ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಮರಳು ಪೂರೈಕೆಗೆ ಬದ್ಧ: ಡಿಸಿ

Last Updated 19 ಡಿಸೆಂಬರ್ 2019, 15:39 IST
ಅಕ್ಷರ ಗಾತ್ರ

ಉಡುಪಿ: ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ, 94 ‘ಸಿ’ ಅಡಿ ಹಕ್ಕುಪತ್ರ ಸಿಗುತ್ತಿಲ್ಲ, ಮರಳಿನ ಅಲಭ್ಯತೆ, ಚರಂಡಿ ಅವ್ಯವಸ್ಥೆ, ಗ್ರಾಮಕ್ಕೆ ರಸ್ತೆ ಇಲ್ಲ, ಕಸ ವಿಲೇವಾರಿ ಸಮರ್ಪಕವಾಗಿಲ್ಲ...ಹೀಗೆ ‘ಪ್ರಜಾವಾಣಿ‌’ ಕಚೇರಿಯಲ್ಲಿ ಗುರುವಾರ ನಡೆದ ‘ಫೋನ್‌ ಇನ್’ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಯ ಬಳಿ ದೂರುಗಳ ಸುರಿಮಳೆ ಸುರಿಸಿದರು.

ಅಹವಾಲುಗಳನ್ನು ಸಮಾಧಾನವಾಗಿ ಆಲಿಸಿದ ಡಿಸಿ, ನಿಗಧಿತ ಅವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. ಎಲ್ಲ ದೂರುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು. ಫೋನ್‌ ಇನ್ ಪ್ರಶ್ನೋತ್ತರದ ವಿವರ ಹೀಗಿದೆ.

ಸದಾಶಿವ ಪ್ರಭು, ಹೆಬ್ರಿ

ಪ್ರಶ್ನೆ: ಹೆಬ್ರಿ ಕಾಲೇಜು ಕ್ಯಾಂಪಸ್‌ನಲ್ಲಿ ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ, ಪಕ್ಕದಲ್ಲೇ 12.5 ಎಕರೆ ಸರ್ಕಾರಿ ಜಾಗ ಇದ್ದರೂ ಬಳಕೆ ಮಾಡಿಲ್ಲ.

ಉತ್ತರ: ಈ ವಿಚಾರವಾಗಿ ಖುದ್ದು ಸ್ಥಳಕ್ಕೆ ಭೇಟಿನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಹೆಬ್ರಿ ಕಾಲೇಜು ಕ್ಯಾಂಪಸ್‌ ಪಕ್ಕದಲ್ಲಿ ಸರ್ಕಾರಿ ಜಾಗದ ಲಭ್ಯತೆ ಇಲ್ಲದಿರುವ ಮಾಹಿತಿ ಸಿಕ್ಕಿದೆ. ಆದರೂ, ಮತ್ತೊಮ್ಮೆ ತಹಶೀಲ್ದಾರ್ ಬಳಿ ಮಾಹಿತಿ ಪಡೆಯುತ್ತೇನೆ.

ಶ್ರೀಧರ್ ಶೆಟ್ಟಿ, ಬೆಳ್ವೆ

ಪ್ರಶ್ನೆ: ಹಿಂದೆ, ಬೆಳ್ವೆ ಪಂಚಾಯಿತಿ ಕುಂದಾಪುರ ತಾಲ್ಲೂಕು ವ್ಯಾಪ್ತಿಗೆ ಒಳಪಟ್ಟಿತ್ತು. ಈಗ ಹೆಬ್ರಿಗೆ ಸೇರ್ಪಡೆಯಾಗಿದೆ. ಅಕ್ರಮ ಸಕ್ರಮ ಅರ್ಜಿ ಯಾವ ಸಮಿತಿಗೆ ದಾಖಲಿಸುವುದು?

ಹೆಬ್ರಿ ತಾಲ್ಲೂಕಿನಲ್ಲಿ ಅಕ್ರಮ ಸಕ್ರಮ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಕುಂದಾಪುರಕ್ಕೆ ಅರ್ಜಿ ಸಲ್ಲಿಸಿದ್ದರೂ ಆತಂಕ ಬೇಡ. ಅಲ್ಲಿಂದ ಅರ್ಜಿಗಳನ್ನು ಹೆಬ್ರಿಗೆ ತರಿಸಿಕೊಳ್ಳಲಾಗುವುದು. ಅಕ್ರಮ ಸಕ್ರಮ ಸಮಿತಿಗೆ ಸದಸ್ಯರನ್ನು ನೇಮಕಮಾಡುವಂತೆ ಸರ್ಕಾರಕ್ಕೆ ವರದಿ ನೀಡಲಾಗಿದ್ದು, 15 ದಿನಗಳಲ್ಲಿ ಸಮಿತಿ ರಚನೆಯಾಗಲಿದೆ.

ಅನಂತ ಪ್ರಸಾದ್‌, ಮುದ್ರಾಡಿ, ಕಾರ್ಕಳ

ಪ್ರಶ್ನೆ: 24 ವರ್ಷಗಳಿಂದ ವಾಸವಿದ್ದರೂ ಹಕ್ಕುಪತ್ರ ಸಿಕ್ಕಿಲ್ಲ. ಅಧಿಕಾರಿಗಳು ಡೀಮ್ಡ್‌ ಫಾರೆಸ್ಟ್‌ ಕಾರಣ ನೀಡುತ್ತಿದ್ದಾರೆ?

ಡೀಮ್ಡ್‌ ಫಾರೆಸ್ಟ್‌ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದು, ಹಕ್ಕುಪತ್ರ ಕೊಡಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪು ಹೊರಬಿದ್ದ ನಂತರ, ತೀರ್ಪಿನ ಅನ್ವಯ ಕ್ರಮ ತೆಗೆದುಕೊಳ್ಳಲಾಗುವುದು.

ಚಂದ್ರ ಜೋಗಿ, ಹಂಪಾರು

ಪ್ರಶ್ನೆ: ಕಂಡ್ಲೂರಿನಲ್ಲಿ ಅಗತ್ಯ ಪ್ರಮಾಣದ ಮರಳು ಸಿಗುತ್ತಿಲ್ಲ.

ಸಾರ್ವನಿಕರಿಗೆ ಮರಳು ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

ರಾಘವೇಂದ್ರ ಕೊಠಾರಿ, ಕೆರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ

ಪ್ರಶ್ನೆ: ಮೂಡ್ಗಲ್‌ ಗುಹಾಂತರ ದೇವಾಲಯಕ್ಕೆ ಹೋಗಲು ಸರಿಯಾದ ರಸ್ತೆ ಇಲ್ಲ, ಯಾತ್ರಾತ್ರಿಗಳಿಗೆ ಸಮಸ್ಯೆಯಾಗಿದೆ ?

ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತದ ಬಳಿ ಅನುದಾನ ಇರುವುದಿಲ್ಲ. ಪಂಚಾಯತ್ ರಾಜ್ ಇಲಾಖೆಯಿಂದ ರಸ್ತೆ ಕಾಮಗಾರಿ ಮಾಡಿಸಬಹುದು. ಈ ಕುರಿತು ಸಿಇಒ ಜತೆ ಮಾತನಾಡುತ್ತೇನೆ. ರಸ್ತೆ ಅರಣ್ಯದೊಳಗೆ ಇದ್ದರೆ ಅನುಮತಿ ಬೇಕಾಗುತ್ತದೆ. ಎನ್‌ಆರ್‌ಇಜಿ ಅನುದಾನವನ್ನು ರಸ್ತೆ ನಿರ್ಮಾಣಕ್ಕೆ ಬಳಸಬಹುದು. ಈ ಬಗ್ಗೆ ಪಂಚಾಯಿತಿ ಗಮನಹರಿಸಬೇಕು.

ವಿಜಯಶೆಟ್ಟಿ, ಅಂಬಲಪಾಡಿ ಉಡುಪಿ

ಪ್ರಶ್ನೆ: ಕಪ್ಪೆಟ್ಟು ಪರಿಸರದಲ್ಲಿ ಒಳಚರಂಡಿ ಅವ್ಯವಸ್ಥೆಯಿಂದ ಬಾವಿಗಳು ಹಾಳಾಗಿವೆ.

ಕೂಡಲೇ ಪೌರಾಯುಕ್ತರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು.

ರವಿ ಬ್ರಹ್ಮಾವರ

ಪ್ರಶ್ನೆ: ಹಾರಾಡಿ ಗ್ರಾಮ ಪಂಚಾಯಿತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಹಾಕಿ 12 ವರ್ಷ ಕಳೆದಿದೆ, ಹಂಚಿಕೆ ಆಗಿಲ್ಲ.

ಈಗಾಗಲೇ 60ಕ್ಕೂ ಹೆಚ್ಚು ಪಂಚಾಯಿತಿಗಳಿಗೆ ಭೂಮಿ ನೀಡಲಾಗಿದೆ. ಉಳಿದ ಎಲ್ಲ ಪಂಚಾಯಿತಿಗಳಿಗೆ ಭೂಮಿ ಗುರುತಿಸುವಂತೆ ಸೂಚನೆ ನೀಡಲಾಗಿದ್ದು, ನಿವೇಶನ ಇಲ್ಲದವರನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಬಳಿಕ ಹಕ್ಕುಪತ್ರ ವಿತರಿಸಲಾಗುವುದು.

ಸದಾನಂದ ಶೆಟ್ಟಿ, ಸಂತೆಕಟ್ಟೆ ಗೋಪಾಲಪುರ

ಪ್ರಶ್ನೆ: ಗೋಪಾಲಪುರ 4ನೇ ರಸ್ತೆಯಲ್ಲಿರುವ ಸಾಯಿರಾಂ ಕಾಂಪ್ಲೆಕ್ಸ್‌ನ ಒಳಚರಂಡಿ ತ್ಯಾಜ್ಯದಿಂದ ರಸ್ತೆ ಹರಿಯುತ್ತಿದೆ. ನಗರಸಭೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಕಚೇರಿಗೆ ಬಂದು ಮತ್ತೆ ದೂರು ನೀಡುವ ಅವಶ್ಯಕತೆ ಇಲ್ಲ. ಪೌರಾಯುಕ್ತರ ಬಳಿ ಮಾತನಾಡಿ, ಸಮಸ್ಯೆ ಬಗೆಹರಿಸಲಾಗುವುದು.

ಸುಜಾತಾ ಕಾಮತ್‌, ಕಾರ್ಕಳ

ಪ್ರಶ್ನೆ: 84 ವರ್ಷಗಳಿಂದ ವಾಸವಾಗಿದ್ದು, 94 ಸಿ ಸಿ ಅಡಿ ಹಕ್ಕುಪತ್ರಕ್ಕೆ ಅರ್ಜಿ ಹಾಕಿದ್ದೇನೆ. ಅಧಿಕಾರಿಗಳು ಬೆಂಗಳೂರಿಗೆ ಹೋಗಿ ವಿಚಾರಿಸುವಂತೆ ಹೇಳುತ್ತಿದ್ದಾರೆ.

ಬೆಂಗಳೂರಿಗೆ ಹೋಗುವ ಅವಶ್ಯಕತೆ ಇಲ್ಲ. 94 ಸಿಸಿ ಅಡಿ ಅರ್ಜಿ ವಿಲೇವಾರಿ ಅಧಿಕಾರ ತಹಶೀಲ್ದಾರ್‌ಗೆ ಇದೆ. ಕಾರ್ಕಳ ತಹಶೀಲ್ದಾರ್ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು.

ಸತೀಶ್‌, ಕಟಪಾಡಿ

ಪ್ರಶ್ನೆ: ಮರಳು ಸಾಗಾಟ ಮಾಡುವ ವಾಹನವಿದೆ. ಕೆಲವರು ದಕ್ಕೆಯಲ್ಲಿ ಮರಳು ತುಂಬಲು ಅವಕಾಶ ಕೊಡುತ್ತಿಲ್ಲ.

ಜ.1ರಿಂದ ಉಡುಪಿ ಈ ಸ್ಯಾಂಡ್‌ ಆ್ಯಪ್‌ ಮೂಲಕ ಮರಳು ಹಂಚಿಕೆ ನಡೆಯುತ್ತದೆ. ಎಲ್ಲ ವಾಹನಗಳಿಗೂ ಮರಳು ಸಾಗಾಟಕ್ಕೆ ಅನುಮತಿ ಸಿಗಲಿದೆ. ಯಾರಾದರೂ ಬೆದರಿಕೆ ಹಾಕಿದರೆ ತಕ್ಷಣ ದೂರು ಕೊಡಿ, ಕಾನೂನು ಕ್ರಮ ಜರುಗಿಸಲಾಗುವುದು.

ಸುರೇಶ್ ಪೂಜಾರಿ, ಸಾಲಿಗ್ರಾಮ

ಪ್ರಶ್ನೆ: ಮನೆಕಟ್ಟಲು ಪರವಾನಗಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಆ್ಯಪ್‌ ವ್ಯವಸ್ಥೆಯೇ ಪಂಚಾಯಿತಿಯಲ್ಲಿ ಜಾರಿಗೆ ಬಂದಿಲ್ಲ.

ಆನ್‌ಲೈನ್‌ನಲ್ಲಿಯೇ ಮನೆಕಟ್ಟಲು ಪರವಾನಗಿ ಪಡೆಯಬೇಕು. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿ ತಾಂತ್ರಿಕ ಸಮಸ್ಯೆ ಬಗೆಹರಿಸಲಾಗುವುದು.

ಗೋಪಾಲ್‌, ಉಪ್ಪುಂದ

ಪ್ರಶ್ನೆ: ‘ಡಿ’ ದರ್ಜೆ ನೌಕರನಾಗಿ ಕೆಲಸ ಮಾಡುತ್ತಿದ್ದೇನೆ. ಕೆಲಸ ಕಾಯಂ ಮಾಡಿದರೆ ಅನುಕೂಲವಾಗುತ್ತದೆ.

ಉಸ್ತುವಾರಿ ಸಚಿವರಿಗೆ ಹಾಗೂ ಕಾರ್ಮಿಕ ಇಲಾಖೆಗೆ ಕೆಲಸ ಕಾಯಂಗೆ ಅರ್ಜಿ ಸಲ್ಲಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT