ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಸೂಕ್ತ ಪರಿಹಾರ ಪ್ಯಾಕೇಜ್ ಘೋಷಿಸಿ

ಸಿಪಿಐಎಂ, ಸಿಪಿಐ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ
Last Updated 15 ಜೂನ್ 2021, 14:57 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್ ಹಾಗೂ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿದ ವರ್ಗಗಳಿಗೆ ಸಮರ್ಪಕ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿ ಸಿಪಿಐಎಂ, ಸಿಪಿಐ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.‌

ಕೋವಿಡ್ ಎರಡನೇ ಅಲೆಯ ಸಂಬಂಧ ತಜ್ಞರ ಎಚ್ಚರಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದ ಪರಿಣಾಮ ಸೋಂಕು ಹೆಚ್ಚಾಗಿ ಸಾವಿನ ಪ್ರಮಾಣ ಏರಿಕೆಯಾಯಿತು. ಲಾಕ್‌ಡೌನ್ ಹೇರಿದ ಪರಿಣಾಮ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಯಿತು. ‌

ಕೋವಿಡ್ ಸಂಕಷ್ಟದ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ, ವಿದ್ಯುತ್ ಹಾಗೂ ರಾಸಾಯನಿಕ ಗೊಬ್ಬರಗಳ ದರ ಏರಿಕೆಯಿಂದ ಸಾರ್ವಜನಿಕರು ಹಾಗೂ ತತ್ತರಿಸಿದ್ದಾರೆ. ಸರ್ಕಾರಕ್ಕೆ ಜನರ ಪ್ರಾಣ ರಕ್ಷಣೆಗಿಂತ ಉದ್ಯಮಿಗಳ ಪರವಾಗಿ ನೀತಿ ರಚಿಸುವುದರಲ್ಲಿ ಆಸಕ್ತಿ ಇರುವುದು ವಿಷಾಧನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋವಿಡ್‌ ಲಾಕ್‌ಡೌನ್ ದುಷ್ಪರಿಣಾಮಗಳನ್ನು ರಾಜ್ಯದ ದುಡಿಯುವ ವರ್ಗ, ವರ್ತಕರು, ಕೈಗಾರಿಕೋದ್ಯಮಿಗಳು, ಬಡವರು, ಆದಿವಾಸಿಗಳು ಅನುಭವಿಸುತ್ತಿದ್ದಾರೆ. ಜನರ ದುಸ್ಥಿತಿಗೆ ಕಾರಣರಾದ ಸರ್ಕಾರಗಳೇ ಈಗ ಸೂಕ್ತ ಪರಿಹಾರ ಪ್ಯಾಕೇಜ್ ಘೋಸಿಸಬೇಕು. ‌ಅಗ್ಗದ ಪ್ರಚಾರ ಪಡೆಯಲು ₹ 1,423 ಕೋಟಿ ಪರಿಹಾರದ ಪ್ಯಾಕೇಜ್ ಘೋಷಿಸಲಾಗಿದೆ. ಇದರಿಂದ ಪ್ರಯೋಜನವಿಲ್ಲ ಎಂದು ಟೀಕಿಸಿದರು.‌

ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡಬೇಕಾದ ಜಿಎಸ್‌ಟಿ ಪಾಲನ್ನು ನೀಡದಿರುವುದು ಖಂಡನೀಯ. ರಾಜ್ಯದ ಕೂಲಿಕಾರರು, ರೈತರು, ಕಸುಬುದಾರರು, ಕಾರ್ಮಿಕರು, ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವು ನೀಡಬೇಕು. ಉಚಿತ ಹಾಗೂ ಸಾರ್ವತ್ರಿಕ ಲಸಿಕಾ ಅಭಿಯಾನಕ್ಕೆ ಕ್ರಮವಹಿಸಬೇಕು. ಬೆಡ್‌, ಲಸಿಕೆ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು. ಕೋವಿಡ್‌ನಿಂದ ಮೃತರಾದ ನಾಗರಿಕರಿಗೆ ಹಾಗೂ ಅನಾಥ ಮಕ್ಕಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಆದಾಯ ತೆರಿಗೆಯಡಿ ಬಾರದ ಕುಟುಂಬಗಳಿಗೆ ಮಾಸಿಕ 10 ಕೆ.ಜಿ ಆಹಾರ ಧಾನ್ಯ, 10,000 ನೆರವು ನೀಡಬೇಕು. ಮಾರುಕಟ್ಟೆ ಇಲ್ಲದೆ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎಕರೆಗೆ ಕನಿಷ್ಠ 25,000 ಪರಿಹಾರ ನೀಡಬೇಕು. ಉದ್ಯೋಗ ಭದ್ರತೆ ನೀಡಬೇಕು, ಉದ್ಯೋಗ ಖಾತ್ರಿಯನ್ನು ನಗರಗಳಿಗೆ ವಿಸ್ತರಿಸಬೇಕು, 200 ದಿನಗಳಿಗೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.‌

ಪ್ರತಿಭಟನೆಯ ನೇತೃತ್ವವನ್ನು ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಸಿಪಿಐ ಕಾರ್ಯದರ್ಶಿ ಸಂಜೀವ ಶೇರಿಗಾರ್, ಆರ್‌ಪಿಐ ಅಧ್ಯಕ್ಷ ಶೇಖರ ಹಾವಂಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT