಿಯಲ್ಲಿ ಟೋಲ್ ನಿರ್ಮಾಣ ಮಾಡುವ ಕ್ರಮ ಸರಿಯಲ್ಲ. ಯಾವುದೇ ಕಾರಣಕ್ಕೂ ಇನ್ನೊಂದು ಟೋಲ್‌ಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ನೀಡುವುದಿಲ್ಲ. ಎಲ್ಲರೂ ಈ ಹೋರಾಟಕ್ಕೆ ಪಕ್ಷ, ಧರ್ಮ ಮರೆತು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಬೆಳ್ಮಣ್ ಟೋಲ್ ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ಅವರನ್ನು ರಾಜ್ಯ ಹೆದ್ದಾರಿ ಟೋಲ್ ವಿರೋಧಿ ಹೊರಾಟ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮುಂದೆ ಸಭೆ ನಡೆಸಲು ತೀರ್ಮಾನಿಸಲಾಯಿತು.

ಸುಹಾಸ್‌ ಹೆಗ್ಡೆ ಮಾತನಾಡಿ, ಟೋಲ್ ನಿರ್ಮಾಣದಿಂದ ಜನರ ಮೇಲೆ ಹೊರೆಯಾಗಲಿದೆ. ‌ಜಿಲ್ಲಾಡಳಿತ ಕೂಡಲೇ ಟೋಲ್‌ ನಿರ್ಮಾಣ ಕಾರ್ಯ ಕೈಬಿಡಬೇಕು. ಇಲ್ಲದಿದ್ದಲ್ಲಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ನವೀನ್‌ಚಂದ್ರ ಜೆ.ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಮನಾಥ್ ಶೆಟ್ಟಿ, ಟ್ಯಾಕ್ಸಿಮೆನ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಕೆನರಾ ಬಸ್‌ ಮಾಲೀಕರ ಸಂಘದ ಜ್ಯೋತಿಪ್ರಸಾದ್ ಹೆಗ್ಡೆ, ಮಿಥುನ್ ಶೆಟ್ಟಿ ಮಾತನಾಡಿದರು. ರವಿ ಶೆಟ್ಟಿ, ನವೀನ್ ಎನ್.ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ನೀತಾ ಗುರುರಾಜ್, ದಿನೇಶ್ ಕೋಟ್ಯಾನ್, ರವಿ ಶೆಟ್ಟಿ, ಶಶಿಕಾಂತ್ ಪಡುಬಿದ್ರಿ, ಜ್ಯೋತಿ ಮೆನನ್, ರಮೀಝ್ ಹುಸೇನ್, ನಿಯಾಝ್, ಲಕ್ಷ್ಮಣ್ ಶೆಟ್ಟಿ, ವಕೀಲ ಸರ್ವಜ್ಞ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು.

ಗುತ್ತಿಗೆದಾರ ಕಂಪನಿಗೆ ತರಾಟೆ ಟೋಲ್ ನಿರ್ಮಾಣಕ್ಕೆ ವಿರೋಧದ ಮಧ್ಯೆಯೂ ಶನಿವಾರ ಗುದ್ದಲಿ ಪೂಜೆ ನಡೆಸಿದ್ದು ಸ್ಥಳೀಯರು ಗುತ್ತಿಗೆದಾರ ಕಂಪನಿಯನ್ನು ತರಾಟೆಗೆ ತೆಗೆದುಕೊಂಡು ವಾಪಾಸು ಕಳುಹಿಸಿದ್ದರು. ಸೋಮವಾರ ಮತ್ತೆ ಕಾಮಗಾರಿಗಾಗಿ ಸರಕುಗಳನ್ನು ಟೆಂಪೊದಲ್ಲಿ ಹೇರಿಕೊಂಡು ಬಂದಿದ್ದು ಸ್ಥಳೀಯರು ವಿಚಾರಿಸಿದಾಗ ಟೋಲ್ ನಿರ್ಮಾಣಕ್ಕೆಂದು ತಿಳಿದು ಚಾಲಕರನ್ನು ತರಾಟೆಗೆ ತೆಗೆದುಕೊಂಡು ವಾಪಾಸು ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT