ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೆರ್ಡೂರು: ‘ಮದುಮಕ್ಕಳ ಜಾತ್ರೆ’ ಸಂಪನ್ನ

ಕದಳೀಪ್ರಿಯ ಅನಂತಪಧ್ಮನಾಭ ಸನ್ನಿಧಿಯಲ್ಲಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯ
Published 18 ಆಗಸ್ಟ್ 2024, 6:23 IST
Last Updated 18 ಆಗಸ್ಟ್ 2024, 6:23 IST
ಅಕ್ಷರ ಗಾತ್ರ

ಹಿರಿಯಡ್ಕ: ಉಡುಪಿ ತಾಲ್ಲೂಕಿನ ಬಾಳೆಹಣ್ಣಿಗೊಲಿದ ಭಗವಂತ ಖ್ಯಾತಿಯ ಕದಳೀಪ್ರಿಯ ಪೆರ್ಡೂರು ಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಶನಿವಾರ ಸಿಂಹ ಸಂಕ್ರಮಣದ ಪ್ರಯುಕ್ತ ಮದುಮಕ್ಕಳ ಜಾತ್ರೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

ಸಿಂಹ ಸಂಕ್ರಮಣ ವಿಶೇಷ: ವರ್ಷದ 12 ಸಂಕ್ರಮಣದ ಆಚರಣೆ ಪೆರ್ಡೂರಿನಲ್ಲಿ ಇದ್ದು, ಅದರಲ್ಲಿ ಸಿಂಹ ಸಂಕ್ರಮಣ ಬಹಳ ವಿಶೇಷ. ಈ ದಿನದಂದು ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವದಂಪತಿಗಳು ಬಂದು ಅನಂತ ಪದ್ಮನಾಭ ದೇವರ ದರ್ಶನ ಮಾಡಿ ಹೋಗುವ ಸಂಪ್ರದಾಯ ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಹಾಗಾಗಿ ಇದು ಮದುಮಕ್ಕಳ ಜಾತ್ರೆ ಎಂದು ಪ್ರಸಿದ್ಧ.

ಉಡುಪಿ ಸೇರಿದಂತೆ ನೆರೆಯ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಬರುವುದು ಇಲ್ಲಿಯ ವಿಶೇಷ. ಮದುಮಗ ಮನೆಯ ಹಿರಿಯರೊಂದಿಗೆ, ಮದುಮಗಳು ಪೋಷಕರೊಂದಿಗೆ ಬಂದು ಜೊತೆಯಾಗಿ ಅನಂತ ಪದ್ಮನಾಭ ದೇವರ ದರ್ಶನ ಪಡೆದು ಅಲ್ಲಿಂದ ಗಂಡನ ಮನೆಗೆ ತೆರಳುವುದು ಈ ಸಂಕ್ರಮಣದ ವಿಶೇಷವಾಗಿದೆ.

ಸಾವಿರಾರು ವರ್ಷಗಳಿಂದ ಭಕ್ತರಿಂದ ಇಷ್ಟಾರ್ಥ ಈಡೇರಿಕೆಗಾಗಿ ಬಾಳೆಹಣ್ಣಿನ ಸೇವೆ ನಡೆದು ಬರುತ್ತಿದ್ದು ಸಾವಿರ ಬಾಳೆಹಣ್ಣು ಸೇವೆ, 500 ಬಾಳೆಹಣ್ಣು ಸೇವೆ, ದಿನಕ್ಕೊಂದು ಬಾಳೆಹಣ್ಣು, ಸಿಬ್ಲಹಣ್ಣು ಹೀಗೆ ಭಕ್ತರು ಇಷ್ಟಾರ್ಥಗಳನ್ನು ಪೂರೈಸಲು ವಿವಿಧ ರೀತಿಯ ಬಾಳೆಹಣ್ಣಿನ ಸೇವೆ ಸಲ್ಲಿಸುತ್ತಾರೆ.

ಈ ಬಾರಿ 30 ಸಾವಿರಕ್ಕೂ ಅಧಿಕ ಬಾಳೆಹಣ್ಣು ಸೇವೆ ನಡೆಯಿತು. 200ಕ್ಕೂ ಅಧಿಕ ಬಾಳೆಗೊನೆ ಸಮರ್ಪಣೆ ನಡೆಯಿತು. 150ಕ್ಕೂ ಅಧಿಕ ಸತ್ಯನಾರಾಯಣ ಪೂಜಾ ಸೇವೆ ನಡೆಯಿತು. ಮಳೆ ವಿರಾಮ ನೀಡಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು. 50 ಸಾವಿರಕ್ಕೂ ಅಧಿಕ ಭಕ್ತರು ಬಂದಿದರು. ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತ್ತು. ನೂಕುನುಗ್ಗಲು ಆಗದಂತೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಲಭ ದರ್ಶನ ವ್ಯವಸ್ಥೆ ದೇವಸ್ಥಾನದ ವತಿಯಿಂದ ಮಾಡಲಾಗಿತ್ತು. ಮಧ್ಯಾಹ್ನ ದೇವಸ್ಥಾನದ ಭೋಜನ ಶಾಲೆಯಲ್ಲಿ, ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು
ದೇವರ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು
ಭಕ್ತರಿಂದ ದೇವರಿಗೆ ಬಾಳೆಹಣ್ಣು ಸಮರ್ಪಣೆ
ಭಕ್ತರಿಂದ ದೇವರಿಗೆ ಬಾಳೆಹಣ್ಣು ಸಮರ್ಪಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT