ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆಗಳಿಗೆ ವಾಲಿಬಾಲ್ ಟೂರ್ನಿಯ ಯಶಸ್ಸು ಉತ್ತರ

‘ಪ್ರಜ್ಞಾ ಗೌರವ’ ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ
Last Updated 7 ಜನವರಿ 2023, 14:44 IST
ಅಕ್ಷರ ಗಾತ್ರ

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಹಾಗೂ ಕ್ರೀಡೆಗೆ ಸಮಾನ ಪ್ರಾಮುಖ್ಯ ನೀಡಿದರೆ ಆರೋಗ್ಯವಂತ ದೇಹ ಹಾಗೂ ಮನಸ್ಸು ರೂಪುಗೊಳ್ಳುತ್ತದೆ ಎಂದು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಕಿವಿಮಾತು ಹೇಳಿದರು.

ನಗರದ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಟೂರ್ನಿಯ ಭಾಗವಾಗಿ ಆಯೋಜಿಸಿದ್ದ ‘ಪ್ರಜ್ಞಾ ಗೌರವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದಕ್ಷಿಣದ ರಾಜ್ಯಗಳಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಟೂರ್ನಿ ಆಯೋಜನೆಗೆ ಆರಂಭದಲ್ಲಿ ಅಪಸ್ವರಗಳು ಕೇಳಿಬಂದಿದ್ದವು. ಇದರಿಂದ ದೃತಿಗೆಡದೆ ಸವಾಲನ್ನು ಸ್ವೀಕರಿಸಿದ ಪೂರ್ಣಪ್ರಜ್ಞ ಕಾಲೇಜು ಯಶಸ್ವಿಯಾಗಿ ಟೂರ್ನಿ ಆಯೋಜಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದರು.

ಪೂರ್ಣಪ್ರಜ್ಞ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಒಲಿಪಿಂಕ್ಸ್‌ನಲ್ಲಿ ಭಾಗವಹಿಸಬೇಕು ಎಂಬುದು ಹಿರಿಯ ಗುರುಗಳಾದ ವಿಭುದೇಶ ತೀರ್ಥರ ಕನಸಾಗಿತ್ತು. ಅವರು ಹಾಕಿಕೊಟ್ಟ ಹಾದಿಯಲ್ಲಿ 12 ವರ್ಷಗಳ ಕಾಲ ಅದಮಾರು ಮಠದ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿದ ತೃಪ್ತಿ ಇದೆ. ಯೋಗ್ಯ ಶಿಷ್ಯನ ಹೆಗಲಿಗೆ ಶಿಕ್ಷಣ ಸಂಸ್ಥೆಗಳ ಹೊಣೆಗಾರಿಕೆ ವಹಿಸಿ ನಿಶ್ಚಿಂತನಾಗಿದ್ದೇನೆ ಎಂದರು.

ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ಕ್ರೀಡೆಯಲ್ಲಿ ಎದುರಿಸುವ ಸೋಲು, ಗೆಲುವುಗಳು ಜೀವನದಲ್ಲಿ ಕಷ್ಟ ಸುಖಗಳನ್ನು ಎದುರಿಸಲು ಶಕ್ತಿ ಕೊಡುತ್ತದೆ. ವಿದ್ಯಾರ್ಥಿ ಜೀನನದಲ್ಲಿ ಶಿಕ್ಷಣದಷ್ಟೆ ಕ್ರೀಡೆಗೂ ಒತ್ತು ಸಿಗಬೇಕು ಎಂದರು.

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅದಮಾರು ಶಿಕ್ಷಣ ಸಂಸ್ಥೆಯ ಸಾಮಾಜಿಕ ಕಳಕಳಿ ಹಾಗೂ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಮಾದರಿಯಾಗಿದೆ. ವಿಭುದೇಶ ತೀರ್ಥ ಸ್ವಾಮೀಜಿ ದೇಶಭಕ್ತಿಯ ಜತೆಗೆ ಶಿಕ್ಷಣದ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದರು. ಪೂರ್ಣ ಪಜ್ಞ ವಿದ್ಯಾಸಂಸ್ಥೆಗಳಲ್ಲಿ ಪಠ್ಯ ಬೋಧನೆ ಮಾತ್ರವಲ್ಲ, ಸಂಸ್ಕಾರಯುತ ಶಿಕ್ಷಣ, ದೇಶಭಕ್ತಿ ಉದ್ದೀಪನ, ಕ್ರೀಡಾ ಮನೋಭಾವವನ್ನು ಉತ್ತೇಜಿಸುವ ಕಾರ್ಯ ನಡೆಯುತ್ತಿದೆ. ಪೂರ್ಣ ಪ್ರಜ್ಞ ವಿದ್ಯಾಸಂಸ್ಥೆಗಳು ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿವೆ ಎಂದರು.

ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಕಲಿಕಾಸಕ್ತಿಗೆ ಅನುಗುಣವಾಗಿ ಇರಬೇಕು. ಕೌಶಲ ಹಾಗೂ ಮಾನವೀಯ ಮೌಲ್ಯಗಳನ್ನು ಬೋಧಿಸುವ, ಎಲ್ಲ ಜಾತಿ, ಧರ್ಮ, ಮತಗಳನ್ನು ಒಳಗೊಂಡ ಜಾತ್ಯತೀತ ಮಾದರಿಯ ಶಿಕ್ಷಣ ಇಂದಿನ ಅಗತ್ಯ ಎಂದರು.

ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಮಾತನಾಡಿ, ಕ್ರೀಡೆ ಹಾಗೂ ಶಿಕ್ಷಣ ವ್ಯಕ್ತಿಯನ್ನು ಶಿಸ್ತುಬದ್ಧಗೊಳಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್‌, ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಎ.ರಾಘವೇಂದ್ರ, ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಡಾ.ಜಿ.ಎಸ್‌.ಚಂದ್ರಶೇಖರ್‌, ಸಿ.ಎ.ಪ್ರಶಾಂತ್ ಹೊಳ್ಳ, ಡಾ.ಎ.ಪಿ.ಭಟ್‌, ದೈಹಿಕ ಶಿಕ್ಷಣ ನಿರ್ದೇಶಕ ಸುಕುಮಾರ್, ನಗರಸಭಾ ಸದಸ್ಯ ರಮೇಶ್‌ ಕಾಂಚನ್‌ ಇದ್ದರು. ಉಪ ಪ್ರಾಂಶುಪಾಲ ಪ್ರಕಾಶ್‌ ರಾವ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT