ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ.27ರಿಂದ ಮಲ್ಪೆ ತೀರದಲ್ಲಿ ‘ಪರ್ಯಟನ್ ಪರ್ವ’, ವೈನ್‌ ಮೇಳ, ಆಹಾರ ಉತ್ಸವ ಆಕರ್ಷಣೆ

ನಾಲ್ಕು ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮ
Last Updated 25 ಸೆಪ್ಟೆಂಬರ್ 2018, 11:57 IST
ಅಕ್ಷರ ಗಾತ್ರ

ಉಡುಪಿ: ಸೆ.27ರಿಂದ 30ರವರೆಗೆ ಮಲ್ಪೆ ಬೀಚ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ‘ಪರ್ಯಟನ್‌ ಪರ್ವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಅನಿತಾ ಭಾಸ್ಕರ್ ತಿಳಿಸಿದರು.

ಮಣಿಪಾಲದ ಕಂಟ್ರಿಇನ್‌ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಜಿಲ್ಲಾಡಳಿತ, ಮಲ್ಪೆ ಅಭಿವೃದ್ಧಿ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಮಲ್ಪೆ ಬೀಚ್‌ನಲ್ಲಿ ಸೆ.27ರಂದು ಸಂಜೆ 6.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರವಾಸೋದ್ಯಮ ಸಚಿವ ಸಾರಾ.ಮಹೇಶ್, ಶಾಸಕ ಕೆ.ರಘುಪತಿ ಭಟ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದರು.

‘ಪ್ರವಾಸೋದ್ಯಮ ಹಾಗೂ ಡಿಜಿಟಲ್ ರೂಪಾಂತರ’ ಪ್ರಸಕ್ತ ಸಾಲಿನ ವಿಶ್ವ ಪ್ರವಾಸೋದ್ಯಮ ದಿನದ ಸಂದೇಶವಾಗಿದ್ದು, ಈ ಥೀಮ್‌ ಅಡಿಯಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವುದು, ಹೆಚ್ಚಿನ ಬಂಡವಾಳ ಹರಿಯುವಿಕೆಗೆ ಜಾಗತಿಕ ಉದ್ಯಮ ಪಾಲುದಾರಿಕೆಗೆ ಆದ್ಯತೆ ನೀಡುವುದು, ಬಂಡವಾಳದಾರರನ್ನು ಆಕರ್ಷಿಸುವುದು ಹಾಗೂ ಸುಸ್ಥಿರ ಪ್ರವಾಸೋದ್ಯಮದಲ್ಲಿ ತಂತ್ರಜ್ಞಾನದ ಪಾತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಫುಲ ಅವಕಾಶಗಳಿದ್ದು, ದೇಶಿ–ವಿದೇಶಿ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಳೆದವರ್ಷ ‘ಉಡುಪಿ ಪರ್ಬ’ ನಡೆಸಲಾಗಿತ್ತು. ಈ ವರ್ಷ ಪರ್ಯಟನ್‌ ಪರ್ವ ಹಮ್ಮಿಕೊಳ್ಳಲಾಗಿದೆ. ‘ಟೂರಿಸಂ ಫಾರ್ ಆಲ್‌’ ಕಾರ್ಯಕ್ರಮದ ಉದ್ದೇಶ ಎಂದರು.

ನದಿಯ ಹಿನ್ನೀರಿನಲ್ಲಿ ‘ಹೆರಿಟೇಜ್‌ ಬೋಟ್‌ ಸೇಲ್‌’ ಎಂಬ ವಿನೂತನ ಕಾರ್ಯಕ್ರಮ, ಬೋಟ್‌ನಲ್ಲಿ ಕರಾವಳಿ ಕಲೆಯನ್ನು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಆಹಾರ ಮೇಳದಲ್ಲಿ ತರಹೇವಾರಿ ಸೀಫುಡ್‌ಗಳು ದೊರೆಯಲಿದೆ. ವೈನ್‌ ಮೇಳ ಪ್ರಮುಖ ಆಕರ್ಷಣೆಯಾಗಿದ್ದು, ಬಗೆಬಗೆಯ ವೈನ್‌ ಸ್ವಾದವನ್ನು ಪ್ರವಾಸಿಗರು ಸವಿಯಬಹುದು. ‘ಹಂಪಿ ಬಜಾರ್’ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ ಎಂದರು.

ಸೆ.30ರಂದು ಬೆಳಿಗ್ಗೆ 7ಕ್ಕೆ ಬೀಚ್‌ ಯೋಗ, ಮಲ್ಪೆ, ಕಾಪು, ಪಡುಬಿದ್ರಿ, ಕುಂದಾಪುರ, ಕೋಡಿ ಬೀಚ್‌ಗಳಲ್ಲಿ ಸೆ.27ರಿಂದ30ರವರೆಗೆ ಬೆಳಿಗ್ಗೆ 7.30 ರಿಂದ 10.30ರವರೆಗೆ ಸರ್ಫಿಂಗ್ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೋಟೇಶ್ವರ ಹೆಲಿಪ್ಯಾಡ್ ಗ್ರೌಂಡ್‌ನಲ್ಲಿ ಸೆ.30ರಂದು ಬೆಳಿಗ್ಗೆ 8ಕ್ಕೆ ರಿಮೋಟ್ ಕಂಟ್ರೋಲ್ ಏರ್‌ ಶೋ, ಸ್ವಚ್ಛತಾ ಹೀ ಸೇವಾ, ಸ್ವಚ್ಛತಾ ಪಕ್ವಾಡ’ ಯೋಜನೆಯಡಿ ಬೀಚ್‌ಗಳನ್ನು ಸ್ವಚ್ಛಗೊಳಿಸಲಾಗುವುದು ಎಂದರು.

ಕರಾವಳಿ ಪ್ರವಾಸೋದ್ಯಮ ಸಂಘಟನೆ ಅಧ್ಯಕ್ಷ ಮನೋಹರ್ ಶೆಟ್ಟಿ ಮಾತನಾಡಿ, ನಿರುದ್ಯೋಗ ನಿವಾರಣೆ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಯಾಗಬೇಕು. ಜಿಲ್ಲೆಯಲ್ಲಿ ಪ್ರಸಿದ್ಧ ಬೀಚ್‌ಗಳು, ನದಿಗಳು, ಪಶ್ಚಿಮಘಟ್ಟ ಸೇರಿದಂತೆ ಪ್ರವಾಸಿಗರನ್ನು ಸೆಳೆಯಲು ಬೇಕಾದ ಎಲ್ಲ ಸೌಕರ್ಯಗಳಿವೆ. ಇದನ್ನೆಲ್ಲ ಬಳಸಿಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ಕೈಜೋಡಿಸಬೇಕು ಎಂದರು.

ಈ ಸಂದರ್ಭ ನಗರಸಭೆ ಆಯುಕ್ತ ಜನಾರ್ಧನ್‌, ಎನ್‌ಐಸಿಎಫ್ ನಿರ್ದೇಶಕ ಡಾ.ಜಗನ್ನಾಥನ್, ಉದಯ್ ಕುಮಾರ್ ಶೆಟ್ಟಿ, ವಿವಿಎಫ್‌ಐನ ರಂಜಿತ್ ಮಾರ್ಟಿನ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT