ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಲ್ಲಿ ದೇವರನ್ನು ಕಂಡ ವಿಬುಧೇಶ ಶ್ರೀಗಳು

ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ
Last Updated 2 ಜುಲೈ 2021, 13:49 IST
ಅಕ್ಷರ ಗಾತ್ರ

ಉಡುಪಿ: ಪ್ರತಿಮೆಯಲ್ಲಿ ಮಾತ್ರ ದೇವರನ್ನು ಕಾಣುವುದಲ್ಲ, ಜನರಲ್ಲಿ ಕೂಡ ದೇವರನ್ನು ಕಾಣಬೇಕು ಎಂಬ ಮಧ್ವಾಚಾರ್ಯರ ನುಡಿಯಂತೆ ವಿಬುಧೇಶ ತೀರ್ಥ ಸ್ವಾಮೀಜಿಜ್ಞಾನ ಹಂಚಲು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಆರಂಭಿಸಿದರು ಎಂದು ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ವಿಬುಧೇಶ ತೀರ್ಥ ಶ್ರೀಗಳ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಬರಿಯ ಬಡತನ ಮಾತ್ರವಲ್ಲ; ಜ್ಞಾನದ ಬಡತನವೂ ನಿರ್ಮೂಲನೆಯಾಗಬೇಕು. ಜ್ಞಾನ ಸರ್ವರಿಗೂ ಹಂಚಿಕೆಯಾಗಬೇಕು ಎಂಬ ಉದ್ದೇಶದಿಂದ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಹುಟ್ಟಿಕೊಂಡಿತು ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಶ್ರೀಕಾಂತ್‌ ಸಿದ್ದಾಪುರ ಮಾತನಾಡಿ, ವಿಬುಧೇಶ ಶ್ರೀಗಳು ಸಂತರಲ್ಲಿ ವಿಭಿನ್ನ ವ್ಯಕ್ತಿತ್ವ ಹೊಂದಿದ್ದವರು. ಸಂಸ್ಕೃತ, ತುಳು, ಕನ್ನಡ ಭಾಷೆಯ ಜತೆಗೆ ಇಂಗ್ಲೀಷ್ ಕೂಡ ಕಲಿತಿದ್ದರು. ವೇದ, ಉಪನಿಷತ್ತು, ಗೀತೆಯೊಂದಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದರು. ಬಾಲಕನಾಗಿರುವಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ದೇಶಪ್ರೇಮವನ್ನೂ ಮೆರೆದಿದ್ದರು. ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಆಧ್ಯಾತ್ಮದೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಶಿಕ್ಷಣದಿಂದಲೇ ಪ್ರಗತಿ ಎಂಬುದು ಅವರ ನಿಲುವಾಗಿತ್ತು ಎಂದು ಸ್ಮರಿಸಿದರು.

ಪ್ರತಿಭಾ ಫಲಾಯನ ತಪ್ಪಿಸಲು ಬೆಂಗಳೂರಿನಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ವಿಜ್ಞಾನಕ್ಕೆ ಮಹತ್ವ ನೀಡಿದರು. ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕು, ಬದಲಾದ ಸನ್ನಿವೇಶಗಳಿಗೆ ಪೂರಕವಾಗಿ ಅಧ್ಯಯನ ವಿಷಯ ಬದಲಾಗಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು ಎಂದರು.

ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಅವರು ವಿಭುದೇಶ ತೀರ್ಥರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಸುಕನ್ಯಾ ಮೇರಿ, ರಾಘವೇಂದ್ರ, ಡಾ.ಭರತ್, ಪ್ರತಿಮಾ ಬಾಳಿಗ ಇದ್ದರು.

ಸಂಧ್ಯಾ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ.ರಾಮಕೃಷ್ಣ ಉಡುಪ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕ ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT