ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಸಾಧಾರಣ ಕಾರುಣ್ಯದ ಯತಿ ವಿಶ್ವೇಶತೀರ್ಥ ಶ್ರೀ‘

ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಸ್ಮರಣೆ
Last Updated 17 ಡಿಸೆಂಬರ್ 2020, 16:02 IST
ಅಕ್ಷರ ಗಾತ್ರ

ಉಡುಪಿ: ಕತ್ತಲೆಯ ಹಾದಿಯಲ್ಲಿ ಪಯಣಿಸಲು ದಾರಿದೀಪ ಎಷ್ಟು ಮುಖ್ಯವೊ, ಜೀವನದ ಹಾದಿಯಲ್ಲಿ ಎಡವದೆ ಸಾಗಲು ವಿಶ್ವೇಶತೀರ್ಥ ಶ್ರೀಗಳ ಚಿಂತನೆಗಳು ಮುಖ್ಯ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕೃಷ್ಣಮಠದ ರಾಜಾಂಗಣದಲ್ಲಿ ಪೇಜಾವರ ವಿಶ್ವೇಶತೀರ್ಥ ಗುರುಗಳ ಪ್ರಥಮ ಆರಾಧನೆಯ ಪ್ರಯುಕ್ತ ಹಮ್ಮಿಕೊಂಡಿದ್ದ ‘ಸಂಸ್ಮರಣಾ ಕಾರ್ಯಕ್ರಮ'ದಲ್ಲಿ ಮಾತನಾಡಿದ ಅವರು, ಮನೆಯ ನಿರ್ವಹಣೆಯೇ ಬಹುದೊಡ್ಡ ಸವಾಲಾಗಿರುವಾಗ ಕಾಲದಲ್ಲಿ, ಗುರುಗಳಾದ ವಿಶ್ವೇಶತೀರ್ಥರು ಮಠಾಧಿಪತಿಯ ಒತ್ತಡವನ್ನು ನಿಭಾಯಿಸುವುದರ ಜತೆಗೆ, ಸಾಮಾಜಿಕ, ರಾಜಕೀಯವಾಗಿ ಸಕ್ರಿಯವಾಗಿದ್ದರು. ಎಂತಹ ಸಮಸ್ಯೆಗಳು ಎದುರಾದರೂ ಸುಲಭವಾಗಿ ಪರಿಹರಿಸುತ್ತಿದ್ದರು ಎಂದರು.

ದುಃಖವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡದೆ ಜೀರ್ಣಿಸಿಕೊಂಡು ಸಮಸ್ಯೆಗೆ ಪರಿಹಾರ ನೀಡುವ ಗುಣ ಶ್ರೀಗಳಲ್ಲಿ ವಿಶೇಷವಾಗಿತ್ತು. ಸದಾ ಸಂಚಾರದಲ್ಲಿ ಇದ್ದರೂ ಅನುಷ್ಠಾನಗಳನ್ನು ಎಂದೂ ಮರೆತವರಲ್ಲ. ಸ್ಮರಣ ಶಕ್ತಿಯೂ ಅಗಾಧವಾಗಿತ್ತು. ಸಮಷ್ಠಿಯಾಗಿ ಮುಂದುವರಿಯಬೇಕು ಎಂಬ ಅವರ ಗುಣ ಮಠಾಧೀಶರಿಗೆ ಮಾದರಿ. ಅವರಿದ್ದಷ್ಟು ಕಾಲ ಅವರಿಂದ ಸಿಕ್ಕ ಮಾರ್ಗದರ್ಶನ ಮುಂದಿನ ಆಧ್ಯಾತ್ಮದ ಜೀವನಕ್ಕೆ ಬೆಳಕಿನಂತೆ ಎಂದರು.

ಯಾವುದೇ ಮಗ್ಗುಲಿನಿಂದ ನೋಡಿದರೂ ವಿಶ್ವೇಶತೀರ್ಥರದ್ದು ಬಹಳ ದೊಡ್ಡ ವ್ಯಕ್ತಿತ್ವ. ಅವರ ಬರಹಗಳು, ವಿದ್ವತ್‌ ಎಲ್ಲರಿಗೂ ಮಾರ್ಗದರ್ಶನ. ಪೇಜಾವ ಶ್ರೀಗಳು ದೈಹಿಕವಾಗಿ ಇಲ್ಲ ಎಂಬ ಕೊರಗನ್ನು ಬಿಟ್ಟು, ಅವರ ಸ್ಮರಣೆ ಹಾಗೂ ಚಿಂತನೆಗಳೊಂದಿಗೆ ಬದುಕೋಣ ಎಂದು ಭಕ್ತರಿಗೆ ಸಲಹೆ ನೀಡಿದರು.

ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ವ್ಯಕ್ತಿಯೊಬ್ಬರು ನಿರ್ಧಿಷ್ಟ ಕ್ಷೇತ್ರದಲ್ಲಿ ಬೆಳಗುವುದು ಸಾಮಾನ್ಯ. ಆದರೆ, ಪೇಜಾವರ ಶ್ರೀಗಳು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಬೆಳಗಿದವರು. ಅವರ ಬದುಕು ಅಚ್ಚರಿ ಹಾಗೂ ಕುತೂಹಲಗಳ ಮಿಶ್ರಣ ಎಂದರು.

13 ವರ್ಷಗಳ ಶ್ರೀಗಳ ಒಡನಾಟದಲ್ಲಿ ಸಿಕ್ಕ ಮಾರ್ಗದರ್ಶನ, ಸಲಹೆಗಳು ಸ್ಮರಣೀಯ. ಕಿರಿಯರನ್ನು ಪ್ರೀತಿಸುವ, ಮಠಾಧೀಶರನ್ನು ಒಟ್ಟಾಗಿ ಕರೆದೊಯ್ಯುವ ಅವರ ಗುಣ ಆದರ್ಶಪ್ರಾಯವಾದುದು. ಅವರ ಪ್ರತಿ ಭಗವಂತನ ಅನುಗ್ರಹ ಇತ್ತು ಎಂದು ಸ್ಮರಿಸಿದರು.

ಸುಬ್ರಹ್ಮಣ್ಯದ ಸಂಪುಟ ಶ್ರೀನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಪೇಜಾವರ ಶ್ರೀಗಳದ್ದು ಸ್ಥಾಯಿಭಾವವಲ್ಲ; ಸಂಚಾರಿ ಭಾವ. ಚಾತುರ್ಮಾಸ್ಯ ಹೊರತುಪಡಿಸಿ ಸದಾ ಸಂಚಾರದಲ್ಲಿಯೇ ಇರುತ್ತಿದ್ದರು. ಸದಾ ಚಲನಶೀಲ ವ್ಯಕ್ತಿತ್ವದ ಶ್ರೀಗಳು ದಿನಕ್ಕೆ 6,000 ಕಿ.ಮೀ ಸಂಚಾರ ಮಾಡುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದರು ಎಂದರು.

ವಯೋ ಸಹಜ ಮರೆವಿನ ಸಮಸ್ಯೆ ಶ್ರೀಗಳ ಬಳಿ ಸುಳಿಯಲಿಲ್ಲ. ನ್ಯಾಯಶಾಸ್ತ್ರ, ವೇದಾಂತ ಶಾಸ್ತ್ರ ಸೇರಿದಂತೆ ಶಾಸ್ತ್ರೀಯ ಸಮಸ್ಯೆಗಳು ಎದುರಾದಾಗ ಅವುಗಳನ್ನು ಕ್ಷಣಮಾತ್ರದಲ್ಲಿ ಬಗೆಹರಿಸುತ್ತಿದ್ದ ಅವರ ಚಾಕಚಕ್ಯತೆ ಎಲ್ಲರನ್ನೂ ನಿಬ್ಬೆರಗುಗೊಳಿಸುತ್ತಿತ್ತು. ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರದ ಜತೆಗೆ ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗಿದ್ದ ಶ್ರೀಗಳು ಅಸಾಧರಣ ಕಾರುಣ್ಯ ಹೊಂದಿದ್ದ ಯತಿಗಳು ಎಂದು ಸ್ಮರಿಸಿದರು.

ಪೇಜಾವರ ಶ್ರೀಗಳು ಅಸ್ತಂಗತರಾಗಿ ಒಂದು ವರ್ಷ ಕಳೆಯುತ್ತ ಬಂದಿದೆ. ಈ ಸಂದರ್ಭದಲ್ಲಿ ಅವರ ಚಿಂತನೆಗಳನ್ನು ಸ್ಮರಿಸೋಣ. ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯೋಣ ಎಂದು ಭಕ್ತರಿಗೆ ಸಲಹೆ ನೀಡಿದರು.‌

ಮಧ್ಯಾಹ್ನ ನಡೆದ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಶಿಷ್ಯರಾದ ಸಗ್ರಿ ಆನಂದತೀರ್ಥ ಮತ್ತು ವಿ.ಎಂ.ಎಲ್.ಸಾಮಗ ಅವರು ಗುರುಗಳೊಂದಿಗಿನ ಒಡನಾಟವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT