ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವಕ್ಕಾಗಿ, ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಸ್ಪರ್ಧೆ: ಮುತಾಲಿಕ್‌

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್
Last Updated 17 ಡಿಸೆಂಬರ್ 2022, 14:07 IST
ಅಕ್ಷರ ಗಾತ್ರ

ಉಡುಪಿ: ಹಿಂದುತ್ವಕ್ಕಾಗಿ, ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ, ಡೋಂಗಿ ಹಿಂದುತ್ವವಾದಿಗಳ ವಿರುದ್ಧ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ಶನಿವಾರ ಮಥುರಾ ಹೋಟೆಲ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಐದಾರು ಬಾರಿ ಪ್ರವಾಸ ಮಾಡಿದ್ದು ಉತ್ತಮ ಸ್ಪಂದನ ವ್ಯಕ್ತವಾಗಿದ್ದು ಇಲ್ಲಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.

ಕಾರ್ಕಳ ಕ್ಷೇತ್ರ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಹಿಂದೂ ಕಾರ್ಯಕರ್ತರನ್ನು ಬೆದರಿಸುವ, ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇಂತಹ ಕಾರ್ಯಗಳು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ವಿ.ಸುನಿಲ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಹಿಂದುತ್ವದ ಆಧಾರದ ಗೆದ್ದ ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಕಡೆಗಣಿಸಿದೆ. ಮೂರು ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಅಕ್ರೋಷಿತ ಕಾರ್ಯಕರ್ತರೇ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದರು.

ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಅಡ್ಡಿಪಡಿಸಿದರೆ ಎಲ್ಲ ಕ್ಷೇತ್ರಗಳಲ್ಲಿ ಹಿಂದೂ ಒಕ್ಕೂಟ ಬಿಜೆಪಿ ವಿರುದ್ಧವಾಗಿ ಕೆಲಸ ಮಾಡಲಿದೆ. ಕಾರ್ಕಳದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸದಿದ್ದರೆ ಡಿ.20ರಂದು ರಾಜ್ಯದಾದ್ಯಂತ ಶ್ರೀರಾಮಸೇನೆ ಹಾಗೂ ಹಿಂದೂ ಒಕ್ಕೂಟದಿಂದ ಪ್ರತಿಭಟನೆ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಕಳದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ, ಗೋಹತ್ಯೆ ತಡೆಯಲು ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ. ಹಿಂದುತ್ವಕ್ಕಾಗಿ ಮನೆ ಮನೆಗೂ ತೆರಳಿ ಜೋಳಿಗೆ ಹಿಡಿದು ಮತಭಿಕ್ಷೆ ಬೇಡುತ್ತೇನೆ. ಆರ್ಥಿಕ ನೆರವು ಕೇಳುತ್ತೇನೆ ಎಂದರು.‌

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖಂಡರಾದ ಜಯರಾಮ್ ಅಂಬೆಕಲ್ಲು, ಆನಂದ್ ಶೆಟ್ಟಿ ಅಡ್ಯಾರ್‌, ಗಂಗಾಧರ್ ಕುಲಕರ್ಣಿ, ವಕೀಲ ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT